ಕರಾವಳಿಯಲ್ಲಿ ESI ಸೂಪರ್ ಸ್ಟೆಷಾಲಿಟಿ ಆಸ್ಪತ್ರೆ ಪ್ರಾರಂಭಿಸಲು ಯು.ಟಿ.ಖಾದರ್ ಆಗ್ರಹ

Update: 2022-09-21 13:26 GMT

ಬೆಂಗಳೂರು, ಸೆ. 21: ‘ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಕರಾವಳಿ ಭಾಗದಲ್ಲಿ ಇಎಸ್‍ಐ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಆರಂಭಿsಸಬೇಕು. ಇದರಿಂದ ಬಡಕೂಲಿ ಕಾರ್ಮಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ' ಎಂದು ವಿಪಕ್ಷ ಉಪನಾಯಕ ಯು.ಟಿ.ಖಾದರ್ ಆಗ್ರಹಿಸಿದ್ದಾರೆ.

ಬುಧವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ‘ಕರ್ನಾಟಕ ರಾಜ್ಯ ವಿಮಾ ಆಸ್ಪತ್ರೆ ಆರಂಭಿಸುವ ಸಂಬಂಧ ಕೇಂದ್ರ ಸರಕಾರಕ್ಕೆ ಕೂಡಲೇ ಪ್ರಸ್ತಾವನೆ ಸಲ್ಲಿಸಬೇಕು. ಬೆಂಗಳೂರು ಹಾಗೂ ಕಲಬುರ್ಗಿಯಲ್ಲಿ ಇಎಸ್‍ಐ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಿವೆ. ಆದರೆ, ದಕ್ಷಿಣ ಕನ್ನಡ, ಉಡುಪಿ ಭಾಗದಲ್ಲಿ ಇಎಸ್‍ಐ ಆಸ್ಪತ್ರೆ ಇಲ್ಲ' ಎಂದು ಗಮನ ಸೆಳೆದರು.

ಬಳಿಕ ಉತ್ತರ ನೀಡಿ ಪ್ರತಿಕ್ರಿಯಿಸಿದ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್, ‘ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹೈಟೆಕ್ ಆಸ್ಪತ್ರೆಗಳ ಕೊರತೆ ಇಲ್ಲ. ಎರಡೂ ಜಿಲ್ಲೆಗಳಲ್ಲಿ 16 ಹೈಟೆಕ್ ಆಸ್ಪತ್ರೆಗಳ ಜತೆ ಇಲಾಖೆ ಒಪ್ಪಂದ ಮಾಡಿಕೊಂಡಿದೆ. ಹೀಗಾಗಿ ಅನಾರೋಗ್ಯ ಪೀಡಿತ ಕಾರ್ಮಿಕರಿಗೆ ಯಾವುದೇ ತೊಂದರೆ ಆಗುತ್ತಿಲ್ಲ. ಗುಣಮಟ್ಟದ ಆರೋಗ್ಯ ಸೇವೆಯನ್ನು ಕಾರ್ಮಿಕರಿಗೆ ಕಲ್ಪಿಸಲಾಗುತ್ತಿದೆ' ಎಂದು ಸ್ಪಷ್ಟಪಡಿಸಿದರು.

‘ವಿಮಾದಾರರ ಸಂಖ್ಯೆಗೆ ಅನುಗುಣವಾಗಿ ಕರಾವಿ ಮಾರ್ಗಸೂಚಿ ಅನ್ವಯ ವಿಮಾ ಆಸ್ಪತ್ರೆ, ಚಿಕಿತ್ಸಾಲಯಗಳಲ್ಲಿ ಹಾಗೂ ನೋಂದಾಯಿತ ಆಸ್ಪತ್ರೆಗಳಲ್ಲಿ ಕಾರ್ಮಿಕರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಲ್ಲದೆ, ಕೇಂದ್ರದಿಂದ ಕಳೆದ ವರ್ಷ 149 ಕೋಟಿ ರೂ. ಗಳಷ್ಟು ಹಣ ಬಿಡುಗಡೆ ಮಾಡಲಾಗಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ಹಣ ಬಿಡುಗಡೆ ಮಾಡಲಾಗುತ್ತಿದೆ. ಹಣ ಬಿಡುಗಡೆಯಲ್ಲಿ ಯಾವುದೇ ವಿಳಂಬ ಮಾಡಿಲ್ಲ' ಎಂದು ಅವರು ವಿವರಣೆ ನೀಡಿದರು.

‘ಕನಿಷ್ಠ 50 ಸಾವಿರ ನೋಂದಾಯಿತ ವಿಮಾದಾರರಿದ್ದಲ್ಲಿ ಮಾತ್ರ 100 ಹಾಸಿಗೆಯ ಕರಾವಿ ಆಸ್ಪತ್ರೆ ಹಾಗೂ ಕನಿಷ್ಠ 3 ಸಾವಿರ ವಿಮಾದಾರರಿದ್ದಲ್ಲಿ 2 ವೈದ್ಯರ ಕರಾವಿ ಚಿಕಿತ್ಸಾಲಯ ಪ್ರಾರಂಭಿಸಲು ಕರಾವಿ ನಿಗಮ ಮಾರ್ಗಸೂಚಿ ಹೊರಡಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಗಂಜೀಮಠ, ಉಜಿರೆ, ಬೆಳ್ತಂಗಡಿ ಹಾಗೂ ಮೂಡಬಿದ್ರಿಯಲ್ಲಿ ಹೊಸದಾಗಿ ಕರಾವಿ ಚಿಕಿತ್ಸಾಯಲಗಳನ್ನು ಪ್ರಾರಂಭಿಸಲು ನಿಗಮವು ಅನುಮತಿ ನೀಡಿದ್ದು, ಆ ಪ್ರಕ್ರಿಯೆ ಆರಂಭಿಸಲಾಗಿದೆ' ಎಂದು ಅವರು ತಿಳಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News