ಎಲೆಕ್ಟ್ರಾನಿಕ್ ಬಸ್‍ಗಳ ನೆಪದಲ್ಲಿ ಸಾರಿಗೆ ನಿಗಮಗಳ ಖಾಸಗೀಕರಣಕ್ಕೆ ಯತ್ನ: ಸಾರಿಗೆ ನೌಕರರಿಂದ ಪ್ರತಿಭಟನೆಯ ಎಚ್ಚರಿಕೆ

Update: 2022-09-19 15:19 GMT
ಸಾಂದರ್ಭಿಕ ಚಿತ್ರ 

ಬೆಂಗಳೂರು, ಸೆ.19: ‘ರಾಜ್ಯ ಸರಕಾರವು ಪರಿಸರಕ್ಕೆ ಲಾಭವನ್ನು ಮಾಡುವ ಉದ್ದೇಶದಿಂದ ಎಲೆಕ್ಟ್ರಾನಿಕ್ ಬಸ್‍ಗಳನ್ನು ರಸ್ತೆಗಿಳಿಸಲಾಗುತ್ತಿದೆ ಎಂದು ಹೇಳುತ್ತಿದೆ. ಆದರೆ, ಸಾರಿಗೆ ನಿಗಮಗಳನ್ನು ಖಾಸಗೀಕರಣ ಮಾಡುವ ದುರುದ್ದೇಶ ಈ ಯೋಜನೆಯಲ್ಲಿ ಅಡಗಿದೆ’ ಎಂದು ಸಾರಿಗೆ ನಿಗಮಗಳ ನೌಕರರ ಸಮಾನ ಮನಸ್ಕರ ವೇದಿಕೆಯು ಬೇಸರ ವ್ಯಕ್ತಪಡಿಸಿದೆ. 

ಸೋಮವಾರ ಪ್ರೆಸ್‍ಕ್ಲಬ್‍ನಲ್ಲಿ ವೇದಿಕೆ ಮುಖಂಡ ಚಂದ್ರಶೇಖರ್ ಮಾತನಾಡಿ, ‘ಎಲೆಕ್ಟಾನಿಕ್ ಬಸ್‍ಗಳನ್ನು ಸಾರಿಗೆ ನಿಗಮಗಳಲ್ಲಿ ಕಾರ್ಯಾಚರಣೆಯನ್ನು ನಡೆಸಲು ಸರಕಾರವು ಕಾಳಜಿ ವಹಿಸುತ್ತಿದೆ. ಅದಕ್ಕಾಗಿ ಖಾಸಗಿ ಕಂಪನಿಗಳಿಗೆ ಸಹಾಯಧನವನ್ನು ಬಿಡುಗಡೆ ಮಾಡುತ್ತಿದೆ. ಈ ಸಹಾಯಧನವನ್ನು ಸಾರಿಗೆ ನಿಗಮಗಳಿಗೆ ಬಿಡುಗಡೆ ಮಾಡಿದರೆ, ನಿಗಮಗಳು ಅನುಭವಿಸುತ್ತಿರುವ ಆರ್ಥಿಕ ನಷ್ಟದಿಂದ ಪಾರಾಗಬಹುದು’ ಎಂದು ಹೇಳಿದರು. 

‘ಸಾರಿಗೆ ನಿಗಮಗಳು ಸಾರ್ವಜನಿಕ ಸೇವೆಗಾಗಿ ಕಾರ್ಯನಿರ್ವಹಿಸಬೇಕೇ ಹೊರತು ಲಾಭಕ್ಕಾಗಿ ಕೆಲಸವನ್ನು ಮಾಡುವುದಲ್ಲ ಎಂದು ಸರಕಾರವು ಮನವರಿಕೆ ಮಾಡಿಕೊಳ್ಳಬೇಕು. ಲಾಭದ ಉದ್ದೇಶಕ್ಕಾಗಿ ನಿಗಮಗಳನ್ನು ಖಾಸಗೀಕರಣ ಮಾಡಲಾಗುತ್ತಿದೆ. ಹೊರಗುತ್ತಿಗೆ ಆಧಾರದಲ್ಲಿ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುತ್ತಿವೆ. ಈ ಮೂಲಕ ನಿಗಮಗಳನ್ನು ಖಾಸಗೀಕರಣ ಮಾಡಲಾಗುತ್ತಿದೆ. ಈ ಪ್ರವೃತ್ತಿಯನ್ನು ಮುಂದುವರೆಸಿದರೆ, ಮುಂದಿನ ದಿನಗಳಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು’ ಎಂದು ಅವರು ಎಚ್ಚರಿಕೆ ನೀಡಿದರು.

‘ಸಾರಿಗೆ ನಿಗಮಗಳಲ್ಲಿ ಕೆಲಸ ಮಾಡುತ್ತಿರುವ ಚಾಲಕರು ಹಾಗೂ ನಿರ್ವಾಹಕರಿಗೆ ಕಿರುಕುಳವನ್ನು ನೀಡಲಾಗುತ್ತಿದೆ. ಇದರಿಂದ ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮಂತ್ರಿಗಳ ಮಾತನ್ನು ಸರಕಾರದ ಅಧಿಕಾರಿಗಳು ಕೇಳದೆ ಇರುವ ಕಾರಣದಿಂದಾಗಿ ನಿಗಮಗಳಲ್ಲಿ ಇಂತಹ ಬಿಕ್ಕಟ್ಟಿನ ವಾತವರಣ ನಿರ್ಮಾಣವಾಗಿದೆ’ ಎಂದು ಅವರು ಬಿಜೆಪಿ ಸರಕಾರ ವೈಫಲ್ಯವನ್ನು ವಿವರಿಸಿದರು. 

ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳಲ್ಲಿ ಕಾಲಕಾಲಕ್ಕೆ ಚುನಾವಣೆಗಳನ್ನು ನಡೆಸಲಾಗುತ್ತಿಲ್ಲ. ಹಾಗಾಗಿ ಸಂಘಟನಾತ್ಮಕವಾಗಿ ಹೋರಾಟ ಮಾಡಲು ಕಾರ್ಮಿಕರಿಗೆ ಸಾಧ್ಯವಾಗುತ್ತಿಲ್ಲ. ನಿಗಮಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ತಡೆಯಲು ಸರಕಾರಗಳು ವಿಫಲವಾದಾಗ ಕಾರ್ಮಿಕ ಸಂಘಟನೆಗಳು ಕಾರ್ಯಪ್ರವೃತ್ತವಾಗಬೇಕು. 
-ನಾಗರಾಜು, ಸಾರಿಗೆ ನಿಗಮಗಳ ವರ್ಕರ್ಸ್ ಫೆಡರೇಶನ್‍ನ ಪ್ರಧಾನ ಕಾರ್ಯದರ್ಶಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News