ಯಾರಿಗೂ ಅನ್ಯಾಯ ಆಗದ ರೀತಿಯಲ್ಲಿ ಮೀಸಲಾತಿ ಕಲ್ಪಿಸಲು ಕ್ರಮ: ಸಿಎಂ ಬೊಮ್ಮಾಯಿ

Update: 2022-09-20 11:57 GMT

ಬೆಂಗಳೂರು, ಸೆ. 20: ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ(ಎಸ್ಸಿ-ಎಸ್ಟಿ) ಮೀಸಲಾತಿ ಪ್ರಮಾಣ ಹೆಚ್ಚಳ, ಕುರುಬ, ಹಾಲುಮತ, ಗೊಲ್ಲ ಸಮುದಾಯವನ್ನು ಎಸ್ಟಿಗೆ, ಲಿಂಗಾಯತ ಪಂಚಮಸಾಲಿ ಪ್ರವರ್ಗ-2‘ಎ'ಗೆ ಸೇರ್ಪಡೆ ಸಂಬಂಧ ಯಾರಿಗೂ ಅನ್ಯಾಯ ಆಗದಂತೆ ಪರಿಶೀಲಿಸಿ, ಅಧ್ಯಯನ ವರದಿಯನ್ನು ಆಧರಿಸಿ ಕ್ರಮ ಕೈಗೊಳ್ಳಲಾಗುವುದು' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.

ಮಂಗಳವಾರ ವಿಧಾನಸಭೆ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಆಡಳಿತ ಪಕ್ಷದ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಪ್ರಸ್ತಾಪಕ್ಕೆ ಉತ್ತರಿಸಿದ ಅವರು, ‘ಯಾವುದೇ ವರ್ಗಕ್ಕೆ ಮೀಸಲಾತಿ ಹೆಚ್ಚಿಸಬೇಕೆಂದರೆ ತನ್ನದೆ ಆದ ಕಾನೂನು ಇದೆ. ಸುಪ್ರೀಂ ಕೋರ್ಟ್ ಮಧ್ಯಪ್ರವೇಶ ಮಾಡಿ ತೀರ್ಪು ಅನ್ನು ನೀಡಿದೆ. ಮೀಸಲಾತಿ ಮಿತಿ ಶೇ.50ಕ್ಕಿಂತ ಮೀರುವಂತಿಲ್ಲ ಎಂದು ನಿರ್ಬಂಧವನ್ನು ಹೇರಿದೆ. ಹಲವು ಸಮುದಾಯಗಳಿಂದ ಮೀಸಲಾತಿ ಹೆಚ್ಚಳದ ಬೇಡಿಕೆಗಳಿವೆ' ಎಂದರು.

‘ಶೈಕ್ಷಣಿಕ, ಸಾಮಾಜಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕಲ್ಪಿಸಬೇಕು. ಈ ಹಿಂದೆ ಅಧ್ಯಯನ ವರದಿ ಇಲ್ಲದೆ ಮೀಸಲಾತಿ ಪ್ರಮಾಣ ಹೆಚ್ಚಿದ್ದಕ್ಕೆ ಕೋರ್ಟ್ ಆಕ್ಷೇಪಿಸಿದೆ. ಹೀಗಾಗಿ ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 3 ‘ಬಿ'ಯಿಂದ 2‘ಎ'ಗೆ ಸೇರ್ಪಡೆ ಸಂಬಂಧ ಹೋರಾಟ ಮಾಡುತ್ತಿದ್ದಾರೆ. ಎಸ್ಟಿ ಸಮುದಾಯದ ಮೀಸಲಾತಿ ಪ್ರಮಾಣ ಹೆಚ್ಚಳದ ಬೇಡಿಕೆಯೂ ಇದೆ. ಹೀಗಾಗಿ ಅಧ್ಯಯನಕ್ಕೆ ಸಮಿತಿ ರಚನೆ ಮಾಡಲಾಗಿದೆ' ಎಂದು ಅವರು ತಿಳಿಸಿದರು.

‘ಯಾವುದೇ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವ ಸಂದರ್ಭದಲ್ಲಿ ಮತ್ತೊಂದು ಸಮುದಾಯಕ್ಕೆ ಅನ್ಯಾಯ ಆಗಬಾರದು. ಇದೊಂದು ಸೂಕ್ಷ್ಮ ವಿಚಾರ. ಹೀಗಾಗಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು. ಪಂಚಮಸಾಲಿ ಸಮುದಾಯದ ವಿಚಾರದಲ್ಲಿ ಕುಲಶಾಸ್ತ್ರಿಯ ಅಧ್ಯಯನ ಆಗಬೇಕು. ವರದಿ ಬಂದ ಕೂಡಲೇ ಪರಿಶೀಲಿಸಿ ಮೀಸಲಾತಿ ಕಲ್ಪಿಸುವ ಸಂಬಂಧ ತೀರ್ಮಾನ ಮಾಡಲಾಗುವುದು' ಎಂದು ಅವರು ಭರವಸೆ ನೀಡಿದರು.

ಧರಣಿ ಸತ್ಯಾಗ್ರಹ: ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ 2ಎ ಮೀಸಲಾತಿ ಕಲ್ಪಿಸಬೇಕೆಂದು ಆಗ್ರಹಿಸಿ ಸರಕಾರದ ಉತ್ತರಕ್ಕೆ ಆಕ್ಷೇಪಿಸಿದ ಬಸನಗೌಡ ಪಾಟೀಲ್ ಯತ್ನಾಳ್, ಸ್ಪೀಕರ್ ಪೀಠದ ಮುಂದಿನ ಬಾವಿಗಿಳಿದು ಧರಣಿ ನಡೆಸಿದರು. ಅವರಿಗೆ ಕಾಂಗ್ರೆಸ್ ಸದಸ್ಯೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಜೊತೆಗೂಡಿದರು. ‘ಸರಕಾರ ಸ್ಪಷ್ಟ ಉತ್ತರ ನೀಡಿದೆ, ಸೂಕ್ಷ್ಮ ವಿಚಾರವಾಗಿದ್ದು ಸದಸ್ಯರು ತಮ್ಮ ಸ್ಥಾನಕ್ಕೆ ತೆರಳಬೇಕು' ಎಂದು ಸ್ಪೀಕರ್ ಮನವೊಲಿಕೆ ಬಳಿಕ ಇಬ್ಬರು ಸದಸ್ಯರು ತಮ್ಮ ಧರಣಿಯನ್ನು ಕೈಬಿಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News