ವಿರಾಜಪೇಟೆ | ಹಸುಗಳನ್ನು ಬಲಿ ಪಡೆದ ಹುಲಿ ಕೊನೆಗೂ ಸೆರೆ: 10 ದಿನಗಳ ಕಾರ್ಯಾಚರಣೆ ಯಶಸ್ವಿ

Update: 2022-09-20 15:17 GMT

ಮಡಿಕೇರಿ ಸೆ.20 : ವಿರಾಜಪೇಟೆ ತಾಲೂಕಿನ ಮಾಲ್ದಾರೆ ಗ್ರಾ.ಪಂ ವ್ಯಾಪ್ತಿಯ ಬಾಡಗ-ಬಾಣಂಗಾಲ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಜಾನುವಾರುಗಳ ಮೇಲೆ ದಾಳಿ ನಡೆಸಿ ಬಲಿ ಪಡೆಯುತ್ತಿದ್ದ 13 ವರ್ಷದ ಗಂಡು ಹುಲಿ ಕೊನೆಗೂ ಸೆರೆಯಾಗಿದೆ.

ಅರಣ್ಯ ಇಲಾಖೆಯ 10 ದಿನಗಳ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಮಾಲ್ದಾರೆ ಸಮೀಪ ತೋಟವೊಂದರ ಬಳಿ ಹುಲಿಯನ್ನು ಸೆರೆ ಹಿಡಿಯಲಾಗಿದೆ.

'ಇಂದು ಸಂಜೆ 5 ಗಂಟೆ ಸುಮಾರಿಗೆ ಕಾರ್ಯಾಚರಣೆ ತಂಡದ ಕಣ್ಣಿಗೆ ಬಿದ್ದ ಹುಲಿಗೆ ಉಪ ವಲಯ ಅರಣ್ಯಾಧಿಕಾರಿ ಶಾರ್ಪ್ ಶೂಟರ್ ರಂಜನ್ ಅರೆವಳಿಕೆ ನೀಡಿದರು. ಹುಲಿ ನಿತ್ರಾಣಗೊಂಡಿತ್ತಾದರೂ ನೆಲಕ್ಕೆ ಬೀಳಲಿಲ್ಲ. ಈ ಕಾರಣದಿಂದ ಮತ್ತೊಮ್ಮೆ ಅರೆವಳಿಕೆ ಶೂಟ್ ಮಾಡಲಾಯಿತು. ನಂತರ ಬಿದ್ದ ಹುಲಿಯನ್ನು ಬಲೆಯ ಸಹಾಯದಿಂದ ಬೋನಿಗೆ ಹಾಕಲಾಯಿತು. ಸೆರೆಯಾದ ಹುಲಿಯನ್ನು ಮೈಸೂರು ಮೃಗಾಲಯಕ್ಕೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುವುದು. ಚೇತರಿಸಿಕೊಂಡ ನಂತರ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ಕ್ರಮ ಕೈಗೊಳ್ಳಲಾಗುವುದು' ಎಂದು ಜಿಲ್ಲಾ ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿದರು.

ಸೆರೆಯಾದ ಹುಲಿಯ ಒಂದು ಕಾಲಿನಲ್ಲಿ ಗಾಯವಾಗಿದ್ದು, ಪ್ರಾಣಿಗಳನ್ನು ಬೇಟೆಯಾಡುವ ಸಂದರ್ಭ ಇದು ಆಗಿರಬಹುದೆಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

► 6 ಹಸುಗಳು ಬಲಿ: 

ಕಳೆದ ಕೆಲವು ದಿನಗಳಿಂದ ಗ್ರಾಮಸ್ಥರ ಕಣ್ಣಿಗೆ ಬೀಳುತ್ತಿದ್ದ ಹುಲಿ ಹಾಡಹಗಲೇ ಹಸುಗಳನ್ನು ಕೊಂದು ಭೀತಿ ಹುಟ್ಟಿಸಿತ್ತು. 15 ದಿನಗಳಲ್ಲಿ 6 ಹಸುಗಳು ಬಲಿಯಾಗಿದ್ದವು. ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಅವರು ಹುಲಿ ಸೆರೆಗೆ ಕ್ರಮ ಕೈಗೊಳ್ಳುವಂತೆ ಅರಣ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ದುಬಾರೆ ಸಾಕಾನೆ ಶಿಬಿರದ ಲಕ್ಷ್ಮಣ, ಈಶ್ವರ, ಇಂದ್ರ, ಮತ್ತು ಅಂಜನಾ ಹೆಸರಿನ 4 ಸಾಕಾನೆಗಳೊಂದಿಗೆ ಅರಣ್ಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಆರ್.ಆರ್.ಟಿ ಸಿಬ್ಬಂದಿಗಳು ಕಾರ್ಯಾಚರಣೆ ಆರಂಭಿಸಿದ್ದರು. ಸುಮಾರು 40ಕ್ಕೂ ಅಧಿಕ ಮಂದಿ ಬಾಡಗ, ಬಾಣಂಗಾಲ ಗ್ರಾಮದ ಮಾರ್ಗೊಲ್ಲಿ, ಮೊಳಗು ಮನೆ ಕಾಫಿ ತೋಟ, ಮಾಲ್ದಾರೆ ಸೇರಿದಂತೆ ವಿವಿಧೆಡೆ ಮಳೆಯ ನಡುವೆಯೂ ಕಾರ್ಯಾಚರಣೆ ನಡೆಸಿದರು.

ಹುಲಿಯ ಚಲನವಲನದ ಮೇಲೆ ಕಣ್ಣಿಡಲು 10 ಸಿ.ಸಿ ಕ್ಯಾಮರಾ, 4 ಅಟ್ಟಣಿಗೆ ಹಾಗೂ ಎರಡು ಬೋನ್‍ಗಳನ್ನು ಅಳವಡಿಸಲಾಗಿತ್ತು. ಸಿ.ಸಿ ಕ್ಯಾಮರಾದಲ್ಲಿ ಹುಲಿ ಸಂಚಾರದ ದೃಶ್ಯ ಸೆರೆಯಾಗುತ್ತಿತ್ತಾದರೂ ಕಾರ್ಯಾಚರಣೆ ತಂಡದ ಕಣ್ಣಿಗೆ ಬಿದ್ದಿರಲಿಲ್ಲ.

ಶನಿವಾರ ಗಟ್ಟದಳ್ಳ ಗ್ರಾಮದ ಬಳಿ ಹುಲಿ ಕಾಣಿಸಿಕೊಂಡು ಅರೆವಳಿಕೆ ಶೂಟ್ ಮಾಡಲಾಯಿತು. ಆದರೆ ಹುಲಿ ಸೆರೆಯಾಗದೆ ಪರಾರಿಯಾಗಿತ್ತು, ಹುಲಿ ಅರಣ್ಯ ಸೇರಿರಬಹುದೆಂದು ಊಹಿಸಲಾಯಿತ್ತಾದರೂ ಭಾನುವಾರ ಮತ್ತೆ ಪ್ರತ್ಯಕ್ಷವಾಯಿತು. ಆದರೆ ಕಾರ್ಯಾಚರಣೆಯ ತಂಡವನ್ನು ಕಂಡು ಗಾಬರಿಯಿಂದ ದುಬಾರೆ ಅರಣ್ಯ ಪ್ರದೇಶಕ್ಕೆ ಮಾಲ್ದಾರೆ ಮೂಲಕ ದಾಟುವ ಪ್ರಯತ್ನ ಮಾಡಿದ ಹುಲಿ ಮತ್ತೆ ಹಸುವೊಂದನ್ನು ಬಲಿ ಪಡೆಯಿತು. ಇದರಿಂದ ಕಾರ್ಯಾಚರಣೆಯ ತಂಡ ಮಾಲ್ದಾರೆ ಭಾಗದಲ್ಲೂ ನಿಗಾ ವಹಿಸಿತು. ಈ ನಡುವೆ ಸ್ಥಳೀಯ ಗ್ರಾಮಸ್ಥ ಉಣ್ಣಿಕೃಷ್ಣ ಅವರು ತಮ್ಮ ಹಸು ನಾಪತ್ತೆಯಾಗಿದೆ ಎಂದು ಇಂದು ಅಕ್ಕಪಕ್ಕದ ಕಾಫಿ ತೋಟದ ಬಳಿ ಹುಡುಕಾಟ ನಡೆಸಿದ್ದಾರೆ. ಇದೇ ಸಂದರ್ಭ ತಮ್ಮ ಹಸುವಿನ ಮೃತದೇಹದ ಬಳಿ ಹುಲಿ ಇರುವುದು ಕಂಡು ಆತಂಕದಿಂದ ಓಡಿ ಬಂದು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ತಕ್ಷಣ ಕಾರ್ಯಾಚರಣೆ ತಂಡ ಅತ್ತ ಸಾಗಿತ್ತಾದರೂ ಹುಲಿ ಕಣ್ಣಿಗೆ ಬೀಳಲಿಲ್ಲ. ಹುಲಿ ಹೆಜ್ಜೆಯ ಜಾಡು ಹಿಡಿದು ಹೋದ ಅಧಿಕಾರಿಗಳಿಗೆ ಕೊನೆಗೂ ತೋಟದೊಳಗೆ ಹುಲಿ ಪ್ರತ್ಯಕ್ಷವಾಗಿದೆ. ನಂತರ ಅವರೆವಳಿಕೆಯನ್ನು ನೀಡಿ ಸೆರೆ ಹಿಡಿಯಲಾಯಿತು.

ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮೂರ್ತಿ ಅವರ ಮಾರ್ಗದರ್ಶನದಲ್ಲಿ ವಿರಾಜಪೇಟೆ ತಾಲ್ಲೂಕು ಡಿಸಿಎಫ್ ಶಿವರಾಮ ಬಾಬು, ಪೂವಯ್ಯ, ನೆಹರು, ಎ.ಸಿ.ಎಫ್ ಉಮಾಶಂಕರ್, ಅರಣ್ಯಾಧಿಕಾರಿಗಳಾದ ಅಶೋಕ್, ಶ್ರೀನಿವಾಸ್, ರಂಜನ್, ವನ್ಯಜೀವಿ ವೈದ್ಯಾಧಿಕಾರಿಗಳು ಹಾಗೂ ಶೂಟರ್‍ಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ರಾತ್ರಿ ಹಗಲೆನ್ನದೆ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಶ್ರಮಕ್ಕೆ ಗ್ರಾಮಸ್ಥರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News