ಬಳಕೆಯಾಗದ ಅಂಬೇಡ್ಕರ್ ಭವನಗಳು ಗ್ರಾಮ ಗ್ರಂಥಾಲಯಗಳನ್ನಾಗಿ ಪರಿವರ್ತನೆ: ಸಚಿವ ಕೋಟ ಶ್ರೀನಿವಾಸ ಪೂಜಾರಿ

Update: 2022-09-21 16:27 GMT

ಬೆಂಗಳೂರು, ಸೆ. 21: ‘ರಾಜ್ಯದಲ್ಲಿ ಬಳಕೆ ಮಾಡದ ಬೀಗ ಹಾಕಿದ ಸ್ಥಿತಿಯಲ್ಲಿರುವ ಒಂದು ಸಾವಿರಕ್ಕೂ ಹೆಚ್ಚು ಡಾ.ಬಿ.ಆರ್.ಅಂಬೇಡ್ಕರ್ ಭವನಗಳನ್ನು ಇನ್ನು ‘ಗ್ರಾಮ ಗ್ರಂಥಾಲಯ'ಗಳನ್ನಾಗಿ ಪರಿವರ್ತಿಸಲು ಕ್ರಮ ವಹಿಸಲಾಗುವುದು' ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಬುಧವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್‍ನ ಹಿರಿಯ ಸದಸ್ಯಎ.ಟಿ.ರಾಮಸ್ವಾಮಿ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು,‘ಅಂಬೇಡ್ಕರ್ ಭವನಗಳನ್ನು ಸದ್ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ಗ್ರಂಥಾಲಯಗಳನ್ನಾಗಿ ಪರಿವರ್ತನೆ ಮಾಡುವ ಕಾರ್ಯವನ್ನು ಶೀಘ್ರವೇ ಕೈಗೆತ್ತಿಕೊಳ್ಳಲಾಗುವುದು. ಅಪೂರ್ಣಗೊಂಡಿರುವ ಅಂಬೇಡ್ಕರ್ ಭವನಗಳನ್ನು ಪೂರ್ಣಗೊಳಿಸಲು ಅನುದಾನದ ಕೊರತೆ ಇಲ್ಲ' ಎಂದು ಸ್ಪಷ್ಟಪಡಿಸಿದರು.

‘ಅರಕಲಗೂಡು ಕ್ಷೇತ್ರದಲ್ಲಿ 2012-13ನೆ ಸಾಲಿನಲ್ಲಿ ಒಟ್ಟು 25 ಭವನಗಳನ್ನು ಮಂಜೂರು ಮಾಡಿದ್ದು, 18 ಭವನಗಳನ್ನು ಪೂರ್ಣಗೊಳಿಸಿದ್ದು, ಇನ್ನೂ ಭವನ ನಿರ್ಮಾಣ ಪ್ರಗತಿಯಲ್ಲಿದೆ. ಒಂದು ಭವನ ನಿರ್ಮಾಣಕ್ಕೆ ನಿವೇಶನದ ಸಮಸ್ಯೆ ಇದೆ. ಹೀಗಾಗಿ ನಿವೇಶನ ಒದಗಿಸಲು ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದು, ನಿವೇಶನ ಸಿಕ್ಕರೆ ಕೂಡಲೇ ಭವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು' ಎಂದು ಅವರು ಭರವಸೆ ನೀಡಿದರು.

ಮೇಲ್ವಿಚಾರಕರ ಭರ್ತಿ: ‘ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿ ಖಾಲಿ ಇರುವ 212 ಮೇಲ್ವಿಚಾರಕ ಹುದ್ದೆಗಳನ್ನು ಕೆಪಿಎಸ್ಸಿ ಮೂಲಕ ಶೀಘ್ರದಲ್ಲೇ ಭರ್ತಿ ಮಾಡಿಕೊಳ್ಳಲಾಗುವುದು. ರಾಜ್ಯದಲ್ಲಿ ಒಟ್ಟು 1,142 ಹಾಸ್ಟೆಲ್ ಮೇಲ್ವಿಚಾರಕ ಹುದ್ದೆಗಳು ಖಾಲಿ ಇವೆ. ಈ ಪೈಕಿ 211 ಪುರುಷ ಹಾಗೂ 221 ಮಹಿಳಾ ಮೇಲ್ವಿಚಾರಕ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗಿದೆ. ಪ್ರಸ್ತುತ 212 ಹುದ್ದೆಗಳನ್ನು ಕೆಪಿಎಸ್ಸಿ ಮೂಲಕವೇ ಭರ್ತಿ ಮಾಡಿಕೊಳ್ಳುತ್ತೇವೆ' ಎಂದು ಕುಮಾರ್ ಬಂಗಾರಪ್ಪ ಪ್ರಶ್ನೆಗೆ ಕೋಟ ಶ್ರೀನಿವಾಸ ಪೂಜಾರಿ ಉತ್ತರಿಸಿದರು.

ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ಕುಮಾರ್ ಬಂಗಾರಪ್ಪ, ‘ಇತ್ತೀಚೆಗೆ ಪಂಜಾಬ್‍ನ ವಿವಿಯಲ್ಲಿ ನಡೆದಿರುವ ಘಟನೆ ಎಲ್ಲರಿಗೂ ಗೊತ್ತಾಗಿದೆ. ಹೀಗಾಗಿ ವಿದ್ಯಾರ್ಥಿ ನಿಲಯಗಳಲ್ಲಿ ಸರಕಾರ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ. ಮೇಲ್ವಿಚಾರಕರೆ ಇಲ್ಲದಿದ್ದರೆ ಕಷ್ಟವಾಗಲಿದೆ. ಹೀಗಾಗಿ ಹೊರ ಗುತ್ತಿಗೆ ಆಧಾರದ ಮೇಲೆ ಮೇಲ್ವಿಚಾರಕರನ್ನು ನೇಮಕ ಮಾಡಿಕೊಳ್ಳಬೇಕು' ಎಂದು ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News