ಕುರಿ-ಮೇಕೆಗಳಿಗೆ ನೀಲಿ ನಾಲಿಗೆ ಕಾಯಿಲೆ: ಲಸಿಕೆ ಪೂರೈಕೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹ
ಬೆಂಗಳೂರು, ಸೆ. 20: ‘ಕುರಿ-ಮೇಕೆಗಳಿಗೆ ಬರುವ ನೀಲಿ ನಾಲಿಗೆ ಕಾಯಿಲೆ ಹಿನ್ನೆಲೆಯಲ್ಲಿ ಕೂಡಲೇ ಅಗತ್ಯ ಪ್ರಮಾಣದಲ್ಲಿ ಲಸಿಕೆ ಪೂರೈಕೆ ಮಾಡಬೇಕು' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah ) ಸರಕಾರದ ಗಮನ ಸೆಳೆದಿದ್ದಾರೆ.
ಮಂಗಳವಾರ ವಿಧಾನಸಭೆ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪ ಮಾಡಿದ ಅವರು, ‘ಬಾಗಲಕೋಟೆ ಜಿಲ್ಲೆಯಲ್ಲಿ ಕುರಿಗಳಿಗೆ ಬ್ಲೂಟಂಗ್ ಕಾಯಿಲೆ ಹೆಚ್ಚಾಗಿದೆ. ಕುರಿ-ಮೇಕೆಗಳಿಗೆ ಮಳೆ, ಶೀತ ಕಾರಣಕ್ಕೆ ನೀಲಿ ನಾಲಿಗೆ ಕಾಯಿಲೆ ಬರುತ್ತದೆ. ಇದರಿಂದ ಕುರಿಗಳು ಸಾವನ್ನಪ್ಪುತ್ತವೆ. ಇದು ಸಾಕಾಣಿಕೆ ಮಾಡುವ ರೈತರಿಗೆ ನಷ್ಟವಾಗಲಿದೆ. ಆದುದರಿಂದ ಕೂಡಲೇ ಕುರಿಗಳಿಗೆ ಲಸಿಕೆ ಒದಗಿಸಬೇಕು' ಎಂದು ಆಗ್ರಹಿಸಿದರು.
‘ರಾಜ್ಯದಲ್ಲಿ 1.19 ಕೋಟಿ ಕುರಿಗಳು, 61 ಲಕ್ಷ ಮೇಕೆಗಳಿವೆ. ಸೆಪ್ಟೆಂಬರ್, ಅಕ್ಟೋಬರ್ ನಲ್ಲಿ ಕುರಿ ಮತ್ತು ಮೇಕೆಗಳಿಗೆ ನೀಲಿ ನಾಲಿಗೆ ಕಾಯಿಲೆ ಬರುತ್ತದೆ. ಹೀಗಾಗಿ ವ್ಯಾಪಕವಾಗಿ ಕುರಿಗಳಿಗೆ ಲಸಿಕೆ ಹಾಕಬೇಕು. ಆದರೆ, ಬಾಗಲಕೋಟೆ ಜಿಲ್ಲೆಯೊಂದರಲ್ಲೆ 2.50 ಲಕ್ಷ ಕುರಿಗಳಿವೆ. ಆದರೆ ಸರಕಾರ ಕೇವಲ 50 ಸಾವಿರ ಲಸಿಕೆಯನ್ನಷ್ಟೇ ಪೂರೈಸಿದೆ' ಎಂದು ಅವರು ಉಲ್ಲೇಖಿಸಿದರು.
ಬಳಿಕ ಉತ್ತರಿಸಿದ ಸಚಿವ ಪ್ರಭು ಚೌಹಾಣ್, ‘ಕುರಿಗಳಲ್ಲಿ ಕಂಡು ಬರುವ ನೀಲಿ ನಾಲಿಗೆ ಕಾಯಿಲೆ ಕೋಲಾರ, ಬಾಗಲಕೋಟೆ, ಕೊಪ್ಪಳ, ಚಿಕ್ಕಬಳ್ಳಾಪುರ ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಂಡು ಬಂದಿದ್ದು, ಈಗಾಗಲೇ ಬಾಗಲಕೋಟೆಗೆ 1 ಲಕ್ಷ ಲಸಿಕೆ ಪೂರೈಕೆ ಮಾಡಲಾಗಿದೆ. ಕಾಯಿಲೆ ಕಂಡುಬಂದ ಕಡೆಗಳಲ್ಲಿ ಕುರಿಗಳಿಗೆ ಲಸಿಕೆ ಕೊಡಿಸಲು ಕ್ರಮ ವಹಿಸಲಾಗುವುದು' ಎಂದು ಅವರು ಭರವಸೆ ನೀಡಿದರು.