ರೈತ ವಿರೋಧಿ ‘ಕಾಫಿ ಅಭಿವೃದ್ಧಿ ಮಂಡಳಿ' ರದ್ದುಪಡಿಸಲು ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಆಗ್ರಹ

Update: 2022-09-20 15:22 GMT

ಬೆಂಗಳೂರು, ಸೆ. 20: ‘ಕಾಫಿ ಬೆಳೆಯುವ ರೈತರಿಗೆ ಯಾವುದೇ ರೀತಿಯಲ್ಲಿಯೂ ಉಪಯೋಗವಿಲ್ಲದ ‘ಕಾಫಿ ಅಭಿವೃದ್ಧಿ ಮಂಡಳಿ'ಯನ್ನು ಕೂಡಲೇ ರದ್ದುಗೊಳಿಸಬೇಕು' ಎಂದು ಆಡಳಿತ ಪಕ್ಷದ ಸದಸ್ಯ ಎಂ.ಪಿ.ಕುಮಾರಸ್ವಾಮಿ ಇಂದಿಲ್ಲಿ ಆಗ್ರಹಿಸುವ ಮೂಲಕ ರಾಜ್ಯ ಸರಕಾರವನ್ನು ತೀವ್ರ ಮುಜುಗರಕ್ಕೆ ಸಿಲುಕಿಸಿದ ಪ್ರಸಂಗ ನಡೆಯಿತು.

ಮಂಗಳವಾರ ವಿಧಾನಸಭೆಯ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ‘ಕಾಫಿ ಅಭಿವೃದ್ಧಿ ಮಂಡಳಿಯಿಂದ 2018ರಿಂದ ಬೆಳೆಗಾರರಿಗೆ ಇದುವರೆಗೂ ಅತಿವೃಷ್ಟಿ ಪರಿಹಾರ ಬಂದಿಲ್ಲ. ಈ ಬಾರಿಯೂ ಮಲೆನಾಡು ಭಾಗದಲ್ಲಿ ಶೇ. 33ರಷ್ಟು ಮಳೆಯಾಗಿದೆ ಎಂದು ಕೃಷಿ, ಕಂದಾಯ ಹಾಗೂ ತೋಟಗಾರಿಕೆ ಇಲಾಖೆ ವರದಿ ನೀಡಿದೆ. ಆದರೆ, ಕಾಫಿ ಮಂಡಳಿ ಶೇ.22ರಷ್ಟು ಮಳೆಯಾಗಿದೆ ಎಂದಿದೆ. ಈ ರೀತಿ ಸುಳ್ಳು ವರದಿ ನೀಡಿ ಜನರನ್ನು ಹಾದಿ ತಪ್ಪಿಸುವುದು ಸರಿಯಲ್ಲ' ಎಂದು ಆಕ್ಷೇಪಿಸಿದರು.

‘ಕಾಫಿ ಬೆಳೆಗಾರರು ಎಂದರೆ ಶ್ರೀಮಂತರು ಎಂಬ ಕಲ್ಪನೆ ಸರಿಯಲ್ಲ. ಕಾಫಿ ಅಭಿವೃದ್ಧಿ ಮಂಡಳಿಯಿಂದ ಯಾವುದೇ ಉಪಯೋಗವಿಲ್ಲ, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕಾಫಿ ಬೆಳೆಗಾರರನ್ನು ಸಂಪೂರ್ಣ ನಿರ್ಲಕ್ಷಿಸಿವೆ. ಕಾಫಿಯಿಂದ ಈ ಹಿಂದೆ ವಾರ್ಷಿಕವಾಗಿ ವಿದೇಶಿ ವಿನಿಮಯದಿಂದ 5 ಸಾವಿರ ಕೋಟಿ ರೂ.ನಿಂದ 9 ಸಾವಿರ ಕೋಟಿ ರೂ.ಆದಾಯ ಪಡೆಯಲಾಗುತ್ತದೆ. ಆದರೆ, ಅವರಿಗೆ ಯಾವುದೇ ನೆರವು ನೀಡುತ್ತಿಲ್ಲ' ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

‘ಕಾಫಿಯನ್ನು ಉದ್ಯಮ, ವಾಣಿಜ್ಯ ಬೆಳೆಯನ್ನಾಗಿ ಪರಿಗಣಿಸಿರುವುದು ಸರಿಯಲ್ಲ. ಇದನ್ನು ಕೃಷಿ ಬೆಳೆಯನ್ನಾಗಿ ಪರಿಗಣಿಸಿದರೆ ರೈತರಿಗೆ ಸರಕಾರದ ಸವಲತ್ತುಗಳು ದೊರೆಯಲಿದೆ. ಕೇಂದ್ರದ ಫಸಲ್ ಬಿಮಾ ಯೋಜನೆಯ ವ್ಯಾಪ್ತಿಯಲ್ಲಿ ತರಬೇಕು. ಮಲೆನಾಡು ಭಾಗದಲ್ಲಿ ಪ್ರತಿವರ್ಷ ಹೆಚ್ಚು ಮಳೆಯಾಗಿ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ಚಿಕ್ಕಮಗಳೂರು, ಕೊಡಗು ಹಾಸನ ಜಿಲ್ಲೆಯನ್ನು ಅತಿವೃಷ್ಟಿ ಪ್ರದೇಶ ಎಂದು ಘೋಷಿಸಬೇಕು' ಎಂದು ಕುಮಾರಸ್ವಾಮಿ ಆಗ್ರಹಿಸಿದರು.

ಇದಕ್ಕೆ ಧ್ವನಿಗೂಡಿಸಿದ ಸಿ.ಟಿ.ರವಿ, ಎಚ್.ಕೆ.ಕುಮಾರಸ್ವಾಮಿ, ‘ಕಾಫಿ ಬೆಳೆಗಾರರು ಭಾರೀ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿದ್ದು, ಸರಕಾರ ಅವರ ನೆರವಿಗೆ ಧಾವಿಸಬೇಕು. ಅಲ್ಲದೆ, ಕಾಫಿಯನ್ನು ಫಸಲ್ ಬಿಮಾ ವಿಮೆ ಯೋಜನೆ ವ್ಯಾಪ್ತಿಗೆ ಸೇರ್ಪಡೆ ಮಾಡಿದರೆ ಅವರಿಗೆ ಸಂಕಷ್ಟದ ಸಂದರ್ಭದಲ್ಲಿ ವಿಮೆ ಪಡೆದುಕೊಳ್ಳಲು ಅನುಕೂಲ ಆಗಲಿದೆ' ಎಂದು ಗಮನ ಸೆಳೆದರು.

ಬಳಿಕ ಸರಕಾರದ ಪರವಾಗಿ ಉತ್ತರಿಸಿದ ಕಾನೂನು ಸಚಿವ ಮಾಧುಸ್ವಾಮಿ, ‘ಅತ್ಯಂತ ಹೆಚ್ಚು ಮಳೆ ಬೀಳುವ ಪ್ರದೇಶವನ್ನು ಅತಿವೃಷ್ಟಿ ಜಿಲ್ಲೆಗಳ ವ್ಯಾಪ್ತಿಗೆ ಸೇರ್ಪಡೆ ಮಾಡಬೇಕೆಂಬ ಆಗ್ರಹವೇ ಸರಿಯಲ್ಲ. ಮಳೆ ಬಿದ್ದರೆ ಮಾತ್ರವೇ ಕಾಫಿ ಬೆಳೆಯಲು ಸಾಧ್ಯ. ಕಾಫಿ ಅಭಿವೃದ್ಧಿ ಮಂಡಳಿ ಸಮೀಕ್ಷೆ ನಡೆಸಿ ವರದಿ ನೀಡಿದೆ. ಫಸಲ್ ಬಿಮಾ ಯೋಜನೆ ವ್ಯಾಪ್ತಿಗೆ ಕಾಫಿ ಬೆಳೆಯನ್ನು ಸೇರ್ಪಡೆ ಮಾಡಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು' ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News