ಪ್ರೊಟಿನ್‍ಯುಕ್ತ ಪೌಡರ್ ಹೆಸರಿನಲ್ಲಿ ಅಪಾಯಕಾರಿ ಪದಾರ್ಥಗಳ ಮಾರಾಟ ಮಾಡಿದರೆ ಕಾನೂನು ಕ್ರಮ: ಸಚಿವ ಸುಧಾಕರ್

Update: 2022-09-20 18:07 GMT

ಬೆಂಗಳೂರು, ಸೆ. 20: ದೇಹ ಸಣ್ಣ ಮತ್ತು ದಪ್ಪ ಆಗಲು ಪ್ರೊಟೀನ್‍ಯುಕ್ತ ಆಹಾರದ ನೆಪದಲ್ಲಿ ದೇಹಕ್ಕೆ ಅಪಾಯಕಾರಿ ಆಹಾರ ಪದಾರ್ಥಗಳನ್ನು ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದರೆ ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು' ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಇಂದಿಲ್ಲಿ ತಿಳಿಸಿದ್ದಾರೆ.

ಮಂಗಳವಾರ ವಿಧಾನಸಭೆಯ ಶೂನ್ಯವೇಳೆಯಲ್ಲಿ ಆಡಳಿತ ಪಕ್ಷದ ಮುಖ್ಯ ಸಚೇತಕ ಸತೀಶ್ ರೆಡ್ಡಿ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರ ನೀಡಿದ ಅವರು, ‘ಆಹಾರ ಸುರಕ್ಷತಾ ಇಲಾಖೆಯಿಂದ ಪರಿಶೀಲನೆ ನಡೆಸಲಾಗುವುದು. ಒಂದು ವೇಳೆ ಅನಧಿಕೃತವಾಗಿ ಪ್ರೊಟೀನ್ ಯುಕ್ತ ಪೌಡರ್ ಮಾರಾಟ ಮಾಡುತ್ತಿದ್ದರೆ ಕ್ರಮ ಕೈಗೊಳ್ಳುತ್ತೇವೆ. ಕೆಲ ಪ್ರೊಟೀನ್ ಪೌಡರ್ ಒಳ್ಳೆಯ ಗುಣಮಟ್ಟವನ್ನು ಹೊಂದಿವೆ. ಈ ಬಗ್ಗೆ ಎಫ್‍ಎಸ್‍ಎಸ್‍ಎಐ ಅನುಮತಿ ಇಲ್ಲದೆ ಮಾರಾಟ ಮಾಡಿದರೆ ಕ್ರಮ ಕೈಗೊಳ್ಳುತ್ತೇವೆ' ಎಂದು ಹೇಳಿದರು.

ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ಸತೀಶ್ ರೆಡ್ಡಿ, ‘ಜಿಮ್‍ಗಳಲ್ಲಿ ಬಾಡಿ ಬಿಲ್ಡಿಂಗ್ ಮಾಡುವವರಿಗೆ ನೀಡುವ ಪ್ರೊಟೀನ್ ಯುಕ್ತ ಪೌಡರ್ ನೆಪದಲ್ಲಿ ಅಪಾಯಕಾರಿಯಾದ ಪೌಡರ್ ನೀಡುತ್ತಿದ್ದು, ಇದರಿಂದ ನನ್ನ ಕ್ಷೇತ್ರದಲ್ಲಿ ಸಂತೋಷ್‍ಕುಮಾರ್ ಎಂಬ ಯುವಕ ಸಾವನ್ನಪ್ಪಿದ್ದಾನೆ. ಎರಡು ವರ್ಷದಿಂದ ಆತನಿಗೆ ಗಂಭೀರ ಸ್ವರೂಪದ ಆರೋಗ್ಯ ಸಮಸ್ಯೆಯಾಗಿದ್ದು, ಸುಮಾರು 50ಲಕ್ಷ ರೂ.ಗಳಷ್ಟು ಖರ್ಚು ಮಾಡಿದ್ದಾರೆ. ಇವುಗಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.

ಜಾಹೀರಾತು ಮೂಲಕ ದಾರಿ ತಪ್ಪಿಸಲಾಗುತ್ತಿದೆ; ಯು.ಟಿ.ಖಾದರ್

ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್ ಕಾಗೇರಿ, ‘ರಾಜ್ಯದಲ್ಲಿ ಇದು ದೊಡ್ಡ ಸಮಸ್ಯೆ. ಇಂತಹ ಮಾರಾಟ ಜಾಲ ದೇಶದಲ್ಲಿದೆ. ಪ್ರೊಟೀನ್ ಪೌಡರ್ ನಿಂದ ಸಮಸ್ಯೆ ಆಗುತ್ತಿದೆ. ಈ ಹಿನ್ನಲೆಯಲ್ಲಿ ವಿವಿಧ ಇಲಾಖೆ ಚರ್ಚೆ ಮಾಡಿ ಪೌಡರ್ ಪರಿಣಾಮಗಳ ಬಗ್ಗೆ ವೈಜ್ಞಾನಿಕ ಅಧ್ಯಯನ ಮಾಡಿ ಕ್ರಮ ಕೈಗೊಳ್ಳಬೇಕು' ಎಂದು ಸಲಹೆ ನೀಡಿದರು. ಇದಕ್ಕೆ ಧ್ವನಿಗೂಡಿಸಿದ ವಿಪಕ್ಷ ಉಪನಾಯಕ ಯು.ಟಿ.ಖಾದರ್, ‘ಮಾಧ್ಯಮಗಳಲ್ಲಿ ಬರುವ ಜಾಹೀರಾತುಗಳನ್ನು ನೋಡಿ ಇದನ್ನು ಜನರು ತೆಗೆದುಕೊಳ್ಳುತ್ತಾರೆ. ಜಾಹೀರಾತು ಮೂಲಕ ದಾರಿ ತಪ್ಪಿಸಲಾಗುತ್ತಿದೆ' ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News