ಶಿವಮೊಗ್ಗ | ಉಗ್ರ ಸಂಘಟನೆಯ ಜೊತೆ ನಂಟಿನ ಆರೋಪ: ಶಂಕಿತರ ಮನೆ, ತುಂಗಾ ನದಿ ಬಳಿ ಸ್ಥಳ ಮಹಜರು

Update: 2022-09-21 17:44 GMT

ಶಿವಮೊಗ್ಗ, ಸೆ.21: ನಿಷೇಧಿತ ಐಸಿಸ್ ಉಗ್ರ ಸಂಘಟನೆಯ ಜೊತೆ ನಂಟು ಹೊಂದಿದ್ದಾರೆಂಬ ಆರೋಪದಲ್ಲಿ ಬಂಧಿತರಾಗಿರುವ ಇಬ್ಬರು ಶಂಕಿತರನ್ನು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಶಿವಮೊಗ್ಗ ಪೊಲೀಸರ ವಿಶೇಷ ತನಿಖಾ ತಂಡ ಈಗಾಗಲೇ ಬಂಧಿಸಿರುವ ಶಿವಮೊಗ್ಗದ ಸಿದ್ದೇಶ್ವರ ನಗರದ ಸೈಯದ್ ಯಾಸೀನ್ ಮತ್ತು ಮಂಗಳೂರಿನ ಮಾಝ್ ಮುನೀರ್ ಅಹ್ಮದ್‌ನನ್ನು ತೀವ್ರ ತನಿಖೆ ನಡೆಸುತ್ತಿದ್ದಾರೆ. ತಲೆ ಮರೆಸಿಕೊಂಡಿರುವ ತೀರ್ಥಹಳ್ಳಿಯ ಸೊಪ್ಪುಗುಡ್ಡೆಯ ಮುಹಮ್ಮದ್ ಶಾರೀಕ್‌ಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ ಎಂದು ತಿಳಿದು ಬಂದಿದೆ.

ಸ್ಥಳ ಮಹಜರು: ಯಾಸೀನ್‌ನನ್ನು ಸಿದ್ದೇಶ್ವರ ನಗರದಲ್ಲಿರುವ ಆತನ ಮನೆಗೆ ಕರೆತಂದು ಪೊಲೀಸರು ಒಂದೂವರೆ ಗಂಟೆಗೂ ಹೆಚ್ಚು ಕಾಲ ಸ್ಥಳ ಮಹಜರು ನಡೆಸಿದರು. ಅಲ್ಲದೆ ಯಾಸೀನ್ ಮನೆ ಸಮೀಪ ಗುರುಪುರದ ತುಂಗಾ ನದಿ ದಂಡೆ ಬಳಿ ಕರೆದೊಯ್ದು ಮಹಜರು ನಡೆಸಿದ್ದಾರೆ. ಅಲ್ಲದೆ ಬಂಧಿತ ಯಾಸೀನ್ ಮತ್ತು ಮಾಝ್‌ನ ಮೊಬೈಲ್ ಅನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ವೈದ್ಯಕೀಯ ಪರೀಕ್ಷೆ: ಬುಧವಾರ ಮಾಝ್ ಮುನೀರ್ ಅಹ್ಮದ್ ಹಾಗೂ ಯಾಸೀನ್‌ನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ವೈದ್ಯಕೀಯ ಪರೀಕ್ಷೆ ನಂತರ ತೀರ್ಥಹಳ್ಳಿ ಡಿವೈಎಸ್ಪಿ ಶಾಂತವೀರ ನೇತೃತ್ವದ ತಂಡ ಮಾಝ್‌ನನ್ನು ಹೆಚ್ಚಿನ ತನಿಖೆಗಾಗಿ ಮಂಗಳೂರಿಗೆ ಕರೆದೊಯ್ದು ತಪಾಸಣೆ ನಡೆಸಿದೆ ಎಂದು ತಿಳಿದು ಬಂದಿದೆ.

ಎಫ್‌ಎಸ್‌ಎಲ್ ತಂಡದ ಆಗಮನ: ಶಿವಮೊಗ್ಗಕ್ಕೆ ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ಅಧಿಕಾರಿಗಳು ಆಗಮಿಸಿದ್ದಾರೆ. ನಗರದ ವಿವಿಧೆಡೆ ಶೋಧ ಕಾರ್ಯ ನಡೆಸಿದ್ದಾರೆ. ಅಲ್ಲದೆ ರಾಷ್ಟ್ರೀಯ ತನಿಖಾ ಸಂಸ್ಥೆ ಕೂಡ ಶಿವಮೊಗ್ಗಕ್ಕೂ ಭೇಟಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಬಾಂಬ್ ನಿಷ್ಕ್ರಿಯ ದಳದ ಅಧಿಕಾರಿಗಳ ತಂಡ ಕೂಡ ಶಿವಮೊಗ್ಗಕ್ಕೆ ಭೇಟಿ ನೀಡಿ ತುಂಗಾ ನದಿ ಹಾಗೂ ಬಂಧಿತ ಆರೋಪಿಗಳ ಮನೆ ಸೇರಿದಂತೆ ವಿವಿಧೆಡೆ ತಪಾಸಣೆ ನಡೆಸಿದೆ ಎಂದು ತಿಳಿದು ಬಂದಿದೆ.

► ಕುಟುಂಬಸ್ಥರಿಂದ ದೂರು: ಸೈಯದ್ ಯಾಸೀನ್ ತನ್ನ ಸ್ನೇಹಿತರ ಜೊತೆ ಪ್ರವಾಸಕ್ಕೆ ಎಂದು ಹೋಗಿದ್ದು, ಪೋನ್ ಸ್ವೀಚ್ಡ್ ಆಫ್ ಆಗಿದ್ದ ಕಾರಣ ಯಾಸೀನ್ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದರು ಎಂದು ಯಾಸೀನ್ ಅಜ್ಜ ಶಾಮೀರ್ ಖಾನ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

► ಸುಳಿವು ನೀಡಿದ ಝಬೀಯುಲ್ಲ ಸಾರ್ವಕರ್-ಟಿಪ್ಪು ಫ್ಲೆಕ್ಸ್ ವಿಚಾರದ ನಂತರ ಉಂಟಾದ ಗಲಭೆಯಲ್ಲಿ ಪ್ರೇಮ್ ಸಿಂಗ್ ಎಂಬ ಯುವಕನಿಗೆ ಚಾಕು ಇರಿತದ ಪ್ರಕರಣದಲ್ಲಿ ಬಂಧಿತನಾದ ಝಬೀಯುಲ್ಲ ವಿಚಾರಣೆ ವೇಳೆ ಉಗ್ರ ಜಾಲದ ಸಣ್ಣ ಸುಳಿವು ನೀಡಿದ್ದ ಎಂದು ಎಸ್ಪಿ ಬಿ.ಎಂ ಲಕ್ಷ್ಮೀಪ್ರಸಾದ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

‘ಝಬಿಯನ್ನು ಕೆಲವು ದಿನ ಪೊಲೀಸ್ ಕಸ್ಟಡಿಯಲ್ಲಿಟ್ಟು ವಿಚಾರಣೆ ನಡೆಸಿದ ವೇಳೆ ಆತ ಸಿದ್ದೇಶ್ವರ ನಗರದ ಯಾಸೀನ್‌ನ ಚಟುವಟಿಕೆಗಳ ಬಗ್ಗೆ ಒಂದು ಸಣ್ಣ ಸುಳಿವೊಂದನ್ನು ನೀಡಿದ್ದ. ತೀವ್ರ ತನಿಖೆ ನಡೆಸಿದ್ದಾಗ ಉಗ್ರ ಜಾಲ ಬಯಲಿಗೆ ಬಂದಿದೆ. ಆದರೆ, ಈ ಘಟನೆಗೂ ಸಾವರ್ಕರ್-ಟಿಪ್ಪು ಫ್ಲೆಕ್ಸ್ ವಿಚಾರದ ಗಲಾಟೆಗೂ ಯಾವುದೇ ಸಂಬಂಧ ಇರುವುದು ಸದ್ಯಕ್ಕೆ ಬಯಲಿಗೆ ಬಂದಿಲ್ಲ. ಝಬಿಗೂ, ಈ ಉಗ್ರವಾದ ಸಂಬಂಧಕ್ಕೂ ಇರುವ ಬಗ್ಗೆಯೂ ಮಾಹಿತಿ ಇಲ್ಲ ಎಂದು ಎಸ್ಪಿ ಸ್ಪಷ್ಟಪಡಿಸಿದ್ದಾರೆ. 

ಇಬ್ಬರು ಶಂಕಿತರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಯುಎಪಿಎ ಕೇಸ್ ದಾಖಲಾಗಿದೆ. ಕೇಸ್ ದಾಖಲಾದ ಹಿನ್ನೆಲೆಯಲ್ಲಿ ತನಿಖೆ ಮುಂದುವರಿದಿದೆ. ಶಿವಮೊಗ್ಗ ಸುತ್ತಮುತ್ತ ಭಾಗದಲ್ಲಿ ಶೋಧ ಮುಂದುವರಿದಿದ್ದು, ಮಂಗಳೂರಿನಲ್ಲೂ ಕಾರ್ಯಾಚರಣೆಯನ್ನು ಮುಂದುವರಿಸಲಾಗುವುದು. ಬಂಧಿತರ ಜೊತೆ ಸಂಪರ್ಕದಲ್ಲಿ ಇದ್ದವರ ವಿಚಾರಣೆಯನ್ನೂ ಮಾಡಲಾಗುತ್ತದೆ. ಬಿ.ಎಂ.ಲಕ್ಷ್ಮೀಪ್ರಸಾದ್, ಎಸ್ಪಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News