ಶೇ.40 ಕಮಿಷನ್ ಆರೋಪ ವಿಧಾನಸಭೆಯಲ್ಲಿ ಪ್ರತಿಧ್ವನಿ; ಚರ್ಚೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪಟ್ಟು

Update: 2022-09-21 15:39 GMT

ಬೆಂಗಳೂರು, ಸೆ. 21: ‘ರಾಜ್ಯ ಸರಕಾರ ವಿರುದ್ದದ ಶೇ.40ರಷ್ಟು ಕಮಿಷನ್ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ಭ್ರಷ್ಟಾಚಾರದಿಂದ ಜನರ ತೆರಿಗೆ ಹಣ ಲೂಟಿಯಾಗುತ್ತಿದ್ದು, ಈ ಕುರಿತು ನಿಲುವಳಿ ಸೂಚನೆಯಡಿ ಚರ್ಚೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪಟ್ಟುಹಿಡಿದಿದ್ದು ವಿಧಾನಸಭೆ ಕಲಾಪದಲ್ಲಿ ಕೆಲಕಾಲ ಚರ್ಚೆಗೆ ಕಾರಣವಾಯಿತು.

ಬುಧವಾರ ಪ್ರಶ್ನೋತ್ತರ ಅವಧಿಯ ಬಳಿಕ ವಿಷಯ ಪ್ರಸ್ತಾಪಿಸಿದ ಸಿದ್ದರಾಮಯ್ಯ, ‘ಶೇ.40ರಷ್ಟು ಕಮಿಷನ್ ಹಗರಣದ ಬಗ್ಗೆ ನಿಯಮ 60 ಅಡಿಯಲ್ಲಿ ಚರ್ಚೆ'ಗೆ ಅವಕಾಶ ಕೋರಿದ ಸಂದರ್ಭದಲ್ಲಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ‘ನಿಲುವಳಿ ಸೂಚನೆ ನೋಟಿಸ್ ಜೊತೆಗೆ ಸೂಕ್ತ ದಾಖಲೆಗಳನ್ನು ನೀಡಬೇಕು. ನಿಲುವಳಿ ನೋಟಿಸ್ ಕೊಡುತ್ತೀರಿ. ಆದರೆ, ಯಾವುದೇ ಪೂರಕ ದಾಖಲೆ ನೀಡಿಲ್ಲ' ಎಂದು ಆಕ್ಷೇಪ ವ್ಯಕ್ತಪಡಿಸಿದರು. 

ಇಬ್ಬರದ್ದು ಒಂದೇ ಗರಡಿ: ಆಗ ಎದ್ದುನಿಂತ ಸಿದ್ದರಾಮಯ್ಯ, ‘ನೀವು(ಮಾಧುಸ್ವಾಮಿ) ಚರ್ಚೆಯನ್ನು ಕಡಿತ ಮಾಡಲು ಬೇಕಾದ ವಾದ ಮಾಡುತ್ತೀರಿ' ಎಂದು ತಿರುಗೇಟು ನೀಡಿದರು. ಈ ವೇಳೆ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಮಾಧುಸ್ವಾಮಿ ಹಾಗೂ ನಿಮ್ಮದು(ಸಿದ್ದರಾಮಯ್ಯ) ಒಂದೇ ಗರಡಿ ಅಲ್ವಾ?' ಎಂದು ಹಾಸ್ಯ ಚಟಾಕಿ ಹಾರಿಸಿದರು.

ಚರ್ಚೆಗೆ ಸರಕಾರ ಸಿದ್ಧ: ‘ಭ್ರಷ್ಟಾಚಾರದ ವಿಷಯ ಬಹಳ ಗಂಭೀರವಾದದ್ದು, ರಾಜ್ಯ ಸರಕಾರ ಈ ವಿಚಾರ ಚರ್ಚೆಗೆ ಸಿದ್ಧವಾಗಿದೆ. ಆದರೆ, ಸಂಪೂರ್ಣ ಚರ್ಚೆಗೆ ವಿಪಕ್ಷ ಸಿದ್ಧವಿರಬೇಕು. ಯಾವ ರೀತಿಯಲ್ಲಿ ವಿಷಯ ಚರ್ಚೆ ಮಾಡಬೇಕು ಎಂದು ಸ್ಪೀಕರ್ ನಿರ್ಣಯ ಮಾಡಲಿ. ನಾವು ಸಂಪೂರ್ಣ ಸಿದ್ಧರಿದ್ದೇವೆ' ಎಂದು ಬಸವರಾಜ ಬೊಮ್ಮಾಯಿ ಅವರು ಹೇಳಿದರು.

ಮತ್ತೊಂದು ನಿಲುವಳಿ: ‘ಹಿಂದಿನ ಸರಕಾರದ ನೇಮಕಾತಿ ಅಕ್ರಮದ ಚರ್ಚೆಗೆ ಅವಕಾಶ ಕೋರಿ' ಬಿಜೆಪಿ ಸದಸ್ಯ ಪಿ. ರಾಜೀವ್ ನಿಲುವಳಿ ಸೂಚನೆ ನೋಟಿಸ್ ನೀಡಿದ್ದು, ‘ಆ ವಿಚಾರದ ಚರ್ಚೆಗೆ ಕಾಲಾವಕಾಶ ನಿಗದಿಪಡಿಸಬೇಕು. ಅಥವಾ ಇದೇ ವಿಚಾರದಲ್ಲಿಯೂ ಚರ್ಚೆಗೆ ಕೈಗೆತ್ತಿಕೊಳ್ಳಬೇಕು' ಎಂದು ಆಗ್ರಹಿಸಿದರು. ಆಗ ಎದ್ದು ನಿಂತ ಸಿದ್ದರಾಮಯ್ಯ, ‘ಎಲ್ಲ ವಿಚಾರವನ್ನು ಚರ್ಚೆ ಮಾಡಲಿ. 2006ರಿಂದ ಇಲ್ಲಿಯವರೆಗೂ ಆಗಿರುವ ಎಲ್ಲ ಅಕ್ರಮದ ಬಗ್ಗೆಯೂ ನ್ಯಾಯಾಂಗ ತನಿಖೆ ಮಾಡಿಸಿ' ಎಂದು ಸವಾಲು ಹಾಕಿದರು.

ಬಳಿಕ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಬಿಜೆಪಿ ಸದಸ್ಯ ಪಿ.ರಾಜೀವ್ ನೀಡಿದ ನಿಲುವಳಿ ಸೂಚನೆ ನೋಟಿಸ್‍ಗಳನ್ನು ಅಂಗೀಕರಿಸಿದ್ದು, ‘ನಿಯಮ 69ರಡಿಯಲ್ಲಿ ಎರಡೂ ವಿಚಾರಗಳನ್ನು ಚರ್ಚೆಗೆ ಅವಕಾಶ ನೀಡಲಾಗುವುದು' ಎಂದು ಸ್ಪೀಕರ್ ಕಾಗೇರಿ ಅವರು ರೂಲಿಂಗ್ ನೀಡಿದ್ದರಿಂದ ಆ ವಿಷಯಕ್ಕೆ ತೆರೆ ಎಳೆಯಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News