‘ಆ ಭೂಮಿಯನ್ನು ಖಾಸಗಿಯವರಿಗೆ ಬಿಟ್ಟುಬಿಡಿ': ಅಧಿಕಾರಿಗಳ ವಿಳಂಬ ನೀತಿಗೆ ಸ್ಪೀಕರ್ ಕಾಗೇರಿ ಅಸಮಾಧಾನ

Update: 2022-09-21 13:40 GMT

ಬೆಂಗಳೂರು, ಸೆ. 21: ‘ಜಿಲ್ಲಾಧಿಕಾರಿಗಳು ಮಲಗಿದ್ದು, ಆ ಭೂಮಿಯನ್ನು ಅವರಿಗೆ ಬಿಟ್ಟು ಬಿಡಿ. 10 ವರ್ಷಗಳಿಂದ ಭೂಮಿ ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲವೆಂದರೆ ಹೇಗೆ? ನಮ್ಮ ವಕೀಲರು ಏನು ಮಾಡುತ್ತಿದ್ದಾರೆ' ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಖಾಸಗಿಯವರ ಸ್ವಾಧೀನದಲ್ಲಿರುವ ತೋಟಗಾರಿಕೆ ಇಲಾಖೆಗೆ ಸೇರಿದ ಜಮೀನು ವಶಪಡಿಸಿಕೊಳ್ಳುವಲ್ಲಿ ವಿಳಂಬ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಬುಧವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಯಶವಂತರಾಯಗೌಡ ಪಾಟೀಲ್ ಕೇಳಿದ ಪ್ರಶ್ನೆಗೆ ತೋಟಗಾರಿಕೆ ಸಚಿವ ಮುನಿರತ್ನ ಉತ್ತರ ನೀಡುತ್ತಿದ್ದ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್ ಕಾಗೇರಿ, ‘ವಿಜಯಪುರ ಜಿಲ್ಲೆಯ ಜಿಲ್ಲಾಧಿಕಾರಿಗೆ ಯಾವ ಒತ್ತಡವಿದೆಯೋ? ಸರಕಾರಿ ಪ್ರಕ್ರಿಯೆಗಳು ಹೇಗೆ ನಡೆಯುತ್ತವೆ ಎಂಬುದು ಎಲ್ಲರಿಗೂ ಗೊತ್ತಿದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಕೋರ್ಟ್‍ನಲ್ಲಿರುವ ಪ್ರಕರಣ ಇತ್ಯರ್ಥಪಡಿಸಲು ಹಾಗೂ ಭೂಸ್ವಾಧೀನಕ್ಕೆ ಸೂಕ್ತ ಕ್ರಮ ವಹಿಸಬೇಕು' ಎಂದು ಸಲಹೆ ನೀಡಿದರು.

ಆರಂಭಕ್ಕೆ ಉತ್ತರ ನೀಡಿದ ಸಚಿವ ಮುನಿರತ್ನ, ‘ವಿಜಯಪುರ ಜಿಲ್ಲೆ ಇಂಡಿಯಲ್ಲಿ ತೋಟಗಾರಿಕೆ ಇಲಾಖೆ ಸ್ವಾಧೀನದಲ್ಲಿದ್ದ 18.28 ಎಕರೆ ಜಮೀನನ್ನು ಕೋರ್ಟ್ ಆದೇಶದ ಮೇರೆಗೆ ಬರಗಾಲ ನಿವಾರಣಾ ಸಂಸ್ಥೆಯು ಏಕಪಕ್ಷೀಯವಾಗಿ ಸ್ವಾಧೀನಕ್ಕೆ ಪಡೆದುಕೊಂಡಿದೆ. 1958ರಿಂದ 2009ರವರೆಗೆ ತೋಟಗಾರಿಕೆ ಇಲಾಖೆ ಅಭಿವೃದ್ಧಿಪಡಿಸಿ ತೋಟಗಾರಿಕೆ ಉದ್ದೇಶವನ್ನು ಈಡೇರಿಸಿದೆ. 2012ರಿಂದ ಕೋರ್ಟ್‍ನಲ್ಲಿ ಪ್ರಕರಣದ ವಿಚಾರಣೆ ಬಾಕಿ ಇದ್ದು, ಆಭೂಮಿ ಕೈಬಿಡುವ ಪ್ರಶ್ನೆಯೇ ಇಲ್ಲ' ಎಂದು ಸ್ಪಷ್ಟಣೆ ನೀಡಿದರು.

ಇದನ್ನೂ ಓದಿ: ನಾಳೆ (ಸೆ.22) ಸದನದಲ್ಲಿ ಸಚಿವರೊಬ್ಬರ ಅಕ್ರಮ ಬಯಲು ಮಾಡುವೆ: ಎಚ್.ಡಿ ಕುಮಾರಸ್ವಾಮಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News