ಉಪನಗರ ರೈಲ್ವೆ ಯೋಜನೆಗೆ ಅನಂತ್ ಕುಮಾರ್ ಹೆಸರಿಡುವ ಕುರಿತು ಸಿಎಂ ಜತೆ ಚರ್ಚಿಸಿ ಕೇಂದ್ರಕ್ಕೆ ಶಿಫಾರಸು: ಸಚಿವ ಸೋಮಣ್ಣ

Update: 2022-09-21 16:52 GMT

ಬೆಂಗಳೂರು, ಸೆ.21: ಬೆಂಗಳೂರು ಉಪನಗರ ರೈಲ್ವೆ ಯೋಜನೆಗೆ ಕೇಂದ್ರದ ಮಾಜಿ ಸಚಿವ ಅನಂತ್‍ಕುಮಾರ್ ಹೆಸರಿಡುವ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜತೆ ಚರ್ಚಿಸಿ ಕೇಂದ್ರಕ್ಕೆ ಶಿಫಾರಸು ಮಾಡುವ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

ಬುಧವಾರ ವಿಧಾನ ಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಎಚ್.ಎಸ್.ಗೋಪಿನಾಥ್ ಅವರು ರೈಲ್ವೆ ಯೋಜನೆಗೆ ಅನಂತ್‍ಕುಮಾರ್ ಅವರ ಹೆಸರನ್ನು ಇಡಬೇಕೆಂದು ಸಚಿವರಲ್ಲಿ ಮನವಿ ಮಾಡಿದರು. 

ಇದಕ್ಕೆ ಉತ್ತರಿಸಿದ ಸಚಿವ ವಿ.ಸೋಮಣ್ಣ ಅವರು, ಈ ಯೋಜನೆ ಅನಂತ್ ಕುಮಾರ್ ಕನಸು, ಅವರ ಹೆಸರನ್ನು ಉಪನಗರ ರೈಲ್ವೆಗೆ ಇಡುವ ಕುರಿತು ಸಿಎಂ ಜೊತೆ ಚರ್ಚಿಸಿ ಸಂಪುಟದಲ್ಲಿ ನಿರ್ಧಾರ ಕೈಗೊಂಡು ಕೇಂದ್ರಕ್ಕೆ ಶಿಫಾರಸು ಮಾಡಲಾಗುತ್ತದೆ. ಸೆ.22ರಂದು ಅನಂತ್ ಕುಮಾರ್ ಅವರ 63 ನೆ ಜನ್ಮದಿನ ಎಂದು ನೆನೆದ ಅವರು ಈ ಹಿಂದೆ ಹುಟ್ಟುಹಬ್ಬಕ್ಕೆ ಫೋನ್ ಮಾಡಿ ಶುಭಾಶಯ ಕೋರಿದ್ದೆ. ಅವರ ಕೊನೆಯ ದಿನದ ನೋವುಗಳನ್ನು ಯಾರೊಂದಿಗೂ ಅವರು ಹಂಚಿಕೊಳ್ಳಲಿಲ್ಲ ಎಂದು ಅವರ ಸೇವೆ ಸ್ಮರಿಸಿದರು.

ಉಪನಗರ ರೈಲು ಯೋಜನೆ 5.5 ಸಾವಿರ ಕೋಟಿಯಿಂದ 15 ಸಾವಿರ ಕೋಟಿಗೆ ಹೋಗಿದೆ. ನಾಲ್ಕು ಭಾಗವಾಗಿ ಯೋಜನೆಯನ್ನು ವಿಂಗಡಿಸಲಾಗಿದೆ. ಇದರಲ್ಲಿ ಮೊದಲ ಕಾರಿಡಾರ್ 41 ಕಿ.ಮೀ ಬೆಂಗಳೂರಿನಿಂದ ದೇವನಹಳ್ಳಿಗೆ ಇದ್ದು, ಬೈಯಪ್ಪನಹಳ್ಳಿ-ಚಿಕ್ಕಬಾಣಾವರ, ಕೆಂಗೇರಿ-ವೈಟ್‍ಫೀಲ್ಡ್, ಹೀಲಲಿಗೆ-ರಾಜಾನುಕುಂಟೆ ವಲಯ ಸೇರಿ 147 ಕಿ.ಮೀ ವ್ಯಾಪ್ತಿಯ ದೊಡ್ಡ ಯೋಜನೆ ಇದಾಗಿದೆ. ಮೊದಲ ಯೋಜನೆಯ ಶಂಕುಸ್ಥಾಪನೆ ಆಗಿದೆ. ಈಗ ಬೈಯಪ್ಪನಹಳ್ಳಿ, ಚಿಕ್ಕಬಾಣಾವರ ಎರಡನೇ ಕಾರಿಡಾರ್ ಕೈಗೆತ್ತಿಕೊಂಡಿದ್ದೇವೆ. ಇದಕ್ಕೆ 85 ಪರ್ಸೆಂಟ್ ಜಾಗವನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು. 

ಮೊದಲ ಹಂತದ ಸಿವಿಲ್ ಕಾಮಗಾರಿ ಆರಂಭಿಸಿದ್ದು, ಎರಡನೆ ಹಂತದ ಟೆಂಡರ್ ಸದ್ಯದಲ್ಲೇ ಆರಂಭಿಸಲಾಗುತ್ತದೆ. ಇನ್ನು, ಮೂರನೆ ಹಂತದ ಟೆಂಡರ್ ಕರೆಯುವ ಕುರಿತು ಕೇಂದ್ರದ ಜೊತೆ ಮಾತುಕತೆ ನಡೆಸಲಾಗುತ್ತದೆ ಎಂದರು. ಈ ಯೋಜನೆ ಮುಗಿದರೆ 10 ಲಕ್ಷ ಜನ ಸಂಚಾರ ಮಾಡಲಿದ್ದಾರೆ. ಇದು ದೊಡ್ಡ ಕನಸಾಗಿದೆ, ಪಾರದರ್ಶಕವಾಗಿ ಇರಬೇಕು ಎಂದು ಯೋಜನೆ ರೂಪುರೇಷೆ ವೆಬ್ ಸೈಟ್‍ನಲ್ಲಿ ಹಾಕಲಾಗಿದೆ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News