ಆರೋಪಿಗಳ ರಕ್ಷಣೆಗೆ ಸ್ವತಃ ಗೃಹಸಚಿವರೇ ನಿಂತರೆ ಪೊಲೀಸರಿಗೆ ಯಾರು ದಿಕ್ಕು?: ದಿನೇಶ್ ಗುಂಡೂರಾವ್

Update: 2022-09-21 12:17 GMT

ಬೆಂಗಳೂರು: 'ದ್ವೇಷ ಭಾಷಣಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ 34 ಪ್ರಕರಣಗಳನ್ನು ರಾಜ್ಯ ಸರ್ಕಾರ ಹಿಂಪಡೆದಿರುವುದು ಸಮಂಜಸವಲ್ಲ.‌ ಇದು ಸಮಾಜದಲ್ಲಿ ದ್ವೇಷ ಹರಡಲು ಕಿಡಿಗೇಡಿಗಳಿಗೆ ಇನ್ನಷ್ಟು ಪ್ರೇರಣೆ ನೀಡಿದಂತಾಗುತ್ತದೆ. ಈ ಪ್ರಕರಣಗಳನ್ನು ವಾಪಾಸ್ ಪಡೆಯದಂತೆ ಕಾನೂನು ಇಲಾಖೆ ಹಾಗೂ DG&IGP ವರದಿ ನೀಡಿದ್ದಾರೆ. ಆದರೂ ಸರ್ಕಾರ ಈ ಪ್ರಕರಣ ವಾಪಾಸ್ ಪಡೆದಿದೆ' ಎಂದು ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ''ಹಿಂದೂ ಜಾಗರಣಾ ವೇದಿಕೆಯ ಸಂಚಾಲಕ ಜಗದೀಶ್ ಕಾರಂತ್ ಎಂಬ ವ್ಯಕ್ತಿಯ ವಿರುದ್ಧ ದ್ವೇಷ ಭಾಷಣ ಮಾಡಿದ ಸಂಬಂಧ 4 ಪ್ರಕರಣ ದಾಖಲಾಗಿದೆ. ಸಚಿವ ಅಂಗಾರ ಮನವಿಯಂತೆ ಜಗದೀಶ್ ಕಾರಂತ್ ವಿರುದ್ಧದ ಈ ಎಲ್ಲಾ ಪ್ರಕರಣಗಳನ್ನು ಸರ್ಕಾರ ಕೈಬಿಟ್ಟಿದೆ. ಕಾರಂತ್ ಹೆಬಿಚ್ಯೂಯಲ್ ಅಫೆಂಡರ್. ಇಂತಹ ವ್ಯಕ್ತಿಯ ಪ್ರಕರಣ ಹಿಂಪಡೆದು ಸರ್ಕಾರ ಏನು ಸಂದೇಶ ಕೊಡಲು ಹೊರಟಿದೆ.?'' ಎಂದು ಪ್ರಶ್ನೆ ಮಾಡಿದ್ದಾರೆ. 

'ಹಾವೇರಿಯ ಹಲಗೇರಿಯಲ್ಲಿ ಪೊಲೀಸರ ಮೇಲೆ ಹಲ್ಲೆ‌ ಮಾಡಿದ್ದವರ ವಿರುದ್ಧ ಅಂದಿನ ನಮ್ಮ ಸರ್ಕಾರ ಪ್ರಕರಣ ದಾಖಲಿಸಿತ್ತು. ಈಗ ಗೃಹ ಸಚಿವ ಜ್ಞಾನೇಂದ್ರರೇ ಆ ಪ್ರಕರಣ ಕೈ ಬಿಡುವಂತೆ ಮನವಿ‌ ಮಾಡಿ ಹಿಂಪಡೆಯುವಂತೆ ಮಾಡಿದ್ದಾರೆ.ತಮ್ಮ ಇಲಾಖೆಯ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿದ ಆರೋಪಿಗಳ ರಕ್ಷಣೆಗೆ ಸ್ವತಃ ಗೃಹಸಚಿವರೇ ನಿಂತರೆ ಪೊಲೀಸರಿಗೆ ಯಾರು ದಿಕ್ಕು?' ಎಂದು ಕಿಡಿಕಾರಿದ್ದಾರೆ. 

'ದ್ವೇಷ ಭಾಷಣದ ಮೂಲಕ ಸಮಾಜದಲ್ಲಿ ಅಶಾಂತಿ ಮೂಡಿಸುವ ಕಿಡಿಗೇಡಿಗಳು ವಿಷಜಂತುಗಳಿದ್ದಂತೆ. ಯಾವುದೇ ಜವಬ್ಧಾರಿಯುತ ಸರ್ಕಾರ ಇಂತಹ ವಿಷಜಂತುಗಳ ಹುಟ್ಟಡಗಿಸಬೇಕು. ಆದರೆ ಈ ಸರ್ಕಾರ ದ್ವೇಷ ಹರಡುವವರ ಬೆನ್ನಿಗೆ ನಿಂತು ರಕ್ಷಣೆ ನೀಡುತ್ತಿದೆ. ಹೀಗಾದರೆ ಸಮಾಜದಲ್ಲಿ ಶಾಂತಿ ಕಾಪಾಡುವುದಾದರೂ ಹೇಗೆ.? ಸಾಮರಸ್ಯ ಮೂಡುವುದಾದರೂ ಹೇಗೆ.?' ಎಂದು ದಿನೇಶ್ ಗುಂಡೂರಾವ್ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 

ಹಿಂದೂ ಸಮಾಜೋತ್ಸವ, ಜನಜಾಗೃತಿ ಸಮಾವೇಶ ಮತ್ತು ‘ಲವ್‌ ಜಿಹಾದ್‌’ ವಿರುದ್ಧದ ಪ್ರತಿಭಟನೆ ಸಂದರ್ಭದಲ್ಲಿ ಕೋಮುದ್ವೇಷದ ಭಾಷಣ ಮಾಡಿದ ಆರೋಪದಲ್ಲಿ ಹಿಂದೂ ಜಾಗರಣ ವೇದಿಕೆಯ ಸಂಚಾಲಕ ಜಗದೀಶ ಕಾರಂತ ಹಾಗೂ ಕೆಲವು ಹಿಂದುತ್ವ ಸಂಘಟನೆಗಳ ಪ್ರಮುಖರ ವಿರುದ್ಧ ದಾಖಲಾಗಿದ್ದ ಒಟ್ಟು 34 ಮೊಕದ್ದಮೆಗಳನ್ನು ಹಿಂಪಡೆಯಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News