PSI ನೇಮಕಾತಿ ಹಗರಣ | ಸಿಒಡಿಯಿಂದ ಪಾರದರ್ಶಕ ತನಿಖೆಯಾಗುತ್ತಿದೆ: ಸಚಿವ ಆರಗ ಜ್ಞಾನೇಂದ್ರ

Update: 2022-09-20 17:18 GMT

ಬೆಂಗಳೂರು, ಸೆ.20: ಪಿಎಸ್ಸೈ ನೇಮಕಾತಿ ಹಗರಣವನ್ನು ಮುಚ್ಚಿಡುವಂತಹ ಯಾವುದೆ ಪ್ರಯತ್ನವನ್ನು ರಾಜ್ಯ ಸರಕಾರ ಮಾಡಿಲ್ಲ. ನನಗೆ ಈ ಅಕ್ರಮದ ಕುರಿತು ಮಾಹಿತಿ ಸಿಕ್ಕ ತಕ್ಷಣವೆ ಮುಖ್ಯಮಂತ್ರಿಯ ಅನುಮತಿ ಪಡೆದು ತನಿಖೆಗೆ ಆದೇಶ ಮಾಡಿದ್ದೇನೆ. ಸಿಒಡಿಯವರು ಅತ್ಯಂತ ಪಾರದರ್ಶಕವಾಗಿ ತನಿಖೆ ಮಾಡುತ್ತಿದ್ದು, ಕಾಂಗ್ರೆಸ್‍ನವರ ಆರೋಪದಲ್ಲಿ ಯಾವುದೆ ಹುರುಳಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಮಂಗಳವಾರ ವಿಧಾನಸಭೆಯಲ್ಲಿ ನಿಯಮ 69ರ ಮೇರೆಗೆ ಪೊಲೀಸ್ ನೇಮಕಾತಿಯಲ್ಲಿನ ಅಕ್ರಮಗಳ ಬಗ್ಗೆ ನ್ಯಾಯಾಂಗ ತನಿಖೆಗೆ ಒತ್ತಾಯಿಸಿ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಧರಣಿ ಮಾಡುತ್ತಿದ್ದರು. ಈ ಮಧ್ಯೆಯೆ ಸರಕಾರದ ಪರವಾಗಿ ಉತ್ತರ ನೀಡಿದ ಅವರು, ಅಕ್ರಮದ ಕುರಿತು ದಾಖಲಾತಿ ಇದೆ ಎಂದು ಅನಾವಶ್ಯಕವಾಗಿ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದ್ದರು. ಆದರೆ, ದಾಖಲೆ ಮಾತ್ರ ಕೊಡಲಿಲ್ಲ ಎಂದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ 97 ಜನರನ್ನು ಬಂಧಿಸಿದ್ದೇವೆ. ಅದರಲ್ಲಿ 48 ಜನ ಅಭ್ಯರ್ಥಿಗಳು, ಎಡಿಜಿಪಿ ಸೇರಿದಂತೆ 22 ಜನ ಪೊಲೀಸರನ್ನು ಬಂಧಿಸಿದ್ದೇವೆ. ಬ್ಲೂಥೂಟ್ ಡಿವೈಸ್ ಕಿಂಗ್‍ಪಿನ್ ಕಾಂಗ್ರೆಸ್ ಕಾರ್ಯಕರ್ತ ಆರ್.ಡಿ.ಪಾಟೀಲ್ ಹಾಗೂ ಆತನ ಸಹಚರರ ವಿವಿಧ ಬ್ಯಾಂಕ್ ಖಾತೆಗಳು ಹಾಗೂ ಠೇವಣಿಗಳಲ್ಲಿ ಇದ್ದ 8 ಕೋಟಿ ರೂ., 506 ಗ್ರಾಂ ಬಂಗಾರವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಸಿಒಡಿ ತನಿಖೆಯನ್ನು ಹೈಕೋರ್ಟ್ ಮೆಚ್ಚುಗೆ ವ್ಯಕ್ತಪಡಿಸಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್ ಸರಕಾರದಲ್ಲಿ ಹಲವು ಹಗರಣಗಳು ನಡೆದಿವೆ. ಶಿಕ್ಷಕರ ನೇಮಕಾತಿ ಹಗರಣದಲ್ಲಿ 16 ಜನರನ್ನು ಬಂಧಿಸಲಾಗಿದೆ. ಪಿಎಸ್ಸೈ ಹಗರಣದಲ್ಲಿಯೂ 2016-17ನೆ ಸಾಲಿನಲ್ಲಿ ನಡೆದಿತ್ತು. ಆಗಲೂ ಎಡಿಜಿಪಿಯನ್ನು ಬಂಧಿಸಬೇಕಿತ್ತು. ಕಾಂಗ್ರೆಸ್ ಹಾಗೆ ಬಿಟ್ಟಿತು. ಆದರೆ, ನಮ್ಮ ಸರಕಾರ ಪಾರದರ್ಶಕತೆಯಿಂದ ತನಿಖೆ ನಡೆಸುತ್ತಿದೆ. ಸರಕಾರಿ ಹುದ್ದೆಗಳು ಅರ್ಹರಿಗೆ ಸಿಗಬೇಕು. ಇದು ದುಡ್ಡುಕೊಟ್ಟು ಖರೀದಿಸುವಂತಹ ವಸ್ತು ಆಗಬಾರದು ಎಂಬ ಬದ್ಧತೆಯಿಂದ ಕೆಲಸ ಮಾಡುತ್ತಿದ್ದೇವೆ ಎಂದು ಆರಗ ಜ್ಞಾನೇಂದ್ರ ತಿಳಿಸಿದರು.

ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರು ಪರಸ್ಪರ ಆರೋಪ, ಪ್ರತ್ಯಾರೋಪಗಳಲ್ಲಿ ತೊಡಗಿದ್ದರು. ಶಾಸಕ ಪ್ರಿಯಾಂಕ್ ಖರ್ಗೆ ತಮ್ಮ ಮಾತನ್ನು ಮುಗಿಸಲು ಅವಕಾಶ ನೀಡುವಂತೆ ಪದೇ ಪದೇ ಕೋರುತ್ತಿದ್ದರು. ಈ ಸಂದರ್ಭದಲ್ಲಿ ಸ್ಪೀಕರ್ ಕಾಗೇರಿ, ಅವರಿಗೆ ಅವಕಾಶ ನೀಡಿದರು. ಆಗ ಎದ್ದು ನಿಂತ ಕಂದಾಯ ಸಚಿವ ಆರ್.ಅಶೋಕ್, ನಮ್ಮ ಸರಕಾರದ ಬದ್ಧತೆ ನಾವು ಹೇಳಬೇಕಲ್ಲ. ವಿರೋಧ ಪಕ್ಷದವರು ಒಬ್ಬೊಬ್ಬರು ನಾಲ್ಕು ನಾಲ್ಕು ಗಂಟೆ ಮಾತನಾಡುತ್ತಾರೆ. ನಮಗೆ ಉತ್ತರ ಕೊಡಲು ಅರ್ಧಗಂಟೆ ಸಮಯ ನೀಡಲ್ಲ. ನೀವೆ ನಮ್ಮ ಮಾತು ಕೇಳದಿದ್ದರೆ ನಾವು ಯಾರನ್ನು ಕೇಳೋದು. ಸರಕಾರವನ್ನು ಸಮರ್ಥನೆ ಮಾಡೋದು ನಮ್ಮ ಕರ್ತವ್ಯ ಅಲ್ಲವೇ ಎಂದು ಬೇಸರ ವ್ಯಕ್ತಪಡಿಸಿದರು.

------------------------------------------------------------
ಜೈಲಿಗೆ ಹೋಗಿರುವವರು, ಬೇಲ್ ಮೇಲೆ ಹೊರಗಿರುವ ಕಾಂಗ್ರೆ¸ ನವರಿಗೆ ನಮ್ಮ ಮೇಲೆ ಆರೋಪ ಮಾಡುವ ನೈತಿಕತೆಯಿಲ್ಲ. ನಮ್ಮ ಸರಕಾರ ಪಾರದರ್ಶಕವಾಗಿ ತನಿಖೆ- ನಡೆಸಿ, ಎಡಿಜಿಪಿ ಹುದ್ದೆಯ ಅಧಿಕಾರಿಯನ್ನು ಬಂಧಿಸಿದೆ. ಕಾಂಗ್ರೆಸ್‍ನವರು ತಮ್ಮ ಬಳಿ ಇರುವ ಮಾಹಿತಿಯನ್ನು ತನಿಖಾಧಿಕಾರಿಗಳಿಗೆ ನೀಡಬೇಕು. ಇಲ್ಲದಿದ್ದರೆ ಜನ ಇವರನ್ನು ಕ್ಷಮಿಸುವುದಿಲ್ಲ. ಕಾಂಗ್ರೆಸ್‍ನವರು ತಮ್ಮ ದೊಂಬರಾಟವನ್ನು ನಿಲ್ಲಿಸಬೇಕು.

- ಗೋವಿಂದ ಕಾರಜೋಳ, ಜಲಸಂಪನ್ಮೂಲ ಸಚಿವ

---------------------------------------------

'ಹುಚ್ಚಾಸ್ಪತ್ರೆ ನಡೆಯಲಿ ಎಂದು ಬಿಟ್ಟಿದ್ದೇನೆ'

ಪಿಎಸ್ಸೈ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸುತ್ತಿದ್ದರು. ಬಿಜೆಪಿ ಸದಸ್ಯರು ಹಾಗೂ ಕಾಂಗ್ರೆಸ್ ಸದಸ್ಯರು ಭಿತ್ತಿ ಪತ್ರಗಳನ್ನು ಹಿಡಿದುಕೊಂಡು ಪರಸ್ಪರ ಘೋಷಣೆಗಳು, ಧಿಕ್ಕಾರಗಳನ್ನು ಕೂಗುತ್ತಿದ್ದರು. ಪದೇ ಪದೇ ಸದಸ್ಯರಿಗೆ ಮನವಿ ಮಾಡಿದರೂ ಯಾರೊಬ್ಬರೂ ತಮ್ಮ ಮಾತನ್ನು ಕೇಳದೆ ಇದ್ದಿದ್ದನ್ನು ಗಮನಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸದಸ್ಯರೊಬ್ಬರು ಏನೋ ಕೇಳಿದ್ದಕ್ಕೆ ‘ಹುಚ್ಚಾಸ್ಪತ್ರೆ ನಡೆಯಲಿ ಎಂದು ಬಿಟ್ಟಿದ್ದೇನೆ’ ಎಂದು ಬೇಸರ ಹೊರಹಾಕಿದರು. ತಕ್ಷಣ ಎಚ್ಚೆತ್ತ ಅವರು ಕೂಡಲೆ ತಮ್ಮ ಆಸನದ ಮುಂದಿನ ಮೈಕ್ ಅನ್ನು ಅವರು ಆಫ್ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News