ಅನ್ವರ್ ಮಾಣಿಪ್ಪಾಡಿ ವರದಿ | ವಕ್ಫ್ ಆಸ್ತಿಗಳ ಸಂರಕ್ಷಣೆಯಲ್ಲಿ ಹಿಂದೇಟು ಹಾಕುವ ಪ್ರಶ್ನೆಯೆ ಇಲ್ಲ: ಜೆ.ಸಿ.ಮಾಧುಸ್ವಾಮಿ

Update: 2022-09-21 17:09 GMT

ಬೆಂಗಳೂರು, ಸೆ.21: ರಾಜ್ಯದಲ್ಲಿನ ವಕ್ಫ್ ಆಸ್ತಿಗಳ ದುರುಪಯೋಗದ ಕುರಿತು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್ ಮಾಣಿಪ್ಪಾಡಿ 2012ರಲ್ಲಿ ಸರಕಾರಕ್ಕೆ ವಿವರವಾದ ವರದಿಯನ್ನು ಸಲ್ಲಿಸಿದ್ದಾರೆ. ಹೈಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ಆ ವರದಿಯನ್ನು 2020ರಲ್ಲಿ ವಿಧಾನಸಭೆ ಹಾಗೂ ವಿಧಾನಪರಿಷತ್ತಿನಲ್ಲಿ ಮಂಡನೆ ಮಾಡಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ರಾಜ್ಯದ ವಕ್ಫ್ ಬೋರ್ಡ್‍ನಲ್ಲಿ ನಡೆದ ಭ್ರಷ್ಟಾಚಾರ, ಹಣ ಹಾಗೂ ವಕ್ಫ್ ಆಸ್ತಿ ದುರುಪಯೋಗದ ಕುರಿತು ಅನ್ವರ್ ಮಾಣಿಪ್ಪಾಡಿ ನೀಡಿರುವ ವರದಿಯನ್ನು ವಿಧಾನಮಂಡಲದಲ್ಲಿ ಚರ್ಚಿಸಲು ಕ್ರಮ ಕೈಗೊಳ್ಳುವಂತೆ ಬಿಜೆಪಿ ಸದಸ್ಯರಾದ ಕೆ.ರಘುಪತಿ ಭಟ್, ಬಸನಗೌಡ ಪಾಟೀಲ್ ಯತ್ನಾಳ್, ಸಂಜೀವ್ ಮಠಂದೂರು ಸೇರಿದಂತೆ ಇನ್ನಿತರರು ಬುಧವಾರ ವಿಧಾನಸಭೆಯಲ್ಲಿ ಗಮನ ಸೆಳೆಯುವ ಸೂಚನೆಯಡಿ ಪ್ರಸ್ತಾಪಿಸಿದ ವಿಷಯಕ್ಕೆ ಅವರು ಉತ್ತರಿಸಿದರು.

ಅನ್ವರ್ ಮಾಣಿಪ್ಪಾಡಿ ಸಲ್ಲಿಸಿರುವ ವರದಿಯು ಸದನದ ಆಸ್ತಿಯಾಗಿದೆ. ಈ ವರದಿಯ ಬಗ್ಗೆ ವಿಧಾನಮಂಡಲದಲ್ಲಾಗಲಿ, ಸಚಿವ ಸಂಪುಟ ಸಭೆಯಲ್ಲಿ ಆಗಲಿ ಚರ್ಚೆ ಆಗಿಲ್ಲ. ಮುಖ್ಯಮಂತ್ರಿ ಒಪ್ಪಿದರೆ ಉಪ ಲೋಕಾಯುಕ್ತರು ಸಲ್ಲಿಸಿರುವ ವರದಿಯಲ್ಲಿನ ಶಿಫಾರಸ್ಸುಗಳ ಬಗ್ಗೆ ಪುನರ್ ಪರಿಶೀಲನೆ ನಡೆಸಿ, ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬಹುದು. ಇಲ್ಲವೇ, ವಿಧಾನಸಭೆಯಲ್ಲಿ ಚರ್ಚೆ ಮಾಡಿ ಒಂದು ನಿರ್ಣಯ ತೆಗೆದುಕೊಳ್ಳಬಹುದು. ವಕ್ಫ್ ಆಸ್ತಿಗಳ ಸಂರಕ್ಷಣೆಯಲ್ಲಿ ಸರಕಾರ ಹಿಂದೇಟು ಹಾಕುವ ಪ್ರಶ್ನೆಯೇ ಇಲ್ಲ. ವಕ್ಫ್ ಆಸ್ತಿ ಒಮ್ಮೆ ವಕ್ಫ್ ಎಂದು ಘೋಷಿಸಲ್ಪಟರೆ ಅದು ಎಂದೆಂದಿಗೂ ವಕ್ಫ್ ಆಗಿಯೇ ಉಳಿಯುತ್ತದೆ. ಆದ ಕಾರಣವೆ ಇವತ್ತು ಸರಕಾರದ ಭೂಮಿ ಉಳಿದಿದೆ ಎಂದು ಮಾಧುಸ್ವಾಮಿ ಹೇಳಿದರು.

2012ರಲ್ಲಿ ವರದಿ ಸಲ್ಲಿಕೆಯಾಯಿತು. ಸರಕಾರ ಏನು ತೀರ್ಮಾನ ತೆಗೆದುಕೊಳ್ಳಲು ಆಗಿರಲಿಲ್ಲ ಎಂದು ಹೈಕೋರ್ಟ್‍ನಲ್ಲಿ ಪ್ರಕರಣ ದಾಖಲಾಯಿತು. ಶಾಸನ ಸಭೆಯಲ್ಲಿ ವರದಿ ಮಂಡಿಸುವಂತೆ ಹೈಕೋರ್ಟ್ ಸೂಚನೆ ನೀಡಿತು. ಈ ಸಂಬಂಧ ಉಪ ಲೋಕಾಯುಕ್ತರ ತನಿಖೆಯೂ ಆಯಿತು. ಆನಂತರ, ಸರಕಾರ ಈ ವರದಿಯನ್ನು ತಿರಸ್ಕರಿಸಿರುವುದಾಗಿ ಒಂದು ನಿರ್ಣಯ ತೆಗೆದುಕೊಂಡಿತ್ತು. ಆನಂತರ, ಮತ್ತೆ ಈ ಸಭೆಯಲ್ಲಿ ವಿಷಯ ಪ್ರಸ್ತಾಪ ಅಯಿತು ಎಂದು ಅವರು ತಿಳಿಸಿದರು.

2022ರಲ್ಲಿ ವಿಧಾನಪರಿಷತ್ತಿನಲ್ಲಿ ವರದಿ ಮಂಡನೆಯಾಯಿತು. ಆದರೆ, ಈ ಸಂದರ್ಭದಲ್ಲಿ ಸಂಪೂರ್ಣ ವರದಿ ಮಂಡನೆಯಾಗಿಲ್ಲ. ಭಾಗಶಃ ವರದಿಯಾಗಿದೆ ಎಂದು ಆಕ್ಷೇಪ ವ್ಯಕ್ತವಾಯಿತು. ಸಂಪೂರ್ಣ ವರದಿ ಮಂಡಿಸುವಂತೆ ಅಲ್ಲಿ ಚರ್ಚೆ ಆಯಿತು. ಈಗ ನಮ್ಮ ಮುಂದೆ ವರದಿ ಇದೆ. ಚರ್ಚೆಯಾಗಿಲ್ಲ. ವಿಧಾನಸಭೆ, ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಆಗಿಲ್ಲ. ಕೋರ್ಟ್ ನಿರ್ದೇಶನದಿಂದ ಇಲ್ಲಿಗೆ ಮಂಡಿಸಲಾಗಿದೆ ಎಂದು ಮಾಧುಸ್ವಾಮಿ ವಿವರಿಸಿದರು.

ಮುಜುರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಅನ್ವರ್ ಮಾಣಿಪ್ಪಾಡಿ ನಮ್ಮ ರಾಜ್ಯದ ಅನೇಕ ಜಿಲ್ಲೆಗಳಲ್ಲಿರುವ ವಕ್ಫ್ ಆಸ್ತಿಗಳ ಅತಿಕ್ರಮಣ ಹಾಗೂ ದುರುಪಯೋಗದ ಕುರಿತು ಒಂದು ಅಧ್ಯಯನ ಮಾಡಿ 125 ಪುಟಗಳ ವರದಿ ನೀಡಿದ್ದಾರೆ. 12 ಅಧ್ಯಾಯಗಳಾಗಿ ವಿಂಗಡಿಸಿ ಅಂದಿನ ಸರಕಾರದ ಮುಖ್ಯಮಂತ್ರಿಯಾಗಿದ್ದ ಜಗದೀಶ್ ಶೆಟ್ಟರ್ ಅವರಿಗೆ ವರದಿ ಸಲ್ಲಿಸಿದ್ದರು ಎಂದರು.

ಆಗ ಮುಖ್ಯಮಂತ್ರಿ ಸಚಿವ ಸಂಪುಟ ಸಭೆ ಮಾಡಿ, ಅಡ್ವೊಕೇಟ್ ಜನರಲ್ ಅಭಿಪ್ರಾಯ ಪಡೆದು, ಸಚಿವ ಸಂಪುಟದಲ್ಲಿ ವರದಿ ಮರುಮಂಡನೆ ಮಾಡಲು ನಿರ್ಧಾರ ಕೈಗೊಳ್ಳಲಾಯಿತು. ವಕ್ಫ್ ಮಂಡಳಿಯನ್ನು ರದ್ದುಪಡಿಸಲು ವಿಧಾನಮಂಡಲದಲ್ಲಿ ಒಂದು ನಿರ್ಣಯ ಮಂಡಿಸುವಂತೆ ಅಡ್ವೊಕೇಟ್ ಜನರಲ್ ಅಭಿಪ್ರಾಯ ನೀಡಿದ್ದರು. ಅದರಂತೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ, 2013ರ ಮೇ 5ರಂದು ರಾಜ್ಯದಲ್ಲಿ ಸಾರ್ವತ್ರಿಕ ಚುನಾವಣೆ ನಡೆದು ಸರಕಾರ ಅಧಿಕಾರಕ್ಕೆ ಬಂದಿಲ್ಲ ಎಂದು ಅವರು ಹೇಳಿದರು.

ಆದುದರಿಂದ, 2013ರ ಜನವರಿ 3ರಂದು ನಮ್ಮ ಸರಕಾರದ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯ ಅನುಷ್ಠಾನಕ್ಕೆ ಬಂದಿಲ್ಲ. 2016ರಲ್ಲಿ ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಸಚಿವ ಸಂಪುಟ ಸಭೆಯಲ್ಲಿ ವರದಿ ತಿರಸ್ಕರಿಸಲು ನಿರ್ಣಯ ಆಯಿತು. 2018ರ ಡಿ.11ರಂದು ವರದಿ ಮಂಡಿಸುವಂತೆ ಹೈಕೋರ್ಟ್ ನಿರ್ದೇಶನ ನೀಡಿತು. ಅದರಂತೆ, 2019ರಲ್ಲಿ ಯಡಿಯೂರಪ್ಪ ಸರಕಾರದ ಸಚಿವ ಸಂಪುಟ ಸಭೆಯಲ್ಲಿ ಹೈಕೋರ್ಟ್ ನಿರ್ದೇಶನ ಪಾಲಿಸಲು ನಿರ್ಧರಿಸಲಾಯಿತು. ಅದರಂತೆ, 2020ರಲ್ಲಿ ವರದಿ ಮಂಡನೆ ಮಾಡಿದ್ದೇವೆ ಎಂದು ಶಶಿಕಲಾ ಜೊಲ್ಲೆ ತಿಳಿಸಿದರು.

ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ಈ ವರದಿ ಬಗ್ಗೆ ಯಾವ ತೀರ್ಮಾನ ಕೈಗೊಳ್ಳಬೇಕು ಎಂಬ ವಿವೇಚನೆಯನ್ನು ಮುಖ್ಯಮಂತ್ರಿಗೆ ಬಿಟ್ಟಿದ್ದೇವೆ ಎಂದು ಅವರು ಹೇಳಿದರು. ಈ ಚರ್ಚೆಯಲ್ಲಿ ಬಿಜೆಪಿ ಶಾಸಕರಾದ ವೇದವ್ಯಾಸ್ ಕಾಮತ್, ಸಂಜೀವ್ ಮಠಂದೂರು, ಸತೀಶ್ ರೆಡ್ಡಿ ಸೇರಿದಂತೆ ಇನ್ನಿತರರು ಮಾತನಾಡಿದರು.


ವಿರೋಧ ಪಕ್ಷದ ನಾಯಕರು, ಶಾಸಕರು, ಬೇರೆ ಬೇರೆ ಅವ್ಯವಹಾರಗಳ ಬಗ್ಗೆ ಗಮನ ಹರಿಸುತ್ತಾರೆ. ವಕ್ಫ್ ಆಸ್ತಿಗಳಲ್ಲಿ 2.3 ಲಕ್ಷ ಕೋಟಿ ರೂ.ಅವ್ಯವಹಾರದ ವರದಿ ಬಂದಿದೆ. 54 ಸಾವಿರ ಆಸ್ತಿಗಳಲ್ಲಿ 29 ಸಾವಿರ ಎಕರೆಯಲ್ಲಿ ಅವ್ಯವಹಾರ ಆಗಿದೆ. ಇದನ್ನು ಲಘುವಾಗಿ ಪರಿಗಣಿಸಬೇಡಿ.

ಕೆ.ರಘುಪತಿ ಭಟ್, ಬಿಜೆಪಿ ಶಾಸಕ

--------------------------------------

ವಕ್ಫ್ ಆಸ್ತಿಗಳಲ್ಲಿ ಲಕ್ಷಾಂತರ ಕೋಟಿ ರೂ. ಹಗರಣ ಆಗಿದೆ. ನಮ್ಮ ದೇಶದಿಂದ ವಕ್ಫ್ ನಿರ್ಮೂಲನೆ ಮಾಡಿ, ವಕ್ಫ್‍ನಲ್ಲಿರುವ ಎಲ್ಲ ಆಸ್ತಿಗಳನ್ನು ಕಂದಾಯ ಇಲಾಖೆಗೆ ತೆಗೆದುಕೊಳ್ಳಬೇಕು. ಹಿಂದೂ ಧಾರ್ಮಿಕ ದತ್ತಿ ಆಸ್ತಿಗಳನ್ನು ಸರಕಾರಿ ಆಸ್ತಿಗಳೆಂದು ಮಾಡಿದ್ದೀರಾ. ವಕ್ಫ್ ಆಸ್ತಿಗಳನ್ನು ಅವರಿಗೆ ಬಿಟ್ಟು ಕೊಟ್ಟಿದ್ದೀರಾ. ಸಾಮಾನ್ಯ ಮುಸ್ಲಿಮರಿಗೆ ಇದರಿಂದ ಲಾಭ ಇಲ್ಲ. ಪಟ್ಟಭದ್ರ ಹಿತಾಸಕ್ತಿಗಳು, ದೇಶದ್ರೋಹ ಮಾಡುವಂತಹ ಕೆಲವು ಮುಖಂಡರು, ಈ ವಕ್ಫ್ ಆಸ್ತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಸಿಬಿಐ ತನಿಖೆಯಾಗಬೇಕು. ಮಹಾ ಕಳ್ಳರ ಬಣ್ಣ ಈ ದೇಶ, ರಾಜ್ಯದ ಜನರಿಗೆ ಗೊತ್ತಾಗಬೇಕು.

ಬಸನಗೌಡ ಪಾಟೀಲ್ ಯತ್ನಾಳ್, ಬಿಜೆಪಿ ಶಾಸಕ

-------------------------------------------------

ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕರಿಗೆ ಅಂಭಿನಂದನೆ ಸಲ್ಲಿಸುತ್ತೇನೆ. ಬಿಜೆಪಿ ಶಾಸಕರಾದ ರಘುಪತಿ ಭಟ್, ವೇದವ್ಯಾಸ್ ಕಾಮತ್, ಸಂಜೀವ್ ಮಠಂದೂರು, ಬಸನಗೌಡ ಪಾಟೀಲ್ ಯತ್ನಾಲ್ ಅಲ್ಪಸಂಖ್ಯಾತರ ಬಗ್ಗೆ ವಹಿಸಿದಷ್ಟು ಕಾಳಜಿ, ಹಿಂದೂ ಸಹೋದರರ ಬಗ್ಗೆಯೂ ವಹಿಸಿಲ್ಲ. ಕರಾವಳಿ, ಮೀನುಗಾರರ ಸಮಸ್ಯೆ, ಸ್ಮಾರ್ಟ್ ಸಿಟಿ ಯಾವುದು ಇವರು ಮಾತನಾಡಿಲ್ಲ. ಎಲ್ಲವನ್ನು ನಾನೇ ಮಾತನಾಡಬೇಕು. ಸದನದಲ್ಲಿ ಅನ್ವರ್ ಮಾಣಿಪ್ಪಾಡಿ ವರದಿ ಮಂಡಿಸಿ ಎರಡು ವರ್ಷ ಆಯಿತು. ಈ ಬಗ್ಗೆ ಚರ್ಚೆ ಮಾಡಬೇಡಿ ಎಂದು ನಾವು ಹೇಳಿದ್ದೇವಾ? ಈಗ ಯಾಕೆ ತಂದಿದ್ದೀರಾ ಎಂದರೆ ನಿಮ್ಮ 40 ಪರ್ಸೆಂಟ್ ಭ್ರಷ್ಟಾಚಾರ ಬಯಲಾಗಬಾರದೆಂದು.

ಯು.ಟಿ.ಖಾದರ್, ವಿರೋಧ ಪಕ್ಷದ ಉಪ ನಾಯಕ

-------------------------------------------------

'ನೀವು ತಂದಿರುವ 40 ಪರ್ಸೆಂಟ್ ಭ್ರಷ್ಟಾಚಾರದ ಅತ್ಯಂತ ಆಧಾರ ರಹಿತ ವಿಚಾರವನ್ನು ನಾವು ನಾಳೆ ಚರ್ಚೆಗೆ ತೆಗೆದುಕೊಳ್ಳುತ್ತಿದ್ದೇವೆ. ಅದರಲ್ಲಿ ಯಾರ ಯಾರ ಹೆಸರು ಬರುತ್ತೆ ಕಾದು ನೋಡಿ. ಬೇಕಾದರೆ ಎರಡು, ಮೂರು ದಿನ ಆ ವಿಚಾರವಾಗಿಯೆ ಚರ್ಚೆಗೆ ಸಿದ್ಧ. ನೀವು ಅದಕ್ಕೆ ಉತ್ತರ ನೀಡಬೇಕು. ಆದರೆ, ಇದು 2 ಲಕ್ಷ ಕೋಟಿ ರೂ.ಗಳ ವಕ್ಫ್ ಆಸ್ತಿಗಳ ಹಗರಣ. ವಕ್ಫ್ ಎಂಬುದು ಪವಿತ್ರವಾದ ಸರಕಾರಿ ಆಸ್ತಿ. ಅದನ್ನು ಹಲವಾರು ವರ್ಷಗಳಿಂದ ಅತಿಕ್ರಮ ಮಾಡಿಕೊಂಡು, ಖಾತೆಗಳನ್ನು ಬದಲಾಯಿಸಿಕೊಂಡಿದ್ದಾರೆ. ಇದಕ್ಕಿಂತ ಯಾವ ಭ್ರಷ್ಟಾಚಾರ ಇದೆ'.

ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News