ಶಿವಮೊಗ್ಗ | ಗುಂಡೇಟಿನಿಂದ ಯುವಕ ಮೃತಪಟ್ಟ ಪ್ರಕರಣಕ್ಕೆ ತಿರುವು: ಇಬ್ಬರು ಆರೋಪಿಗಳ ಬಂಧನ
ಶಿವಮೊಗ್ಗ: ಹೊಸನಗರ ತಾಲೂಕಿನ ನಗರ ಹೋಬಳಿಯ ನೇಗಿಲೋಣಿ ಗ್ರಾಮದಲ್ಲಿ ಇತ್ತೀಚೆಗೆ ಗುಂಡೇಟಿನಿಂದ ಯುವಕನೋರ್ವ ಮೃತಪಟ್ಟಿರುವ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ನೇಗಿಲೋಣಿ ಗ್ರಾಮದ ಕೀರ್ತಿ(30) ಹಾಗೂ ಕ್ಯಾವೆ ಗ್ರಾಮದ ನಾಗರಾಜ (39) ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ.
ಆಗಸ್ಟ್ 26ರಂದು ನೇಗಿಲೋಣಿ ರಾವೆ ಗ್ರಾಮದಲ್ಲಿ ಅಂಬರೀಷ್ ಪರವಾನಗಿ ಇಲ್ಲದ ನಾಡಬಂದೂಕು ತೆಗೆದುಕೊಂಡು ಸ್ನೇಹಿತ ಕೀರ್ತಿಯೊಂದಿಗೆ ಕಾಡುಕೋಣಗಳನ್ನು ಓಡಿಸಲು ತೋಟಕ್ಕೆ ಹೋಗಿದ್ದ. ಜೊತೆಗಿದ್ದ ಕೀರ್ತಿ ವಾಪಸ್ ಮನೆಗೆ ಮರಳಿದ ನಂತರ ಅಂಬರೀಷ್ ತನ್ನ ಮನೆಗೆ ವಾಪಸ್ ಬರುವಾಗ, ಗಾಳಿಗುಡ್ಡದ ಕಲ್ಲು ಬಂಡೆ ಮೇಲೆ ಬಿದ್ದು, ಬಂದೂಕಿನ ಕುದುರೆಗೆ ರಬ್ಬರ್ ಬೂಟ್ ತಾಗಿ ಗುಂಡು ಸಿಡಿದು ಎದೆಯ ಕೆಳಭಾಗಕ್ಕೆ ತಗಲಿ ಮೃತಪಟ್ಟಿದ್ದ ಎಂದು ದೂರು ನೀಡಲಾಗಿತ್ತು.
ಪ್ರಕರಣಕ್ಕೆ ತಿರುವು: ಮರಣೋತ್ತರ ಪರೀಕ್ಷೆಯಲ್ಲಿ ಅಂಬರೀಷ್ ನ ಸಾವಿಗೆ ನಾಡ ಬಂದೂಕಿನಿಂದ ಹಾರಿದ ಗುಂಡುಗಳಾಗಿರದೆ ಎಸ್‌ಬಿ ಬಿಎಲ್ ಬಂದೂಕಿನಿಂದ ಹಾರಿರುವುದು ದೃಢಪಟ್ಟಿತ್ತು. ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಾಗ, ದಯಾನಂದ ಎಂಬಾತನಿಗೆ ಸೇರಿದ ಎಸ್‌ಬಿಬಿಎಲ್ ಬಂದೂಕು ಪಡೆದು ತೀರ್ಥಹಳ್ಳಿಯ ಕಡ್ಲೂರಿನ ಗೋಪಾಲ ಮತ್ತು ಮಹೇಶ್ ಎಂಬುವವರಿಂದ ಗುಂಡುಗಳನ್ನು(ತೋಟ) ಪಡೆದು ಪಡೆದು ಶಿಕಾರಿ ಮಾಡಿರುವುದು ಬೆಳಕಿಗೆ ಬಂದಿದೆ.
ಇದನ್ನೂ ಓದಿ: ದಾವಣಗೆರೆ: ಸಾಲುಮರದ ವೀರಾಚಾರ್ ಆತ್ಮಹತ್ಯೆ; ನ್ಯಾಯ ಸಿಗದೆ ಮನನೊಂದಿದ್ದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪರಿಸರ ಪ್ರೇಮಿ
ಮೃತಪಟ್ಟ ಅಂಬರೀಷ್ , ಬಂಧಿತ ಆರೋಪಿಗಳಾದ ಕೀರ್ತಿ ಹಾಗೂ ನಾಗರಾಜ ಒಟ್ಟಾಗಿ ಅಂದು ಶಿಕಾರಿ ಮಾಡಲು ತೆರಳಿದ್ದರು. ಈ ವೇಳೆ ನಾಗರಾಜನ ಬಳಿ ಇದ್ದ ಎಸ್‌ಬಿಬಿಎಲ್ ಬಂದೂಕನ್ನು ತೆಗೆದು ಕೊಂಡ ಅಂಬರೀಶ ಕಲ್ಲುಬಂಡೆಗಳ ನಡುವೆ ನಡೆಯುವಾಗ ಜಾರಿಬಿದ್ದು ಬಂದೂಕು ಆಕಸ್ಮಿಕ ಫೈರ್ ಆಗಿ ಮೃತಪಟ್ಟಿರುವುದು ತಿಳಿದುಬಂದಿದೆ. ಕೃತ್ಯವನ್ನು ಮರೆಮಾಚುವ ಉದ್ದೇಶ ದಿಂದ ಆರೋಪಿಗಳು ಎಸ್‌ಬಿಬಿಎಲ್ ಬಂದೂಕನ್ನು ಸ್ಥಳದಿಂದ ಬದಲಾಯಿಸಿ ಅಂಬರೀಶನ ನಾಡಬಂದೂಕನ್ನು ಸ್ಥಳದಲ್ಲಿ ಇಟ್ಟು ಅದರಿಂದ ಹಾರಿದ ಗುಂಡಿನಿಂದಲೇ ಅಂಬರೀಷ್ ಮೃತಪಟ್ಟಿದ್ದ ಎಂದು ನಂಬಿಸಲು ಹೊರಟಿದ್ದರು ಎನ್ನಲಾಗಿದೆ.
ಶಿಕಾರಿ ಮಾಡಿದ ಕಾಡುಬೆಕ್ಕು ಹಾಗೂ ಎಸ್‌ಬಿಬಿಎಲ್ ಬಂದೂಕಿನಿಂದ ಫೈರ್ ಆದ ತೋಟವನ್ನು ನಾಶಪಡಿಸಿ,ಸಾಕ್ಷಿ ನಾಶ ಮಾಡಿರುವುದನ್ನು ಆರೋಪಿಗಳು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.