ಅನ್ವರ್ ಮಾಣಿಪ್ಪಾಡಿ ವರದಿ ಮಂಡನೆಗೆ ಆಗ್ರಹ: ಆಡಳಿತ-ಪ್ರತಿಪಕ್ಷದ ಸದಸ್ಯರ ಮಧ್ಯೆ ಪರಿಷತ್‍ನಲ್ಲಿ ತೀವ್ರ ವಾಗ್ವಾದ

Update: 2022-09-21 15:30 GMT

ಬೆಂಗಳೂರು, ಸೆ.21: ರಾಜ್ಯದಲ್ಲಿ 2.5 ಲಕ್ಷ ಕೋಟಿ ರೂ.ಗಳಿಗೂ ಅಧಿಕ ಮೊತ್ತದ ವಕ್ಫ್ ಆಸ್ತಿ ಕಬಳಿಕೆ ಕುರಿತಂತೆ ಅನ್ವರ್ ಮಾಣಿಪ್ಪಾಡಿ ವರದಿಯನ್ನು ಪರಿಷತ್‍ನಲ್ಲಿ ಮಂಡಿಸಬೇಕು ಎಂದು ಆಡಳಿತ ಪಕ್ಷದ ಸದಸ್ಯ ವೈ.ಎ.ನಾರಾಯಣಸ್ವಾಮಿ ಅವರ ಹೇಳಿಕೆ ಆಡಳಿತ ಹಾಗೂ ಪ್ರತಿಪಕ್ಷಗಳ ಸದಸ್ಯರ ನಡುವೆ ಚರ್ಚೆಗೆ ಗ್ರಾಸವಾಗಿ ಆರೋಪ-ಪ್ರತ್ಯಾರೋಪ ಸುರಿಮಳೆಗೆರೆಯುವಂತಾಯಿತು. 

ಬುಧವಾರ ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆಯೇ ವೈ.ಎ. ನಾರಾಯಣಸ್ವಾಮಿ, ವಕ್ಫ್ ಆಸ್ತಿಗೆ ಸಂಬಂಧಿಸಿದಂತೆ ವರದಿ ಮಂಡಿಸಬೇಕು ಎನ್ನುವ ಹೇಳಿಕೆಗೆ ಆಡಳಿತ ಪಕ್ಷದ ಸದಸ್ಯರಾದ ಪ್ರಾಣೇಶ್, ತೇಜಸ್ವಿನಿಗೌಡ, ರವಿಕುಮಾರ್, ಮುನಿರಾಜುಗೌಡ ಸೇರಿದಂತೆ ಮತ್ತಿತರರು ಧ್ವನಿಗೂಡಿಸಿ, 2.5 ಲಕ್ಷ ಕೋಟಿಗೂ ಅಧಿಕ ಅವ್ಯವಹಾರವಾಗಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಸರಕಾರ ಈ ವರದಿಯನ್ನು ಮಂಡಿಸಬೇಕು ಎಂದು ಆಗ್ರಹಿಸಿದರು, ಆಡಳಿತ ಪಕ್ಷದ ಸದಸ್ಯರ ಬೇಡಿಕೆ ಪ್ರತಿಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಸದಸ್ಯರಾದ ಸಲೀಂ ಅಹಮದ್, ರಮೇಶ್, ನಾಗರಾಜು, ಅರವಿಂದ ಕುಮಾರ್ ಅರಳಿ ಸೇರಿದಂತೆ ಹಲವು ಸದಸ್ಯರು ಪ್ರತಿ ಆಕ್ಷೇಪಿಸಿದ್ದರಿಂದ ಎರಡೂ ಕಡೆ ಆರೋಪ-ಪ್ರತ್ಯಾರೋಪ ಮುಗಿಲು ಮುಟ್ಟಿತು.

ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ಪ್ರತಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ನಿಮ್ಮದೇ ಸರಕಾರವಿದೆ. ಧಮ್ಮು, ತಾಕತ್ತು ಇದ್ದರೆ ತನಿಖೆ ನಡೆಸಿ ಎಂದು ಆಡಳಿತ ಪಕ್ಷದ ಸದಸ್ಯರಿಗೆ ಸವಾಲು ಹಾಕಿ, ವಕ್ಫ್ ಆಸ್ತಿಗೆ ಸಂಬಂಧಿಸಿದಂತೆ ಶೇ.40 ರಷ್ಟು ಕಮಿಷನ್ ಬಂದಿಲ್ಲ. ಹೀಗಾಗಿ, ಈ ವಿಷಯವನ್ನು ಪ್ರಸ್ತಾಪ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು. ಅದಕ್ಕೆ ಪ್ರತಿಕ್ರಿಯಿಸಿದ ವೈ.ಎ.ನಾರಾಯಣಸ್ವಾಮಿ, ನಮಗೆ ಧಮ್ಮು ತಾಕತ್ತು ಎಲ್ಲ ಇದೆ. ಮೊದಲು ವರದಿಯನ್ನು ಸರಕಾರ ಮಂಡನೆ ಮಾಡಲಿ ಎಂದು ಒತ್ತಾಯಿಸಿದರು.

ಈ ಹಂತದಲ್ಲಿ ಸಭಾಪತಿ ರಘನಾಥ್ ರಾವ್ ಮಲ್ಕಾಪುರೆ, ಯಾರಾದರೂ ಒಬ್ಬರು ವಿಷಯ ಏನು ಅಂತ ಹೇಳಿ ಎಂದು ಸದಸ್ಯರಿಗೆ ಮನವಿ ಮಾಡಿದರೂ ಎರಡೂ ಕಡೆಯ ಸದಸ್ಯರು ತಮ್ಮ ತಮ್ಮ ಹೇಳಿಕೆಗಳನ್ನು ನೀಡುತ್ತಾ ಪರಸ್ಪರ ಆರೋಪ-ಪ್ರತ್ಯಾರೋಪದಲ್ಲಿ ನಿರತರಾದರು. ಈ ಹಂತದಲ್ಲಿ ಪ್ರತಿಕ್ರಿಯಿಸಿದ ಪ್ರತಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ರಾಜ್ಯ ಸರಕಾರದ ಶೇ.40ರಷ್ಟು ಕಮಿಷನ್ ಹಗರಣವನ್ನು ನಾವು ವಿಷಯ ಪ್ರಸ್ತಾಪ ಮಾಡಲಿದ್ದೇವೆ. ಇದನ್ನು ಹಾದಿ ತಪ್ಪಿಸಲೆಂದೇ ಈ ಪ್ರಕರಣವನ್ನು ಮುಂದೆ ತಂದಿದ್ದಾರೆ ಎಂದರು. ಇದರಿಂದ ಮತ್ತೆ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಆರೋಪ ಪ್ರತ್ಯಾರೋಪ ನಡೆಯಿತು. 

ಸಚಿವ ಆರ್.ಅಶೋಕ್ ಪ್ರತಿಕ್ರಿಯಿಸಿ, ಯಾರ್ಯಾರ ಕಾಲದಲ್ಲಿ ಎಷ್ಟೆಷ್ಟು ಲಂಚ ನಡೆದಿದೆ ಎನ್ನುವುದನ್ನು ಹೇಳಲು ಸಿದ್ಧವಿದ್ದೇವೆ ಎಂದರು. ಇದರಿಂದ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ, ಗದ್ದಲ, ಕೋಲಾಹಲಕ್ಕೆ ಕಾರಣವಾಯಿತು. ಇದರ ನಡುವೆಯೇ ಸಭಾಪತಿಗಳು ಸಲೀಂ ಅಹಮದ್ ಅವರಿಗೆ ಪ್ರಶ್ನೆ ಕೇಳಲು ಅವಕಾಶ ಮಾಡಿಕೊಟ್ಟರು. ಇದಕ್ಕೆ ಆಡಳಿತ ಪಕ್ಷದ ಸದಸ್ಯರು ಆಕ್ಷೇಪಿಸಿ ವಕ್ಫ್ ಆಸ್ತಿಗೆ ಸಂಬಂಧಿಸಿದಂತೆ ಹೇಳಿಕೆ ನೀಡಬೇಕು ಎನ್ನುವ ವಿಷಯ ಗದ್ದಲ, ಗೊಂದಲಕ್ಕೆ ಕಾರಣವಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News