ಸುಸಜ್ಜಿತ ಬೋಟ್, ಆಂಬುಲೆನ್ಸ್ ಬೋಟ್ ಒದಗಿಸಲು ಕೇಂದ್ರಕ್ಕೆ ಮನವಿ: ಸಚಿವ ಆರಗ ಜ್ಞಾನೇಂದ್ರ

Update: 2022-09-20 14:42 GMT

ಬೆಂಗಳೂರು, ಸೆ. 20: ‘ಸಮುದ್ರದಲ್ಲಿ ಕಳ್ಳ ಸಾಗಾಣಿಕೆ, ಮಾದಕ ದ್ರವ್ಯಗಳ ಸಾಗಾಣಿಕೆ ಸೇರಿದಂತೆ ಇನ್ನಿತರ ಅಕ್ರಮ ಚಟುವಟಿಕೆಗಳ ನಿರ್ಬಂಧ ಹಾಗೂ ಸಮುದ್ರ ರಕ್ಷಣಾ ಕಾರ್ಯಾಚರಣೆ ನಡೆಸಲು ಸುಸಜ್ಜಿತ ಬೋಟ್ ಹಾಗೂ ತುರ್ತು ನೆರವಿಗೆ ಆಂಬುಲೆನ್ಸ್ ಬೋಟ್ ಒದಗಿಸಲು ಕೇಂದ್ರ ಸರಕಾರಕ್ಕೆ ಮನವಿ ಮಾಡಲಾಗುವುದು' ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಭರವಸೆ ನೀಡಿದ್ದಾರೆ.

ಮಂಗಳವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಆಡಳಿತ ಪಕ್ಷದ ರಘುಪತಿ ಭಟ್ ಕೆ. ಅವರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ‘ಕರಾವಳಿ ಕಾವಲು ಪೊಲೀಸ್ ಘಟಕದಲ್ಲಿ 13 ಬೋಟುಗಳು, 9 ಪೊಲೀಸ್ ಠಾಣೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಸದರಿ ಬೋಟ್‍ಗಳ ಮಿಡ್ ಲೈಫ್ ಆಪ್‍ಗ್ರೇಡೆಷನ್ 21 ಕೋಟಿ ರೂ.ಗಳಷ್ಟು ಅನುದಾನ ನೀಡಲಾಗಿದೆ' ಎಂದು ವಿವರಿಸಿದರು.

ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ರಘುಪತಿ ಭಟ್, ‘20 ಮೀಟರ್ ವಿಸ್ತೀರ್ಣದ ಹೈಸ್ಪೀಡ್ ಬೋಟ್‍ಗಳನ್ನು ಒದಗಿಸಬೇಕು. ಅಲ್ಲದೆ, ತುರ್ತುಕಾರ್ಯಕ್ಕೆ ಆಂಬುಲೆನ್ಸ್ ಬೋಟ್ ನೀಡಬೇಕು. ರಾಜ್ಯದ ಗಡಿಯೊಳಗೆ ಬಂದು ಮೀನುಗಾರಿಕೆ ಮಾಡುವ ನೆರೆ ರಾಜ್ಯದ ಬೋಟ್‍ಗಳಿಗೆ ದಂಡದ ಪ್ರಮಾಣ ಹೆಚ್ಚಿಸಬೇಕು. ಸಮುದ್ರಯಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು' ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News