ಹೆಸರು, ಉದ್ದಿನಕಾಳು ಬೆಂಬಲ ಬೆಲೆಗೆ ಖರೀದಿ: ಸಚಿವ ಎಸ್.ಟಿ.ಸೋಮಶೇಖರ್

Update: 2022-09-20 12:08 GMT

ಬೆಂಗಳೂರು, ಸೆ. 20: 2022-23ನೆ ಸಾಲಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ ಹೆಸರುಕಾಳು ಮತ್ತು ಉದ್ದಿನಕಾಳುಖರೀದಿಗೆ ಹಲವು ಜಿಲ್ಲೆಗಳಲ್ಲಿ ಅವಕಾಶ ಮಾಡಿಕೊಡಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.

ಮಂಗಳವಾರ ವಿಧಾನ ಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯ ಎಂ.ನಾಗರಾಜು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಗದಗ, ಧಾರವಾಡ, ಹಾವೇರಿ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಕೊಪ್ಪಳ, ಕಲಬುರಗಿ, ಯಾದಗಿರಿ, ಬೀದರ್, ತುಮಕೂರು, ಹಾಸನ, ಮೈಸೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಹೆಸರುಕಾಳು ಖರೀದಿಗೆ ಹಾಗೂ ಗದಗ, ಧಾರವಾಡ, ಹಾವೇರಿ, ಬೆಳಗಾವಿ, ವಿಜಯಪುರ, ಕಲಬುರಗಿ, ಯಾದಗಿರಿ, ಬೀದರ್ ಮತ್ತು ಮೈಸೂರು ಜಿಲ್ಲೆಗಳಲ್ಲಿ ಉದ್ದಿನಕಾಳನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿ ಮಾಡಲು ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದರು. 

ಕೃಷಿ ಉತ್ಪನ್ನ ಮಾರುಕಟ್ಟೆಗಳು ವೈಜ್ಞಾನಿಕವಾಗಿ ಕನಿಷ್ಠ ಮತ್ತು ಗರಿಷ್ಠ ಬೆಲೆ ನಿಗದಿ ಮಾಡುವ ಅಧಿಕಾರ ಹೊಂದಿಲ್ಲ. ಅಲ್ಲದೆ, ಕೇಂದ್ರ ಸರಕಾರದ ಕೃಷಿ ವೆಚ್ಚ ಮತ್ತು ಬೆಲೆ ಆಯೋಗ ಮಾರ್ಗಸೂಚಿಯನ್ವಯ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆಯನ್ನು ನಿಗದಿಪಡಿಸುವ ಪೂರ್ವದಲ್ಲಿ ರಾಜ್ಯವಾರು ಉತ್ಪಾದನಾ ವೆಚ್ಚದ ಮಾಹಿತಿ ಕ್ರೋಡೀಕರಿಸಿ ಸೂಕ್ತ ಗರಿಷ್ಠ ಬೆಂಬಲ ಬೆಲೆಯನ್ನು ನಿಗದಿಪಡಿಸಿ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಲಾಗುವುದು. ಅದರ ಆಧಾರದ ಮೇಲೆ ಪ್ರತಿ ವರ್ಷ ಮುಂಗಾರು ಹಾಗೂ ಹಿಂಗಾರು ಹಂಗಾಮುಗಳ ಪೂರ್ವದಲ್ಲಿ ಬೆಂಬಲ ಬೆಲೆ ಘೋಷಿಸಲಾಗುತ್ತದೆ ಎಂದು ಹೇಳಿದರು. 

ಇದಕ್ಕೂ ಮುನ್ನ ಪ್ರಶ್ನೆ ಕೇಳಿದ ಎಂ.ನಾಗರಾಜು ಅವರು ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಡಬಲ್ ಇಂಜಿನ್ ಸರಕಾರ ಎಂದು ಯಾವಾಗಲೂ ಹೇಳುತ್ತೀರಿ, ಎಪಿಎಂಸಿಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯದಲ್ಲಿ ಏಕೆ ಪ್ರತ್ಯೇಕ ಕಾಯ್ದೆ ಎನ್ನುವ ವಿಷಯ ವಾಗ್ವಾದಕ್ಕೂ ಕಾರಣವಾಯಿತು. ಈ ಹಂತದಲ್ಲಿ ಸಚಿವ ಸೋಮಶೇಖರ್ ಉತ್ತರ ನೀಡಲು ಮುಂದಾಗುತ್ತಿದ್ದಂತೆ ಮತ್ತೊಬ್ಬ ಸಚಿವ ಮುನಿರತ್ನ ಸಚಿವರ ಬೆಂಬಲಕ್ಕೆ ನಿಲ್ಲುತ್ತಿದ್ದಂತೆ ಕೆರಳಿದ ಎಂ. ನಾಗರಾಜು ಸಹಕಾರ ಸಚಿವರು ಉತ್ತರ ನೀಡಲು ಸಮರ್ಥರಿದ್ದಾರೆ. ನೀವು ಏಕೆ ಮಧ್ಯೆ ಪ್ರವೇಶ ಮಾಡುತ್ತೀರಿ ಎನ್ನುವ ವಿಷಯ ಕೆಲ ಕಾಲ ವಾಗ್ವಾದಕ್ಕೂ ಕಾರಣವಾದ ಘಟನೆ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News