ಸಾವಲ್ಲೂ ಸಾರ್ಥಕತೆ: ಮೆದುಳು ನಿಷ್ಕ್ರಿಯಗೊಂಡಿದ್ದ ಕಡೂರಿನ ಯುವತಿಯ ಅಂಗಾಂಗ ದಾನ

Update: 2022-09-22 10:38 GMT

ಚಿಕ್ಕಮಗಳೂರು, ಸೆ.22: ನಾಲ್ಕು ದಿನಗಳ ಹಿಂದೆ ಬಸ್ಸಿನಿಂದ ರಸ್ತೆಗೆ ಬಿದ್ದು ಮೆದುಳು ನಿಷ್ಕ್ರಿಯಗೊಂಡಿದ್ದ ಕಡೂರಿನ ಯುವತಿ ರಕ್ಷಿತಾ ಬಾಯಿ(17)ಯ ಅಂಗಾಂಗಗಳ ದಾನ ಪ್ರಕ್ರಿಯೆ ನಗರದ ಮಲ್ಲೇಗೌಡ ಸರಕಾರಿ ಜಿಲ್ಲಾಸ್ಪತ್ರೆಯಲ್ಲಿ ಗುರುವಾರ ನಡೆಯಿತು.

ರಕ್ಷಿತಾರ ಹೆತ್ತವರಾದ ಶೇಖರ ನಾಯ್ಕ ಹಾಗೂ ಲಕ್ಷ್ಮೀಬಾಯಿಯವರ ಸಮ್ಮತಿಯ ಮೇರೆಗೆ ವಿಶೇಷ ವೈದ್ಯರ ತಂಡ ಆಗಮಿಸಿ ಅಂಗಾಂಗ ದಾನ ಪ್ರಕ್ರಿಯೆ ನೆರವೇರಿಸಿತು. ರಕ್ಷಿತಾರ ಹೃದಯವನ್ನು ಹೆಲಿಕಾಪ್ಟರ್ ಮೂಲಕ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ರವಾನಿಸಲಾಯಿತು. ಹೃದಯವನ್ನು ಝೀರೋ ಟ್ರಾಫಿಕ್ ಮೂಲಕ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಿಂದ ಮಂಗಳೂರಿನ ರೋಗಿಯೊಬ್ಬರಿ ನೀಡುವುದಕ್ಕಾಗಿ ರವಾನಿಸಲಾಯಿತು. ಈ ಆ್ಯಂಬುಲೆನ್ಸ್ ಚಿಕ್ಕಮಗಳೂರು-ಮೂಡಿಗೆರೆ-ಕೊಟ್ಟಿಗೆಹಾರ-ಚಾರ್ಮಾಡಿ ಘಾಟ್-ಉಜಿರೆ-ಬೆಳ್ತಂಗಡಿ ಮಾರ್ಗವಾಗಿ ಮಂಗಳೂರು ತಲುಪಲಿದ್ದು, ಇದಕ್ಕಾಗಿ ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಲಾಗಿದೆ. ಸಾರ್ವಜನಿಕರು ಸಕಹರಿಸುವಂತೆ ಚಿಕ್ಕಮಗಳೂರು ಜಿಲ್ಲಾಡಳಿತ ಮನವಿ ಮಾಡಿದೆ.

ಕಿಡ್ನಿ, ಹೃದಯ ಸಹಿತ ಯುವತಿಯ ಒಂಭತ್ತು ಅಂಗಗಳನ್ನು ದಾನ ಮಾಡಲಾಗಿದೆ.

 ಕಡೂರು ತಾಲೂಕಿನ ಸೋಮನಹಳ್ಳಿ ತಾಂಡ್ಯದ ಶೇಖರ ನಾಯ್ಕ ಹಾಗೂ ಲಕ್ಷ್ಮೀಬಾಯಿ ದಂಪತಿಯ ಪುತ್ರಿ 17 ವರ್ಷದ ರಕ್ಷಿತಾ ಬಾಯಿ ಮೆದುಳು ನಿಷ್ಕ್ರಿಯಗೊಂಡು ಮೃತಪಟ್ಟವರು. ನಗರದ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‍ನಲ್ಲಿದ್ದುಕೊಂಡು ಬಸವನಹಳ್ಳಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ರೇಖಾ ರವಿವಾರ ಕಾಲೇಜಿಗೆ ರಜೆ ಇದ್ದ ಕಾರಣ ಮನೆಗೆ ಹೋಗಲು ಚಿಕ್ಕಮಗಳೂರು ನಗರದಿಂದ ಕೆಎಸ್ಸಾರ್ಟಿಸಿ ಬಸ್ ಏರಿದ್ದರು. ಈ ನಡುವೆ ನಗರದ ಎಐಟಿ ವೃತ್ತದ ಸಮೀಪ ಬಸ್ಸಿನಿಂದ ಇಳಿಯಲು ಮುಂದಾದ ರೇಖಾ ಆಯತಪ್ಪಿ ರಸ್ತೆಗೆ ಬಿದ್ದ ಪರಿಣಾಮ ತಲೆಗೆ ಗಂಭೀರವಾಗಿ ಗಾಯಗೊಂಡಿದ್ದರು. ಬಳಿಕ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದ ರಕ್ಷಿತಾರ ಮೆದುಳು ನಿಷ್ಕ್ರಿಯಗೊಂಡಿರುವುದಾಗಿ ವೈದ್ಯರು ಘೋಷಿಸಿದ್ದರು. ಈ ವಿಚಾರವನ್ನು ರಕ್ಷಿತಾರ ಪೋಷಕರಿಗೆ ಮನವರಿಕೆ ಮಾಡಿದ ವೈದ್ಯರು ಅಂಗಾಂಗ ದಾನದ ಬಗ್ಗೆ ತಿಳಿಸಿದ್ದಾರೆ. ಅದರಂತೆ ಮನೆಮಂದಿ ಸಮ್ಮತಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಅಂಗಾಂಗ ದಾನ ಪ್ರಕ್ರಿಯೆ ನಡೆಯಿತು.

ಇದನ್ನೂ ಓದಿ: ಕಡೂರು | ಬಸ್ಸಿನಿಂದ ಬಿದ್ದು ಗಾಯಗೊಂಡಿದ್ದ ಯುವತಿಯ ಮೆದುಳು ನಿಷ್ಕ್ರಿಯ: ಅಂಗಾಂಗ ದಾನಕ್ಕೆ ಮುಂದಾದ ಪೋಷಕರು

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News