ಕಡೂರು | ಬಸ್ಸಿನಿಂದ ಬಿದ್ದು ಗಾಯಗೊಂಡಿದ್ದ ಯುವತಿಯ ಮೆದುಳು ನಿಷ್ಕ್ರಿಯ: ಅಂಗಾಂಗ ದಾನಕ್ಕೆ ಮುಂದಾದ ಪೋಷಕರು

Update: 2022-09-22 05:06 GMT
 ರಕ್ಷಿತಾ ಬಾಯಿ - ವಿದ್ಯಾರ್ಥಿನಿ

ಚಿಕ್ಕಮಗಳೂರು, ಸೆ.20:  ಕಾಲೇಜು ವಿದ್ಯಾರ್ಥಿನಿಯೊಬ್ಬಳು ಬಸ್ಸಿನಿಂದ ಕೆಳಗೆ ಬಿದ್ದ ಪರಿಣಾಮ ತಲೆಗೆ ತೀವ್ರ ಪೆಟ್ಟಾಗಿ ಮೆದುಳು ನಿಷ್ಕ್ರೀಯಗೊಂಡಿದ್ದು,  ಆಕೆಯ ದೇಹದ ಅಂಗಾಂಗಗಳನ್ನು ದಾನ ಮಾಡಲು ಮುಂದಾಗುವ ಮೂಲಕ ಆಕೆಯ ಪೋಷಕರು  ಮಾನವೀಯತೆ ಮೆರೆದಿದ್ದಾರೆ. 

ಕಡೂರು ತಾಲೂಕಿನ ಸೋಮನಹಳ್ಳಿ ತಾಂಡ್ಯದ ಶೇಖರನಾಯ್ಕ ಹಾಗೂ ಲಕ್ಷ್ಮೀಬಾಯಿ ದಂಪತಿ ಪುತ್ರಿಯಾಗಿರುವ 17ವರ್ಷದ ರಕ್ಷಿತಾ ಬಾಯಿ ನಗರದ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‍ನಲ್ಲಿದ್ದು ಕೊಂಡು ಬಸವನಹಳ್ಳಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದಳು.

ರವಿವಾರ ಕಾಲೇಜಿಗೆ ರಜೆ ಇದ್ದ ಕಾರಣಕ್ಕೆ ಮನೆಗೆ ಹೋಗಲು ಚಿಕ್ಕಮಗಳೂರು ನಗರದಿಂದ ಕೆಎಸ್ಸಾರ್ಟಿಸಿ ಬಸ್ ಏರಿ ಕುಳಿತಿದ್ದಳು. ನಗರದ ಎಐಟಿ ವೃತ್ತದ ಸಮೀಪ ಬಸ್ ತೆರಳುತ್ತಿದ್ದಾಗ ಆಕೆಯ ಮೊಬೈಲ್‍ಗೆ ಗೆಳತಿಯ ಕರೆಯೊಂದು ಬಂದಿದ್ದು, ಆಕೆಯೊಂದಿಗೆ ಮೊಬೈಲ್‍ನಲ್ಲಿ ಮಾತನಾಡುತ್ತಲೇ ಬಸ್ ಇಳಿಯಲು ಸಿದ್ಧಳಾಗಿ ಕಂಡಕ್ಟರ್ ಬಳಿ ಬಸ್ ನಿಲ್ಲಿಸಲು ಹೇಳಿದ್ದಾಳೆ. ಚಾಲಕ ಬಸ್ ನಿಲ್ಲಿಸಲು ಮುಂದಾಗಿದ್ದರೂ ಯುವತಿ ರೇಖಾ ಬಸ್ ನಿಲ್ಲುವುದಕ್ಕೂ ಮುನ್ನ ರಸ್ತೆ ಕಾಲಿಟ್ಟಿದ್ದು, ಈ ವೇಳೆ ಆಯತಪ್ಪಿ ರಸ್ತೆಗೆ ಬಿದ್ದಿದ್ದಾಳೆ. ಆಕೆ ಬಿದ್ದ ರಭಸಕ್ಕೆ ಆಕೆಯ ತಲೆ ರಸ್ತೆಗೆ ಬಲವಾಗಿ ಬಡಿದು ತಲೆಗೆ ತೀವ್ರ ಗಾಯಗಳಾಗಿತ್ತೆನ್ನಲಾಗಿದೆ. 

ಬಳಿಕ ಗಾಯಗೊಂಡಿದ್ದ ವಿದ್ಯಾರ್ಥಿನಿಯನ್ನು ಸ್ಥಳದಲ್ಲಿದ್ದ ಸಾರ್ವಜನಿಕರು ನಗರದ ಮಲ್ಲೇಗೌಡ ಸರಕಾರಿ ಜಿಲ್ಲಾಸ್ಪತ್ರೆ ರವಾನಿಸಿದ್ದಾರೆ. ಚಿಕಿತ್ಸೆ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ಕರೆದೊಯ್ಯುವಂತೆ ಪೋಷಕರಿಗೆ ತಿಳಿಸಿದ್ದಾರೆ. ಕೂಡಲೇ ವಿದ್ಯಾರ್ಥಿನಿಯನ್ನು ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಪರೀಕ್ಷೆಗೆ ಒಳಪಡಿಸಿದ ವೈದ್ಯರು ಯುವತಿಯ ಮೆದುಳು  ನಿಷ್ಕ್ರಿಯಗೊಂಡಿರುವುದನ್ನು ದೃಢಪಡಿಸಿದ್ದಾರೆ. 

ಬಳಿಕ ಯುವತಿಯ ಪೋಷಕರು , ಶಿವಮೊಗ್ಗದಿಂದ ಮತ್ತೆ ಚಿಕ್ಕಮಗಳೂರು ನಗರದ ಮಲ್ಲೇಗೌಡ ಸರಕಾರಿ ಆಸ್ಪತ್ರೆಗೆ ಕರೆತಂದು ದಾಖಲಿಸಿದ್ದಾರೆ. ವೈದ್ಯರು ವೆಂಟಿಲೇಟರ್ ನಲ್ಲಿ ವಿದ್ಯಾರ್ಥಿನಿಗೆ ಚಿಕಿತ್ಸೆ ಮುಂದುವರಿದ್ದರೂ ಆಕೆಯ ಮೆದುಳು ನಿಷ್ಕ್ರೀಯಗೊಂಡಿರುವುದರಿಂದ ವಿದ್ಯಾರ್ಥಿನಿ ಬದುಕುಳಿಯುವ ಸಾಧ್ಯತೆ ಕಡಿಮೆ ಇದೆ. ವಿದ್ಯಾರ್ಥಿನಿಯ ಬಹು ಅಂಗಾಂಗಗಳನ್ನು ದಾನ ಮಾಡುವ ಅವಕಾಶವಿದೆ ಎಂದು ವೈದ್ಯರು ಪೋಷಕರಿಗೆ ಮನವರಿಕೆ ಮಾಡಿದ್ದಾರೆ. ಇದಕ್ಕೆ ವಿದ್ಯಾರ್ಥಿನಿಯ ಪೋಷಕರು, ಸಂಬಂಧಿಕರು ಒಪ್ಪಿಕೊಂಡಿದ್ದು, ಪೋಷಕರು ಮಗಳ ಬಹು ಅಂಗಾಂಗ ದಾನಕ್ಕೆ ಮುಂದಾದ ಹಿನ್ನೆಲೆಯಲ್ಲಿ ವೈದ್ಯರು ಹಾಗೂ ಜಿಲ್ಲಾಡಳಿತ ಆಕೆಯ ಬಹುಅಂಗಾಂಗ ದಾನಕ್ಕೆ ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಗುರುವಾರ ವಿದ್ಯಾರ್ಥಿನಿ ರಕ್ಷಿತಾಳ ಹೃದಯ ಸೇರಿದಂತೆ ಬಹು ಅಂಗಾಂಗಗಳ ದಾನ ಪ್ರಕ್ರಿಯೆ ನಡೆಯಲಿದೆ.

---------------------------------------

'ವಿದ್ಯಾರ್ಥಿನಿಯನ್ನು ವೆಂಟಿಲೇಟರ್ ನಲ್ಲಿ ಇರಿಸಲಾಗಿದ್ದು, ಬಹು ಅಂಗಾಂಗ ದಾನ ಪ್ರಕ್ರಿಯೆ ಮುಗಿಯುವವರೆಗೂ ನಿಗಾವಹಿಸಲು ಸರಕಾರಿ ಮಲ್ಲೇಗೌಡ ಜಿಲ್ಲಾಸ್ಪತ್ರೆಯ ವೈದ್ಯ ಡಾ.ಚಂದ್ರಶೇಖರ್ ಸಾಲಿಮಠ, ಡಾ.ಎಂ.ಪ್ರಶಾಂತ್, ಡಾ.ನಾಗರಾಜ್ ನೇತೃತ್ವದಲ್ಲಿ ತಂಡ ರಚಿಸಲಾಗಿದ್ದು, ಈ ತಂಡ ಈಗಾಗಲೇ ಕಾರ್ಯಪ್ರವೃತ್ತವಾಗಿದೆ'.

-ಡಾ.ಮೋಹನ್ ಕುಮಾರ್, ಜಿಲ್ಲಾ ಸರ್ಜನ್.

-------------------------

'ನನ್ನ ಮಗಳು ಸಾ-ಬಾರದು, ಮತ್ತಷ್ಟು ವರ್ಷ ಅವಳು ಬದುಕಬೇಕು. ಬೇರೆಯವರ ಬದುಕಿಗೆ ಬೆಳಕಾಗಬೇಕೆಂದು ಪ್ರೀತಿಯಿಂದ ಅಂಗಾಂಗ ದಾನಕ್ಕೆ ಒಪ್ಪಿಕೊಂಡಿದ್ದೇವೆ. ಮಗಳು ಸತ್ತೋದಳು ಎಂದು ಕೊರಗುವ ಬದಲು ಜೀವಂತ ಇದ್ದಾಳೆಂಬ ಭರವಸೆಯಿಂದ ದಾನಕ್ಕೆ ಮುಂದಾಗಿದ್ದೇವೆ'.

-ಲಕ್ಷ್ಮೀ ಬಾಯಿ, ವಿದ್ಯಾರ್ಥಿನಿ ತಾಯಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News