ಮೆಕಾಲೆ ಶಿಕ್ಷಣ ಪದ್ಧತಿಯನ್ನು ಕೊನೆಗೊಳಿಸಲು ಎನ್‍ಇಪಿ ಜಾರಿ: ಸಚಿವ ಬಿ.ಸಿ. ನಾಗೇಶ್

Update: 2022-09-21 13:17 GMT

ಬೆಂಗಳೂರು: ಸೆ.21: ‘ಬ್ರಿಟಿಷರು ತಮ್ಮ ಅನುಕೂಲಕ್ಕೆ ತಕ್ಕಂತೆ ರಚಿಸಿಕೊಂಡ ಮೆಕಾಲೆ ಶಿಕ್ಷಣ ಪದ್ಧತಿಗೆ ಕೊನೆ ಹಾಡಬೇಕು ಎಂಬುದು ಸ್ವಾತಂತ್ರ್ಯಪೂರ್ವದಿಂದಲೂ ನಮ್ಮ ಹಿರಿಯರು, ಮಹನೀಯರು ಕಂಡ ಕನಸಾಗಿದೆ. ಅದನ್ನು ನನಸು ಮಾಡಲು, ಭಾರತೀಯರನ್ನು ಸ್ವಾವಲಂಬಿ, ಸ್ವಾಭಿಮಾನಿ, ಸರ್ವರ ಅಭಿವೃದ್ಧಿ ಪರವಾದ ಶಿಕ್ಷಣ ನೀತಿಯನ್ನು ಕೇಂದ್ರ ಸರಕಾರ ಜಾರಿಗೆ ತರುತ್ತಿದೆ’ ಎಂದು ಸಚಿವ ಬಿ.ಸಿ. ನಾಗೇಶ್ ಹೇಳಿದರು.

ಬುಧವಾರ ಶಿಕ್ಷಕರ ಸದನದಲ್ಲಿ ಆಯೋಜಿಸಿದ್ದ ‘ಎನ್‍ಇಪಿ ರಾಜ್ಯಮಟ್ಟದ ಕಾರ್ಯಾಗಾರ’ದಲ್ಲಿ ಮಾತನಾಡಿದ ಅವರು, ಮಕ್ಕಳು, ಪಾಲಕರು, ಶಿಕ್ಷಕರು, ಕೈಗಾರಿಕೆ, ಉದ್ಯಮಗಳು, ಕಂಪನಿಗಳು, ಹಲವು ಕ್ಷೇತ್ರಗಳ ತಜ್ಞರು, ಶಿಕ್ಷಣ ತಜ್ಞರು, ರಾಜಕಾರಣಿಗಳು, ಪರಿಣಿತರು ಗ್ರಾಮ ಮಟ್ಟದಲ್ಲಿ ನೀಡಲಾಗುವ, ಸಲಹೆ, ಆಲೋಚನೆಗಳು, ವಿಷಯಗಳ ಕುರಿತು ಅಭಿಪ್ರಾಯಗಳನ್ನು ಪಡೆದು ಸಮಗ್ರವಾಗಿ ಪರ್ಯಾಲೋಚನೆ ನಡೆಸಿ ‘ರಾಷ್ಟ್ರೀಯ ಶಿಕ್ಷಣ ನೀತಿ-2020’ನ್ನು ಅನುಷ್ಠಾನಗೊಳಿಸುತ್ತಿದೆ ಎಂದರು. 

‘ಶಿಕ್ಷಕರ ಎಲ್ಲ ಸಮಸ್ಯೆಗಳನ್ನು ಪರಿಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಹಲವಾರು ಬೇಡಿಕೆಗಳನ್ನು ಈಡೇರಿಸಲಾಗಿದೆ. ಉಳಿದ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುವ ಪ್ರಯತ್ನವನ್ನು ರಾಜ್ಯ ಸರಕಾರ ಮಾಡುತ್ತಿದೆ’ ಎಂದು ಅವರು ಹೇಳಿದರು.

ವಿಧಾನ ಪರಿಷತ್ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ, ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ, ಪುಟ್ಟಣ್ಣ, ಚಿದಾನಂದಗೌಡ, ಅ.ದೇವೇಗೌಡ, ಎಸ್.ಎಲ್. ಬೋಜೇಗೌಡ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News