ರಾಜಕಾಲುವೆ ಒತ್ತುವರಿ ತೆರವು ನಿರ್ಲಕ್ಷ್ಯ: ಹೈಕೋರ್ಟ್ ಅಸಮಾಧಾನ

Update: 2022-09-19 15:01 GMT

ಬೆಂಗಳೂರು: ಬೆಂಗಳೂರು ನಗರದಲ್ಲಿನ ರಾಜಕಾಲುವೆಗಳ ಒತ್ತುವರಿ ಸಂಬಂಧ ಮಹಾಲೇಖಪಾಲರ(ಸಿಎಜಿ) ವರದಿ ಜಾರಿಗೊಳಿಸದ ಬಿಬಿಎಂಪಿ ಕ್ರಮಕ್ಕೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಈ ಕೂಡಲೇ ಸಿಎಜಿ ವರದಿ ಜಾರಿ ಅನುಷ್ಠಾನಕ್ಕೆ ಮೂವರು ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸುವಂತೆ ಸೂಚನೆ ನೀಡಿದೆ. 

ನಗರದ ರಸ್ತೆ ದುಸ್ಥಿತಿ ಸಂಬಂಧ ವಿಜಯ್ ಮೆನನ್ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಸಿಜೆ ಅಲೋಕ್ ಆರಾಧೆ ನೇತೃತ್ವದ ವಿಭಾಗೀಯ ಪೀಠ, ಈ ಸೂಚನೆ ನೀಡಿದೆ.

ಹೊಸದಾಗಿ ರಚನೆಯಾಗುವ ಸಮಿತಿ ಸಿಎಜಿ ವರದಿಯಲ್ಲಿ ಪ್ರಸ್ತಾಪವಾಗಿರುವ ರಾಜಕಾಲುವೆ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಬೇಕು ಹಾಗೂ 15 ದಿನಗಳಿಗೊಮ್ಮೆ ವರದಿ ಜಾರಿಯ ವಿವರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಆದೇಶಿಸಿ ವಿಚಾರಣೆಯನ್ನು ಸೆ.30ಕ್ಕೆ ಮುಂದೂಡಿದೆ.

2021ರ ಸೆಪ್ಟೆಂಬರ್ ನಲ್ಲಿ ಸಿಎಜಿ ವರದಿ ಬಂದಿದ್ದರೂ ವರದಿಯಲ್ಲಿ ಪ್ರಸ್ತಾಪಿಸಲಾಗಿದ್ದ ರಾಜಕಾಲುವೆ ಒತ್ತುವರಿ ತೆರವಿಗೆ ಸ್ಪಂದಿಸದೆ ಕೇವಲ ಅರೆಬರೆ ಒತ್ತುವರಿ ತೆರವು ಮಾಡುತ್ತಿದ್ದ ಬಿಬಿಎಂಪಿ ಕ್ರಮಕ್ಕೆ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.

ಸಿಎಜಿ ವರದಿಯಲ್ಲಿ 2,626 ಒತ್ತುವರಿಯಾಗಿದೆ ಎಂದು ಸೂಚಿಸಲಾಗಿತ್ತು. ಅದರ ಪೈಕಿ 2,024 ಒತ್ತುವರಿ ತೆರವುಗೊಳಿಸಲಾಗಿದ್ದು, 602 ಒತ್ತುವರಿ ತೆರವು ಬಾಕಿ ಇದೆ ಎಂದು ಬಿಬಿಎಂಪಿ ಪರ ವಕೀಲರು ಪೀಠಕ್ಕೆ ತಿಳಿಸಿದರು. ವಕೀಲರ ಹೇಳಿಕೆ ನಂತರ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಉಳಿದ ಒತ್ತುವರಿಗಳ ತೆರವಿಗೆ ಕ್ರಮ ಕೈಗೊಳ್ಳಬೇಕು ಹಾಗೂ ಒಂದು ವೇಳೆ ನ್ಯಾಯಾಲಯದ ಆದೇಶ ಪಾಲನೆ ಮಾಡದಿದ್ದರೆ ಅದನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ ಎಂದು ಹೈಕೋರ್ಟ್ ಎಚ್ಚರಿಕೆ ನೀಡಿದೆ. 

ರಸ್ತೆಗಳಿಗೆ ಡಾಂಬರ್: ನಗರದ ಎಲ್ಲ ವಲಯಗಳಲ್ಲಿ 2,500 ಕಿಲೋಮೀಟರ್ ಇತರೆ ರಸ್ತೆಗಳಿವೆ. ಇವುಗಳಲ್ಲಿನ ರಸ್ತೆಗಳ ಡಾಂಬರ್ ಹಾಕಲು ಟೆಂಡರ್ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಬಿಬಿಎಂಪಿ ಪರ ವಕೀಲರು ಹೈಕೋರ್ಟ್‍ಗೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಎಷ್ಟು ಗುಂಡಿಗಳಿವೆ ಎಂದು ಪ್ರಶ್ನಿಸಿತು. ಈ ವೇಳೆ ಬಿಬಿಎಂಪಿ ಪರ ವಕೀಲರು, ಪಾಲಿಕೆಯ ಎಲ್ಲ ವಲಯಗಳಲ್ಲಿ ರಸ್ತೆಗಳನ್ನು ಡಾಂಬರ್ ಮಾಡಲಾಗುವುದು. ಮುಂದಿನ 4 ತಿಂಗಳಲ್ಲಿ ಎಲ್ಲ ರಸ್ತೆ ಗುಂಡಿಗಳನ್ನು ಮುಚ್ಚಲಾಗುವುದು ಎಂದು ನ್ಯಾಯಪೀಠಕ್ಕೆ ಭರವಸೆ ನಿಡಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿನ ರಸ್ತೆ ಗುಂಡಿಗಳನ್ನು ಮುಚ್ಚುವ ಸಂಬಂಧ ಪ್ರಾರಂಭಿಸಿರುವ ವೆಬ್‍ಸೈಟ್ ಕುರಿತು ಹೆಚ್ಚಿನ ಪ್ರಚಾರ ನೀಡಬೇಕು. ಅಲ್ಲದೆ, ಸಾರ್ವಜನಿಕರು ನೀಡುವ ರಸ್ತೆಗುಂಡಿಗಳ ಕುರಿತ ಮಾಹಿತಿಯನ್ನು ವೆಬ್‍ಸೈಟ್‍ನಲ್ಲಿ ಲಭ್ಯವಾಗುವಂತೆ ಮಾಡಬೇಕು. ಜೊತೆಗೆ, ಅದನ್ನು ಸರಿಪಡಿಸಿರುವುದನ್ನು ಫೋಟೋ ಸಮೇತ ಅಪ್‍ಲೋಡ್ ಮಾಡಬೇಕು ಎಂದು ಪೀಠ ಸೂಚನೆ ನೀಡಿತು. ಅಲ್ಲದೆ, ಬೆಂಗಳೂರು ನಗರದಲ್ಲಿ ಗುಂಡಿ ರಹಿತ ರಸ್ತೆಗಳನ್ನು ಸಾರ್ವಜನಿಕರಿಗೆ ಒದಗಿಸಬೇಕು ಎಂದು ಇದೇ ವೇಳೆ ನ್ಯಾಯಪೀಠವು ನಿರ್ದೇಶನ ನೀಡಿದೆ.

ಬಿಬಿಎಂಪಿ ವ್ಯಾಪ್ತಿಯ 2,010 ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ. ಇನ್ನು, 221 ಗುಂಡಿಗಳನ್ನು ಮುಚ್ಚಬೇಕಾಗಿದೆ. ಅವುಗಳನ್ನು ಮುಂದಿನ ಹತ್ತು ದಿನದಲ್ಲಿ ಮುಚ್ಚಲಾಗುವುದು ಎಂದು ಬಿಬಿಎಂಪಿ ಪರ ವಕೀಲರು ಹೈಕೋರ್ಟ್‍ಗೆ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News