ಕೋಲಾರದ ದಲಿತ ಬಾಲಕನಿಗೆ ದಂಡ: ವಿವಾದದ ಬಳಿಕ ತಾಯಿ, ಮಗನಿಗೆ ದೇವಸ್ಥಾನಕ್ಕೆ ಪ್ರವೇಶ, ದರ್ಶನಕ್ಕೆ ಅವಕಾಶ

Update: 2022-09-21 18:40 GMT

ಕೋಲಾರ, ಸೆ. 21: ದೇವರ ಮೂರ್ತಿ ಮುಟ್ಟಿದ ಕೋಲಾರದ ದಲಿತ ಬಾಲಕನಿಗೆ 60 ಸಾವಿರ ರೂ. ದಂಡ ವಿಧಿಸಿ, ಗ್ರಾಮದಿಂದ ಬಹಿಷ್ಕಾರ ಹಾಕುವುದಾಗಿ ಬೆದರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ತಾಯಿ, ಮಗನಿಗೆ ದೇವಸ್ಥಾನಕ್ಕೆ ಪ್ರವೇಶ, ದರ್ಶನಕ್ಕೆ ಅವಕಾಶ ನೀಡಿರುವುದಾಗಿ ವರದಿಯಾಗಿದೆ.

ಸಂಸದರು, ಸಮಾಜ ಕಲ್ಯಾಣ ಇಲಾಖೆ ಆಯುಕ್ತ, ಡಿಸಿ, ಎಸ್ಪಿ ಸಮ್ಮುಖದಲ್ಲಿ ಬಾಲಕ ಹಾಗೂ ತಾಯಿಗೆ ದೇವಾಲಯ ಪ್ರವೇಶಕ್ಕೆ ಕಲ್ಪಿಸಲಾಗಿದೆ.

ಘಟನೆಯ ಹಿನ್ನೆಲೆ: ಮಾಲೂರು ತಾಲೂಕಿನ ಟೇಕಲ್ ಹೋಬಳಿಯ ಹುಲ್ಲೇರಹಳ್ಳಿ ಗ್ರಾಮದಲ್ಲಿ ದಲಿತ ಸಮುದಾಯದ ಬಾಲಕ ದೇವರ ಉತ್ಸವದ ಗುಜ್ಜು ಕೋಲನ್ನು ಮುಟ್ಟಿದ ಕಾರಣಕ್ಕೆ ಅಲ್ಲಿನ ಸವರ್ಣೀಯರು 60 ಸಾವಿರ ರೂ. ದಂಡ ಕಟ್ಟಬೇಕು ತಪ್ಪಿದರೆ ಗ್ರಾಮ ತೊರೆಯಬೇಕು ಎಂದು ಬೆದರಿಕೆ ಹಾಕಿದ್ದ ಆರೋಪದಡಿ ಮಾಸ್ತಿ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಅಟ್ರಾಸಿಟಿ ಪ್ರಕರಣ ದಾಖಲಾಗಿತ್ತು.

ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬುಧವಾರ ಮಧ್ಯಾಹ್ನ ಕೋಲಾರ ಸಂಸದ ಎಸ್.ಮುನಿಸ್ವಾಮಿ ಸಮಾಜ ಕಲ್ಯಾಣ ಇಲಾಖೆಯ ರಾಜ್ಯ ಆಯುಕ್ತ ರಾಕೇಶ್ ಕುಮಾರ್, ಕೋಲಾರ ಜಿಲ್ಲಾಧಿಕಾರಿ ವೆಂಕಟರಾಜಾ, ಜಿಲ್ಲಾ ರಕ್ಷಣಾಧಿಕಾರಿ ಡಿ.ದೇವರಾಜ್, ಸಿಇಒ ಉಖೇಶ್ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಚನ್ನಬಸಪ್ಪ ಗ್ರಾಮಕ್ಕೆ ಭೇಟಿ ನೀಡಿ ನಿಂದನೆಗೆ ಒಳಗಾದ ದಲಿತ ಕುಟುಂಬಕ್ಕೆ ಧೈರ್ಯ ತುಂಬಿದರು.

ಇದಾದ ನಂತರ ರಾಜ್ಯ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತ ರಾಕೇಶ್ ಕುಮಾರ್ ಅವರು,  ಅನ್ಯಾಯಕ್ಕೆ ಒಳಗಾದ ಕುಟುಂಬದ ಸದಸ್ಯರನ್ನು ಗ್ರಾಮದ ಭೂತಮ್ಮ ದೇವಾಲಯ ಬಾಗಿಲ ತೆರೆದು ಸಾಮೂಹಿಕವಾಗಿ ಎಲ್ಲರನ್ನೂ ದೇವಾಲಯದ ಒಳಗೆ ಕರೆದುಕೊಂಡು ಹೋಗಿ ಪೂಜೆಗೆ ಅವಕಾಶ ಮಾಡಿಕೊಟ್ಟರು. ಬಳಿಕ  ಗ್ರಾಮದಲ್ಲಿ ಎಲ್ಲರೂ ದೇವಾಲಯದ ಒಳಗೆ ಹೋಗಿ ಪೂಜೆ ಸಲ್ಲಿಸಲು ಅನುವಾಗುವಂತೆ ದೇವಾಲಯದ ಎದುರು ನಾಮಫಲಕವನ್ನು ಹಾಕಬೇಕೆಂದು ತಹಶೀಲ್ದಾರ್ ಅವರಿಗೆ ಸೂಚನೆ ನೀಡಿದರು.

ನಿವೇಶನ ಮಂಜೂರು : ನಿಂದನೆಗೊಳಗಾದ ದಲಿತ ಕುಟುಂಬಕ್ಕೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ 25,000 ರೂ. ಮೊತ್ತದ ಪರಿಹಾರದ ಚೆಕ್ ಮತ್ತು ಸಂಸದರ ವೈಯಕ್ತಿಕ ನಿಧಿಯಿಂದ 50 ಸಾವಿರ ರೂ. ಸಹಾಯಧನ ಸ್ಥಳದಲ್ಲೇ ನೀಡಲಾಯಿತು. ಗ್ರಾಪಂ ವತಿಯಿಂದ ಗ್ರಾಮ ಠಾಣೆಗೆ ಸೇರಿದ ನಿವೇಶನವನ್ನು ಮಂಜೂರು ಮಾಡಲಾಯಿತು. ನಿವೇಶನದಲ್ಲಿ ಮನೆ ನಿರ್ಮಿಸಿಕೊಳ್ಳಲು ಸಾಲ ಸೌಲಭ್ಯ ನೀಡಲು ಭರವಸೆ ನೀಡಲಾಗಿದೆ. 

--------------------------------------------------------

ನೊಂದ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬಲಾಗಿದೆ ಮತ್ತು ಸರಕಾರದ ವತಿಯಿಂದ ನೀಡಬೇಕಾದ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡಲು ಕ್ರಮ ವಹಿಸಲಾಗಿದೆ. ಆರೋಪಿಗಳನ್ನು ದಸ್ತಗಿರಿ ಮಾಡಲು ಈಗಾಗಲೇ ಪೊಲೀಸ್ ಇಲಾಖೆ ತಂಡಗಳನ್ನು ರಚಿಸಿದೆ. ಗ್ರಾಮದಲ್ಲಿ ಶಾಂತಿಯುತ ವಾತಾವರಣ ನಿರ್ಮಾಣ ಮಾಡಲು ಮುಂದಿನ ಎರಡು ಮೂರು ದಿನಗಳ ಒಳಗೆ ಶಾಂತಿ ಸಭೆಯನ್ನು ನಡೆಸಿ ಪರಿಸ್ಥಿತಿಯನ್ನು ತಿಳಿಗೊಳಿಸಲಾಗುವುದು.

- ವೆಂಕಟರಾಜು, ಜಿಲ್ಲಾಧಿಕಾರಿ

------------------------------------------------------

ದೇವರ ಫೋಟೊ ಇದ್ದ ಜಾಗದಲ್ಲಿ ಅಂಬೇಡ್ಕರ್ ಭಾವಚಿತ್ರ ಪ್ರಕರಣದ ಬೆನ್ನಲ್ಲೇ ಸಂತ್ರಸ್ತ ಬಾಲಕನ ಕುಟುಂಬವು ತನ್ನ ಮನೆಯಲ್ಲಿದ್ದ ದೇವರ ಫೋಟೊಗಳನ್ನು ಸೋಮವಾರ ರಾತ್ರಿ ತೆರವು ಮಾಡಿರುವುದಾಗಿ ವರದಿಯಾಗಿದೆ.

ಮನೆಯಲ್ಲಿದ್ದ ವೆಂಕಟೇಶ್ವರ ದೇವರ ಫೋಟೊಗಳನ್ನು ತೆಗೆದ ಶೋಭಾ ದಂಪತಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರದ ಜೊತೆಗೆ ಬುದ್ಧನ ವಿಗ್ರಹವನ್ನು ಪಕ್ಕದಲ್ಲಿ ಇರಿಸಿದ್ದಾರೆ. ಫೋಟೊ ತೆರವಿನ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News