ಅಸ್ಪೃಶ್ಯತೆ ಆಚರಣೆ ನಿಲ್ಲುವವರಗೂ ದಲಿತರಿಗೆ ಮೀಸಲಾತಿ ಬೇಕೇ ಬೇಕು: ಆರ್.ಧ್ರುವನಾರಾಯಣ ಪ್ರತಿಪಾದನೆ

Update: 2022-09-21 10:25 GMT
 ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿರುವ ಆರ್.ಧ್ರುವನಾರಾಯಣ

ಮೈಸೂರು: ದಲಿತರು ಎಷ್ಟೇ ಆರ್ಥಿಕವಾಗಿ ಮುಂದುವರೆದರೂ ಅಸ್ಪೃಶ್ಯತೆ ಆಚರಣೆ  ನಿಂತಿಲ್ಲ, ಹಾಗಾಗಿ  ಆರ್ಥಿಕವಾಗ ಸಬಲರಾಗಲಿ ಬಿಡಲಿ ಅಸ್ಪೃಶ್ಯತೆ ಹೋಗುವವರೆಗೂ  ಮೀಸಲಾತಿ ಮುಂದುವರೆಯಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಪ್ರತಿಪಾದಿಸಿದರು.

ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ  ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಆರ್ಥಿಕವಾಗಿ ಸಬಲರಾದ ದಲಿತರಿಗೆ ಮೀಸಲಾತಿ ನಿಲ್ಲಿಸಬೇಕು ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ ಈಶ್ವರಪ್ಪ ಓರ್ವ ದಡ್ಡ ಅವರ ಮಾತಿನಲ್ಲಿ ಅವರಿಗೆ ಹಿಡಿತವಿಲ್ಲ, ಈಗ ಹೇಳೀದ ಮಾತನ್ನು ಮತ್ತೆ ಬದಲಾಯಿಸಿ ದಡ್ಡರತರ ಮಾತನಾಡುತ್ತಾರೆ ಎಂದು ತಿರುಗೇಟು ನೀಡಿದರು.

ದಲಿತರು ಎಷ್ಟೆ ಆರ್ಥಿಕವಾಗಿ ಸಬಲರಾದರೂ ಮೀಸಲು ಕ್ಷೇತ್ರಬಿಟ್ಟು ಚುನಾವಣೆಯಲ್ಲಿ ಸ್ಪರ್ಧೆಮಾಡಲು ಸಾಧ್ಯವಿಲ್ಲ, ಒಂದು ವೇಳೆ ಸಾಮಾನ್ಯ ಕ್ಷೇತ್ರದಿಂದ  ಸ್ಪರ್ಧೆಮಾಡಿದರೂ ಗೆಲ್ಲುವುದು ಅಸಾಧ್ಯ, ತಮ್ಮ ಉದಾರತನದಿಂದ ಮೀಸಲು ಕ್ಷೇತ್ರವನ್ನು ಬಿಟ್ಟುಕೊಟ್ಟರೆ ಮಾತ್ರ ಬೇರೆಯವರಿಗೆ ಅವಕಾಶವಾಗುತ್ತದೆ. ಹಾಗಾಗಿ  ಎಲ್ಲಿಯವರೆಗೆ ಅಸ್ಪೃಶ್ಯತೆ ಆಚರೆಯಲ್ಲಿರುತ್ತದೊ ಅಲ್ಲಿಯವರೆಗೆ ಮೀಸಲಾತಿ ಬೇಕೆ ಬೇಕು ಎಂದು ಹೇಳಿದರು.

ಭಾರತ್ ಜೋಡೋ ಯಾತ್ರೆ ಕಂಡು ಬಿಜೆಪಿಯವರಿಗೆ ಭ್ರಮೆ ಶುರುವಾಗಿದೆ ಹೊರತು ಕಾಂಗ್ರೆಸ್ ನವರಿಗಲ್ಲ, ಹಾಗಾಗಿಯೆ ಬಿಜೆಪಿಯವರಿಗೆ ನಡುಕ ಉಂಟಾಗಿದೆ ಎಂದು ಮೈಸೂರಿನಲ್ಲಿ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆಗೆ ತಿರುಗೇಟು ನೀಡಿದರು.

ಕಾಂಗ್ರೆಸ್ ದೇಶದ ಐಕ್ಯತೆಗಾಗಿ ಹೋರಾಟ ಮಾಡುತ್ತಿದೆ. ಭಾರತ್ ಜೋಡೋ ಪಕ್ಷಾತೀತ ಪಾದಯಾತ್ರೆ. ಈ ಪಾದಯಾತ್ರೆಯಿಂದ ಕಾಂಗ್ರೆಸ್ ರಾಜಕೀಯ ಲಾಭ ಪಡೆಯಲು ಹೊರಟಿಲ್ಲ, ನಮ್ಮ ಪಾದಯಾಯತ್ರೆಗೆ ಎಲ್ಲರೂ ಬೆಂಬಲ ನೀಡುತ್ತಿದ್ದಾರೆ. ಈಗಾಗಲೇ ರೈತ ನಾಯಕ ಯೋಗೇಂದ್ರ ಯಾದವ್, ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಪಾದಯಾತ್ರೆಯಲ್ಲಿ ಭಾಗವಹಿಸಿದ್ದಾರೆ ಎಂದು ಹೇಳಿದರು.

ನಮ್ಮ ನಾಯಕರಾದ ರಾಹುಲ್ ಗಾಂಧಿ ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ 3570 ಕಿ.ಮೀ. ಪಾದಯಾತ್ರೆ ನಡೆಯುತ್ತಿದೆ. ಇದು ದೇಶದ ಇತಿಹಾಸದಲ್ಲೇ ಅತೀ ದೊಡ್ಡ ಪಾದಯಾತ್ರೆ. ಇಲ್ಲಿ ಸೇರುತ್ತಿರುವ ಜನರನ್ನು ಕಂಡು ಬಿಜೆಪಿಯವರಿಗೆ ಭಯ ಶುರುವಾಗಿದೆ ಎಂದು ಹೇಳಿದರು.

ಬಿಜೆಪಿಯವರು  ನಕಲಿ ದೇಶ ಭಕ್ತರು: ದೇಶದ ನಿಜವಾದ ನಕಲಿ ದೇಶ ಭಕ್ತರು ಬಿಜೆಪಿಯವರು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಕಿಡಿಕಾರಿದರು.

ದೇಶಭಕ್ತಿ ಹೆಸರಿನಲ್ಲಿ ಸುಳ್ಳುಗಳನ್ನೇ ಹೇಳಿಕೊಂಡು ಜನರಿಗೆ ಮಂಕು ಬೂದಿ ಎರಚಲು ಹೊರಟಿದ್ದಾರೆ. ಅಧಿಕಾರಕ್ಕೆ ಬಂದು 8 ವರ್ಷಗಳಾಯಿತು ತಮ್ಮ ಸಾಧನೆ ಏನು ಎಂಬುದನ್ನು ದೇಶದ ಜನರಿಗೆ ತಿಳಿಸಬೇಕಿದೆ. ಪ್ರತಿಸಾಮಾನ್ಯ ವ್ಯಕ್ತಿತ ಖಾತೆ 15 ಲಕ್ಷ ಹಾಕುತ್ತೇವೆ ಎಂದರು,  ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ನೀಡುತ್ತೇನೆ ಎಂದವರು ನೀಡಿದರ? ಯಾರು ನಕಲಿಗಳು ಎಂದು ಜನ ನೋಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ದೇಶದಲ್ಲಿ ಜನ ಆತಂಕದಲ್ಲೇ ಬದುಕುವಂತಾಗಿದೆ. ಕಾಶ್ಮೀರದಲ್ಲಿ ಪಂಡಿತರನ್ನು ಉಗ್ರರು ಗುಂಡಿಕ್ಕಿ ಕೊಲ್ಲುತ್ತಿದ್ದಾರೆ. ಚೈನಾದವರು ಭಾರತದ ಒಳಗೆ ನುಸುಳಿ ಹಲವು ಪ್ರದೇಶಗಳನ್ನು ಆಕ್ರಮಿಸಿಕೊಂಡಿದ್ದಾರೆ. ಇಂತಹದರಲ್ಲಿ ಬಿಜೆಪಿಯವರು ದೇಶದ ಸುರಕ್ಷತೆ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಗುಡುಗಿದರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಕಲ್ಲಿದ್ದಲು ಖಾತೆಯನ್ನು ಹೊಂದಿದ್ದಾರೆ. ಕರ್ನಾಟಕಕ್ಕೆ ನಿಮ್ಮ ಸಾಧನೆ ಏನು ಎಂದು ತಿಳಿಸುವ ಬದಲು ಬರೀ ಕಾಂಗ್ರೆಸ್ ಪಕ್ಷವನ್ನೇ ಟೀಕೆ ಮಾಡುವುದಾಗಿದೆ. ಅವರಿಗೆ ಕಾಂಗ್ರೆಸ್ ಭಯ ಕಾಡುತ್ತಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News