ಕೋಲಾರ | ದೇವರ ಮೂರ್ತಿ ಮುಟ್ಟಿದ ದಲಿತ ಬಾಲಕ: 60 ಸಾವಿರ ರೂ. ದಂಡ!

Update: 2022-09-20 17:11 GMT
(ಬಾಲಕ ಚೇತನ್ ಮತ್ತು ಕುಟುಂಬಸ್ಥರು)

ಕೋಲಾರ, ಸೆ.20: ದಲಿತ ಬಾಲಕನೋರ್ವ ದೇವರ ಮೂರ್ತಿಯನ್ನು ಮುಟ್ಟಿದ್ದಾನೆ ಎಂದು ಸವರ್ಣಿಯರು 60 ಸಾವಿರ ರೂ. ದಂಡ ವಿಧಿಸಿ, ದಂಡ ಕಟ್ಟದಿದ್ದರೆ ಗ್ರಾಮದಿಂದ ಬಹಿಷ್ಕಾರ ಮಾಡಲಾಗುವುದು ಎಂದು ಬೆದರಿಕೆ ಹಾಕಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಟೇಕಲ್ ಹೋಬಳಿ ಉಳ್ಳೆರಳ್ಳಿ ಗ್ರಾಮದಲ್ಲಿ ನಡೆದಿರುವುದು ವರದಿಯಾಗಿದೆ.

ಸೆ.15ರಂದು ಉಳ್ಳೆರಳ್ಳಿ ಗ್ರಾಮದಲ್ಲಿ ಭೂತಮ್ಮ ದೇವರ ಉತ್ಸವ ಮೆರವಣಿಗೆಯನ್ನು ನಡೆಸಲಾಯಿತು. ಈ ವೇಳೆ ದೇವರ ಮೂರ್ತಿಯ ಕೈಯಲ್ಲಿ ಇದ್ದ ಕೋಲು ಕೆಳಗೆ ಬಿದ್ದಿತ್ತು ಎನ್ನಲಾಗಿದ್ದು, ಆ ಕೋಲನ್ನು ಎತ್ತಿಕೊಟ್ಟ 15 ವರ್ಷದ ಚೇತನ್ ಎಂಬ ದಲಿತ ಬಾಲಕನನ್ನು ಅಲ್ಲಿಯೇ ಇದ್ದ ಸವರ್ಣೀಯ ಸಮುದಾಯಕ್ಕೆ ಸೇರಿದ ಗ್ರಾಮ ಪಂಚಾಯತ್ ಮಾಜಿ ಸದಸ್ಯ ನಾರಾಯಣಸ್ವಾಮಿ ಸೇರಿದಂತೆ ಮತ್ತಿತರರು ದೇವರಿಗೆ ಅಪಶಕುನವಾಯಿತು ಎಂದು ದಲಿತ ಬಾಲಕ ಚೇತನ್‌ನನ್ನು ಹಿಗ್ಗಾಮುಗ್ಗ ತಳಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಬಾಲಕನ ಕುಟುಂಬಸ್ಥರು ಹಾಗೂ ಸವರ್ಣೀಯರ ನಡುವೆ ಮಾತಿನ ಚಕಮಕಿ ನಡೆದಿದೆ.

ಈ ವಿಚಾರ ಕುರಿತು ಸೆ.19ರಂದು ಗ್ರಾಮದಲ್ಲಿ ಪಂಚಾಯಿತಿ ನಡೆಸಿ ಬಾಲಕ ಚೇತನ್ ಅವರ ತಾಯಿ ಶೋಭಾ ಅವರನ್ನು ಕರೆಸಿ ಬಾಲಕ ಗ್ರಾಮದ ನಿಯಮ ಮೀರಿ ದೇವರ ಕೈಯಲ್ಲಿದ್ದ ಕೋಲನ್ನು ಸ್ಪರ್ಶಿಸಿದ್ದು ದೇವರಿಗೆ ಹಾಗೂ ಗ್ರಾಮಕ್ಕೆ ಅಪಶಕುನವಾಗಿದೆ ಎಂದು ಹೇಳಿ ಇದನ್ನು ಸರಿಪಡಿಸಲು ಶಾಂತಿ, ಹೋಮ ಹವನಗಳಿಗೆ ಸುಮಾರು 60 ಸಾವಿರ ರೂ. ಖರ್ಚಾಗಲಿದ್ದು, ಕುಟುಂಬಸ್ಥರು ಅ.1ರ ಒಳಗೆ ದಂಡ ಕಟ್ಟಬೇಕು. ತಪ್ಪಿದರೆ ಗ್ರಾಮದಿಂದ ಬಹಿಷ್ಕಾರ ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

  ಪಂಚಾಯಿತಿಯ ತೀರ್ಪುಗೆ ಭಯ ಬೀತರಾದ ದಲಿತ ಕುಟುಂಬ ತಮಗೆ ಪರಿಚಯವಿದ್ದ ಅಂಬೇಡ್ಕರ್ ಸೇವಾ ಸಮಿತಿ ಸಂಘಟನೆ ಮುಖಂಡರಿಗೆ ತಮ್ಮ ಸಂಬಂಧಿಕರ ಮೂಲಕ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ತಕ್ಷಣ ರಾತ್ರಿ 11ಕ್ಕೆ ಸಂಘಟನಾ ಮುಖಂಡರು ಗ್ರಾಮಕ್ಕೆ ತೆರಳಿ ಸವಿಸ್ತಾರವಾಗಿ ಮಾಹಿತಿಯನ್ನು ಕಲೆಹಾಕಿದ ಬಳಿಕ ಸೆ.20ರಂದು ಮಂಗಳವಾರ ಬೆಳಗ್ಗೆ ದಲಿತ ಕುಟುಂಬಸ್ಥರನ್ನು ಮಾಸ್ತಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ನಡೆದ ಘಟನೆಯನ್ನು ಸಬ್ ಇನ್‌ಸ್ಪೆಕ್ಟರ್ ಅವರ ಗಮನಕ್ಕೆ ತಂದು ದೂರು ನೀಡಿದ್ದಾರೆ.

ದೂರನ್ನು ಸ್ವೀಕರಿಸಿದ ಮಾಸ್ತಿ ಪೊಲೀಸರು, ಉಳ್ಳೆರಳ್ಳಿ ಗ್ರಾಮದ ಸವರ್ಣೀಯ ಸಮುದಾಯಕ್ಕೆ ಸೇರಿದ ಜಿ.ನಾರಾಯಣಸ್ವಾಮಿ ಬಿನ್ ಗೋಪಾಲಪ್ಪ, ಜಿ.ರಮೇಶ್, ಗೋಪಾಲಪ್ಪ, ವೆಂಕಟೇಶಪ್ಪ, ಕೋಟೆಪ್ಪ, ನಾರಾಯಣಸ್ವಾಮಿ, ಚಲಪತಿ, ಮೋಹನ್ ರಾವ್, ಚಿನ್ನಯ್ಯ ವಿರುದ್ಧ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ದೌರ್ಜನ್ಯ ತಡೆಯ ಕಾಯ್ದೆ 1989 ಅಡಿ ಹಾಗೂ ಐಪಿಸಿ ಕಲಂ 143 147 148 149 504 506 ಅಡಿಯಲ್ಲಿ ಎಫ್‌ಐಆರ್ ದಾಖಲಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

ಸದ್ಯ ಗ್ರಾಮದಲ್ಲಿ ಬೂದಿ ಮುಚ್ಚಿದ ಕೆಂಡದ ವಾತಾವರಣವಿದ್ದು ಸಂತ್ರಸ್ತ ಕುಟುಂಬಕ್ಕೆ ಪೊಲೀಸ್ ಬಂದೋಬಸ್ತ್ ನೀಡಲಾಗಿದೆ. ಆರೋಪಿಗಳು ತಲೆಮರಿಸಿಕೊಂಡಿದ್ದು ಪೊಲೀಸರು ಆರೋಪಿಗಳ ಪತ್ತೆಗೆ ಕ್ರಮವಹಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News