ಮಂಡ್ಯ: ಕಬ್ಬು ಬೆಳೆಗಾರರ ಸಮಸ್ಯೆಗೆ ಸ್ಪಂದಿಸದಿದ್ದರೆ ದಸರಾ ದಿನ ರಸ್ತೆ ತಡೆ; ರೈತ ಸಮಾವೇಶದಲ್ಲಿ ನಿರ್ಣಯ

Update: 2022-09-19 17:31 GMT

ಮಂಡ್ಯ, ಸೆ.19: ಸರಕಾರ ಕಬ್ಬು ಬೆಳೆಗಾರ ಸಮಸ್ಯೆಗೆ ಕೂಡಲೇ ಸ್ಪಂದಿಸದಿದ್ದಲ್ಲಿ ಮೈಸೂರು ದಸರಾ ದಿನದಂದು ಮೈಸೂರಿನ ನಾಲ್ಕು ದಿಕ್ಕುಗಳಲ್ಲೂ ಟ್ರ್ಯಾಕ್ಟರ್, ಎತ್ತಿನ ಗಾಡಿ, ಹಸು, ಕರು, ಎಮ್ಮೆ, ಆಡು-ಕುರಿ ಕೋಳಿ, ನಾಯಿಗಳ ಜೊತೆ ರಸ್ತೆಗೆ ಇಳಿದು ಪ್ರತಿಭಟನೆ ನಡೆಸಲು ಸೋಮವಾರ ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್‍ನಲ್ಲಿ ನಡೆದ ಬೃಹತ್ ರೈತ ಸಮಾವೇಶದಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಕಳೆದ ಜುಲೈ 11 ರಂದು ನಡೆದ ಮಾತುಕತೆಯಲ್ಲಿ ಒಂದುವಾರದೊಳಗೆ ಕಬ್ಬು ಬೆಳೆಗಾರರಿಗೆ ನ್ಯಾಯ ಒದಗಿಸುದಾಗಿ ಮಾತುಕೊಟ್ಟಿದ್ದ ಮುಖ್ಯಮಂತ್ರಿಗಳು ಆ ಮಾತನ್ನು ಉಳಿಸಿಕೊಳ್ಳದೆ ತಪ್ಪಿದ್ದಾರೆಂದು ರಾಜ್ಯ ರೈತಸಂಘದ ವತಿಯಿಂದ ನಡೆದ ಸಮಾಶವೇಶದಲ್ಲಿ ತೀವ್ರವಾಗಿ ಖಂಡಿಸಿತು. ಕೂಡಲೇ ಟನ್ ಕಬ್ಬಿಗೆ 4,500 ರೂ. ನಿಗದಿಗೆ ಆಗ್ರಹಿಸಿತು.

ಕೆಆರ್‍ಎಸ್ ಅಣೆಕಟ್ಟೆ ಸುತ್ತಮುತ್ತ 20 ಕಿ.ಮೀ. ವ್ಯಾಪ್ತಿಯಲ್ಲಿ ಹಾಗೂ ಸಂಪರ್ಕ ಕಲ್ಪಿಸುವ ಎಲ್ಲಾ ನಾಲೆಗಳ 1 ಕಿ.ಮೀ. ವ್ಯಾಪ್ತಿಯಲ್ಲಿ ಶಾಶ್ವತವಾಗಿ ಗಣಿಗಾರಿಕೆ ಮಾಡಬೇಕು. ಕೇಂದ್ರ ಸರಕಾರ ವಿದ್ಯುತ್ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ಖಾಸಗೀಕರಕ್ಕೆ ಅನುವು ಮಾಡಿಕೊಡುವ ಕೇಂದ್ರ ಸರಕಾರ ವಿದ್ಯುತ್ ಕಾಯ್ದೆಗೆ ತಿದ್ದುಪಡಿ ಮಸೂದೆಯನ್ನು ಹಿಂಪಡೆಯಬೇಕು. ಪಂಪ್‍ಸೆಟ್‍ಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಸಲು ಮುಂದಾದರೆ ತೀವ್ರ ವಿರೋಧ ಒಡ್ಡುವುದಾಗಿ ಸಮಾವೇಶ ಎಚ್ಚರಿಸಿತು.

ಕರನಿರಾಕರಣೆ ಸಂದರ್ಭದಲ್ಲಿ ಉಳಿಸಿಕೊಂಡಿರುವ ಗೃಹ ವಿದ್ಯುತ್ ಬಾಕಿಯನ್ನು ಸಂಪೂರ್ಣ ಮನ್ನಾ ಮಾಡಬೇಕು. ಕಾಫಿ ಬೆಳೆಗಾರರ ಪಂಪ್‍ಸೆಟ್‍ಗಳಿಗೆ ಮೀಟರ್ ಅಳವಡಿಕೆ ಬಿಟ್ಟು ಏಕರೂಪದ ವಿದ್ಯುತ್ ಸರಬರಾಜು ಮಾಡಬೇಕು. ಆಹಾರ ಪದಾರ್ಥ ಹಾಗೂ ಬೆಲ್ಲದ ಮೇಲಿನ ಜಿಎಸ್‍ಟಿ ಕೈಬಿಡಬೇಕು. ರೈತ ವಿರೋಧಿ ಎಪಿಎಂಸಿ, ಭೂ ಸುಧಾರಣೆ ತಿದ್ದುಪಡಿ ಕಾಯ್ದೆ, ಜಾನುವಾರು ಹತ್ಯೆ ನಿಷೇಧ ಕಾಯ್ದೆ ರದ್ದುಪಡಿಸಬೇಕು. ಡಾ.ಸ್ವಾಮಿನಾಥನ್ ವರದಿ ಪ್ರಕಾರ ರೈತರ ಎಲ್ಲಾ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದು ಒತ್ತಾಯಿಸಲಾಯಿತು.

ಮಂಡ್ಯ ಹಾಲು ಒಕ್ಕೂಟದ ಹಾಲಿಗೆ ನೀರು ಹಗರಣ ಸಿಬಿಐ ತನಿಖೆಗೆ ಒಪ್ಪಿಸಬೇಕು. ಹೊಸ ನೇಮಕಾತಿಗೆ ಸರಕಾರ ಅವಕಾಶ ನೀಡಬಾರದು. ರಾಜ್ಯದ ಎಲ್ಲಾ ಬಗರ್‍ಹುಕುಂ ಸಾಗುವಳಿದಾರರ ಸಮಸ್ಯೆ ಬಗೆಹರಿಸಬೇಕು. ಅತೀವೃಷ್ಟಿಯಿಂದಾಗ ಬೆಳೆಹಾನಿಗೆ ವೈಜ್ಞಾನಿಕ ಪರಿಹಾರ ನೀಡಬೇಕು. ಕಂದಾಯ ಇಲಾಖೆಯಲ್ಲಿನ ಭ್ರಷ್ಟಾಚಾರ ತಪ್ಪಿಸಬೇಕು. ಇತರೆ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದರೆ ಉಗ್ರ ಚಳವಳಿ ನಡೆಸಲಾಗುವುದು ಎಂದು ಸಮಾವೇಶ ಎಚ್ಚರಿಸಿತು.

ಅಧಿಕಾರಕ್ಕೆ ಬಂದ ಮೊದಲ ದಿನವೇ ರೈತರ ಸಾಲಮನ್ನಾ ಮಾಡುವುದಾಗಿ ನರೇಂದ್ರ ಮೋದಿ ಹೇಳಿ ಎಂಟು ವರ್ಷಗಳು ಮುಗಿದಿವೆ. ಸುಳ್ಳು ಹೇಳತ್ತಾ ರೈತರು, ಜನಸಾಮಾನ್ಯರಿಗೆ ವಂಚನೆ ಮಾಡುತ್ತಿದ್ದಾರೆ. ಬದಲಾಗಿ ರೈತವಿರೋಧಿ ಕಾಯ್ದೆಗಳ ಮೂಲಕ ಕೃಷಿ ಕ್ಷೇತ್ರವನ್ನು ಬಂಡವಾಳಶಾಯಿ, ಕಾರ್ಪೋರೇಟ್ ಸಂಸ್ಥೆಗಳಿಗೆ ಮಾರಾಟ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಸಮಾವೇಶ ಉದ್ಘಾಟಿಸಿದ ರಾಜ್ಯ ರೈತಸಂಘದ ಗೌರವಾಧ್ಯಕ್ಷ ಚಾಮರಸಮಾಲಿ ಪಾಟೀಲ್ ವಾಗ್ದಾಳಿ ನಡೆಸಿದರು.

ಪಂಪ್‍ಸೆಟ್‍ಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಸಲು ಮುಂದಾದರೆ ಕಿತ್ತು ಎಲ್ಲವನ್ನೂ ಕನ್ನಂಬಾಡಿ ಕಟ್ಟೆಗೆ ಎಸೆಯಬೇಕು. ಸರಕಾರಗಳ ಜನವಿರೋಧಿ ನೀತಿಗಳ ವಿರುದ್ಧ ರೈತರು, ದಲಿತರು, ಮಹಿಳೆಯರು, ಅಲ್ಪಸಂಖ್ಯಾತರು, ದುಡಿಯವ ವರ್ಗ, ವಿದ್ಯಾರ್ಥಿಗಳು, ಶೋಷಿತರು , ಮಹಿಳಾ, ಪ್ರಗತಿಪರ, ವಿದ್ಯಾರ್ಥಿಗಳು ಒಗ್ಗಟ್ಟಾಗಿ ವಿಧಾನಸೌಧದಲ್ಲಿ ರೈತಪರ ಧ್ವನಿ ಎತ್ತುವವರನ್ನು ಗೆಲ್ಲಿಸಬೇಕು ಎಂದು ಅವರು ಕರೆ ನೀಡಿದರು.

ಸಂಘದ ಗೌರವಾಧ್ಯಕ್ಷೆ ನಂದಿನಿ ಜಯರಾಂ ಮಾತನಾಡಿ, ವಿಶ್ವ ವಾಣಿಜ್ಯ ಸಂಘಟನೆ ಸೇರಿದಂತೆ ಹಲವು ವಿದೇಶಗಳ ಸರಕಾರಗಳು ರೈತರ ಮೇಲೆ ಸವಾರಿ ಮಾಡಲು ಹೊರಟಿವೆ. ರೈತರು ರಾಜಕೀಯ ಸಾಕ್ಷರರಾಗಿ ರೈತಪರವಾದವರನ್ನು ಚುನಾವಣೆಯಲ್ಲಿ ಗೆಲ್ಲಿಸಬೇಕು. ಜತೆಗೆ, ಸರಕಾರಗಳ ರೈತವಿರೋಧಿ, ಜನವಿರೋಧಿ ನೀತಿಗಳ ವಿರುದ್ಧ ಹಳ್ಳಿಹಳ್ಳಿಗಳಲ್ಲಿ ಸಂಘಟಿರಾಗಿ ಸಿಡಿದೇಳಬೇಕು ಎಂದು ಸಲಹೆ ನೀಡಿದರು.

ರಾಜ್ಯ ರೈತಸಂಘದ ಕಾರ್ಯಾಧ್ಯಕ್ಷ ವೀರಸಂಗಯ್ಯ, ಸಂಘದ ವರಿಷ್ಠೆ ಸುನಿತಾ ಪುಟ್ಟಣ್ಣಯ್ಯ, ಭೂಗರ್ಭಶಾಸ್ತ್ರಜ್ಞ ಡಾ.ಎಚ್.ಟಿ.ಬಸವರಾಜಪ್ಪ, ಮಧುಚಂದನ್, ಪ್ರಸನ್ನ ಎನ್ ಗೌಡ, ಸೇರಿದಂತೆ ಹಲವರು ಮಾತನಾಡಿದರು.ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಅಧ್ಯಕ್ಷತೆವಹಿಸಿದ್ದರು. ಎಸ್.ಬಿ.ಪುಟ್ಟಸ್ವಾಮಯ್ಯ, ಕೆ.ಎಸ್.ಬಾಲಚಂದ್ರ, ಯಧುಶೈಲಾ ಸಂಪತ್, ಜಿ.ಎಸ್.ಲಿಂಗಪ್ಪಾಜಿ, ಎಸ್.ಕೆ.ರವಿಕುಮಾರ್, ಇತರ ಮುಖಂಡರು ಉಪಸ್ಥಿತರಿದ್ದರು.

“ಯುವಕರಾದ ದರ್ಶನ್ ಪುಟ್ಟಣ್ಣಯ್ಯ, ಪ್ರಸನ್ನ ಎನ್. ಗೌಡ, ಮಧು ಚಂದನ್ ಭವಿಷ್ಯದ ನಾಯಕರಾಗಿ ಮಂಡ್ಯದಲ್ಲಿ ಚಳವಳಿಮುಖಿಯಾದಂತಹ ಹೊಸ ನಡೆನುಡಿಯ ರಾಜಕಾರಣ ಹುಟ್ಟುಹಾಕಿ ರಾಜ್ಯದಲ್ಲಿ ನೈತಿಕ ರಾಜಕಾರಣ ಚಳವಳಿಗೆ ನಾಂದಿ ಹಾಡಲಿದ್ದಾರೆ. ರೈತ ಚಳವಳಿ ಮಂಡ್ಯದಿಂದ ಮರುಹುಟ್ಟು ಪಡೆಯಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕನಿಷ್ಠ 5 ಮಂದಿಯನ್ನು ರೈತಸಂಘದಿಂದ ವಿಧಾನಸಭೆಗೆ ಕಳುಹಿಸಲು ಕಾರ್ಯಕರ್ತರು ಸಿದ್ದರಾಗಬೇಕು.  ಸಂಘಟನೆಯ ಮುಖಂಡರೆಲ್ಲಾ ನಿಮ್ಮ ಜತೆ ಟೊಂಕಕಟ್ಟಿ ನಿಲ್ಲುತ್ತೇವೆ.”
- ಬಡಗಲಪುರ ನಾಗೇಂದ್ರ, ರೈತಸಂಘದ ರಾಜ್ಯಾಧ್ಯಕ್ಷರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News