ಕಾರ್ಯಕರ್ತರ ಜೊತೆ ನಾನೇ ಪೋಸ್ಟರ್ ಅಂಟಿಸುತ್ತೇನೆ, ತಾಕತ್ತಿದ್ದರೆ ಬಂಧಿಸಿ: ಸಿದ್ದರಾಮಯ್ಯ ವಾಗ್ದಾಳಿ

Update: 2022-09-22 12:28 GMT

ಬೆಂಗಳೂರು: 'ಕರ್ನಾಟಕದಲ್ಲಿ ಹೊಸ ಕಾನೂನು ಜಾರಿಯಾಗಿದೆ. ಇಲ್ಲಿ ಲಂಚ ತಿಂದರೆ ಅಪರಾಧ ಅಲ್ಲ, ಲಂಚ ತಿಂದದ್ದನ್ನು ಹೇಳಿದರೆ ಅಪರಾಧ.  ಪೊಲೀಸರ ಮೂಲಕ ಎಷ್ಟು ಜನರ ಬಾಯಿ ಮುಚ್ಚಿಸುತ್ತೀರಿ? ಎಷ್ಟು ಮಂದಿಯನ್ನು ಜೈಲಿಗೆ ಹಾಕ್ತೀರಿ? ರಾಜ್ಯದ ತುಂಬಾ ಜೈಲು ಕಟ್ಟಿಸ್ತಿರಾ?  ಜನ ಬಂಡೆದಿದ್ದಾರೆ ಎಚ್ಚರ' ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು,   'ರಾಜ್ಯ ಸರ್ಕಾರದ ಲಂಚುಗುಳಿತನದ ಬಗ್ಗೆ ಪಕ್ಷದ ಕಾರ್ಯಕರ್ತರ ಜೊತೆ ನಾನೇ ಪೋಸ್ಟರ್ ಅಂಟಿಸುತ್ತೇನೆ, ತಾಕತ್ತಿದ್ದರೆ ನಮ್ಮನ್ನೂ ಬಂಧಿಸಿ. ನನ್ನ ಮತ್ತು ಡಿ.ಕೆ.ಶಿವಕುಮಾರ್ ಬಗ್ಗೆ ಪೋಸ್ಟರ್ ಅಂಟಿಸಿದ್ದರಲ್ಲಾ, ಅದರ ಬಗ್ಗೆ ಮುಖ್ಯಮಂತ್ರಿಗಳು ಯಾಕೆ ಮೌನವಾಗಿದ್ದಾರೆ? ಪೊಲೀಸರ ಕಣ್ಣು ಯಾಕೆ  ಕುರುಡಾಗಿದೆ?' ಎಂದು ಕಡಿಕಾರಿದ್ದಾರೆ.  

'ಬಿಜೆಪಿ ಗೆಲುವಿನ ಸೂತ್ರವೇ ಸುಳ್ಳು ಮಾಹಿತಿಗಳ ಅಪಪ್ರಚಾರ, ವಿರೋಧಿಗಳ ಚಾರಿತ್ರ್ಯಹನನ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ. ಸಾಮಾಜಿಕ ಮಾಧ್ಯಮವೂ ಸೇರಿದಂತೆ ಹೊಸ ತಂತ್ರಜ್ಞಾನವನ್ನು ಬಿಜೆಪಿಯಷ್ಟು ದುರುಪಯೋಗ ಪಡಿಸಿಕೊಂಡ ರಾಜಕೀಯ ಪಕ್ಷ ಜಗತ್ತಿನಲ್ಲಿ ಇನ್ನೊಂದಿಲ್ಲ' ಎಂದು ಹೇಳಿದ್ದಾರೆ.

'ಬಿಜೆಪಿಯ ಅಧಿಕೃತ ಸೋಷಿಯಲ್ ಮೀಡಿಯಾಗಳಲ್ಲಿಯೇ ನನ್ನ ವಿರುದ್ಧದ ಕುತ್ಸಿತ ಹೇಳಿಕೆಗಳು, ವಿರೂಪಗೊಳಿಸಿದ ಪೋಟೊಗಳ ವಿವರ ಕೊಡುತ್ತೇನೆ, ಅವರನ್ನೂ ಬಂಧಿಸಿ. ನಾನು ಅಧಿಕಾರದಲ್ಲಿದ್ದಾಗಲೇ ಅಂತಹವರ ವಿರುದ್ಧ  ಪೊಲೀಸರಿಗೆ ದೂರು ಕೊಟ್ಟಿಲ್ಲ. ಇದು ನಾನು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕೊಟ್ಟ ಗೌರವ' ಎಂದು ತಿಳಿಸಿದ್ದಾರೆ. 

'ರಾಜಕೀಯ ವ್ಯವಸ್ಥೆಯಲ್ಲಿ ಇಂತಹ ಆರೋಪ-ಪ್ರತ್ಯಾರೋಪ ಸಹಜ ವಿದ್ಯಮಾನವಾದರೂ ಇದನ್ನು ಇಷ್ಟೊಂದು ಕೀಳು ಮಟ್ಟಕ್ಕೆ ತಂದು ನಿಲ್ಲಿಸಿದ ಕೀರ್ತಿ ಭಾರತೀಯ ಜನತಾ ಪಕ್ಷಕ್ಕೆ ಸಲ್ಲುತ್ತದೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

'ಬೇರೆಯವರಿಗೆ ಚುಚ್ಚಿದಾಗ ಖುಷಿಪಟ್ಟಿರಿ, ಈಗ ಯಾರೋ ನಿಮಗೆ ಚುಚ್ಚಿದಕ್ಕೆ ನೋವಾಯ್ತಾ?' ಎಂದು ಪೋಸ್ಟರ್ ವಿಚಾರದ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News