ಕಾಂಗ್ರೆಸ್ ಸಭಾತ್ಯಾಗದ ನಡುವೆ ವಿಧಾನಸಭೆಯಲ್ಲಿ ‘ಮತಾಂತರ ನಿಷೇಧ' ವಿಧೇಯಕ ಅಂಗೀಕಾರ

Update: 2022-09-21 12:30 GMT

ಬೆಂಗಳೂರು, ಸೆ. 21: ‘ರಾಜಕೀಯ ದುರುದ್ದೇಶದಿಂದ ‘ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ(ಮತಾಂತರ ನಿಷೇಧ) ವಿಧೇಯಕ-2022'ವನ್ನು ತಂದಿದ್ದು, ಅಸಂವಿಧಾನಿಕ ವಿಧೇಯಕವನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಸದಸ್ಯರ ಸಭಾತ್ಯಾಗದ ನಡುವೆ ಪರಿಷತ್ತಿನಲ್ಲಿ ತಿದ್ದುಪಡಿಯೊಂದಿಗೆ ಅಂಗೀಕಾರಗೊಂಡ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ನೀಡಲಾಯಿತು.

ಬುಧವಾರ ವಿಧಾನಸಭೆಯಲ್ಲಿ ಶಾಸನ ರಚನೆ ಕಲಾಪದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ವಿಧೇಯಕ ಮಂಡಿಸಿ ವಿವರಣೆ ನೀಡಿದರು. ‘ಆಮಿಷ, ಒತ್ತಾಯ, ಬಲವಂತ, ವಂಚನೆ ಸಾಧನೆಗಳ ಮೂಲಕ ಮಾಡಲಾದ ಮತಾಂತರ ಹಾಗೂ ಸಾಮೂಹಿಕ ಮತಾಂತರ' ತಡೆಗಟ್ಟುವ ಉದ್ದೇಶದಿಂದ ವಿಧೇಯಕವನ್ನು ತರಲಾಗಿದೆ. ಸದುದ್ದೇಶದಿಂದ ಈ ಕಾನೂನು ರೂಪಿಸಲಾಗಿದೆ' ಎಂದು ತಿಳಿಸಿದರು.

ಇದಕ್ಕೆ ಆಕ್ಷೇಪಿಸಿದ ವಿಪಕ್ಷ ಉಪನಾಯಕ ಯು.ಟಿ.ಖಾದರ್, ‘ಸರಕಾರ ತಂದಿರುವ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ(ಮತಾಂತರ ನಿಷೇಧ) ವಿಧೇಯಕ' ಸಂವಿಧಾನ ವಿರೋಧಿಯಾಗಿದೆ. ದುರುದ್ದೇಶದಿಂದ ರಾಜಕೀಯ ಪ್ರೇರಿತ ಕಾನೂನು ಜಾರಿಗೆ ಮುಂದಾಗಿದ್ದು, ನ್ಯಾಯಾಲಯದಲ್ಲಿ ಇದು ಬಿದ್ದು ಹೋಗಲಿದೆ. ಹೀಗಾಗಿ ವಿಧೇಯಕವನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.

ಈ ಮಧ್ಯೆ ವಿಧೇಯಕ ಪರ್ಯಾಲೋಚನೆಗೆ ಸ್ಪೀಕರ್ ಕಾಗೇರಿ ಅವರು ಮುಂದಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸದಸ್ಯರಾದ ಕೃಷ್ಣಬೈರೇಗೌಡ, ಪ್ರಿಯಾಂಕ್ ಖರ್ಗೆ, ಈಶ್ವರ್ ಖಂಡ್ರೆ ಸೇರಿದಂತೆ ಇನ್ನಿತರರು ವಿಪಕ್ಷ ಉಪನಾಯಕ ಯು.ಟಿ.ಖಾದರ್ ನೇತೃತ್ವದಲ್ಲಿ ಸಭಾತ್ಯಾಗ ಮಾಡಿದರು. ಈ ನಡುವೆ ಸ್ಪೀಕರ್ ಕಾಗೇರಿ ಅವರು ವಿಧೇಯಕವನ್ನು ಮತಕ್ಕೆ ಹಾಕಿದಾಗ ಧ್ವನಿಮತದ ಅಂಗೀಕಾರ ದೊರಕಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News