ಕ್ಷುಲ್ಲಕ ಅರ್ಜಿ ಸಲ್ಲಿಕೆ: ಅರ್ಜಿದಾರನಿಗೆ 5 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್

Update: 2022-09-22 13:32 GMT

ಬೆಂಗಳೂರು, ಸೆ.22: ಕರ್ನಾಟಕ ಮಾಹಿತಿ ಹಕ್ಕು ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರ ನೇಮಕಾತಿ ಪ್ರಶ್ನಿಸಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿರುವ ಹೈಕೋರ್ಟ್, ಅರ್ಜಿದಾರರಿಗೆ 5 ಲಕ್ಷ ರೂ.ದಂಡ ವಿಧಿಸಿದೆ. ಕ್ಷುಲ್ಲಕ ಅರ್ಜಿ ಸಲ್ಲಿಕೆಗೆ ದಂಡ ವಿಧಿಸಿದೆ. 

ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರ ನೇಮಕಾತಿ ಆದೇಶ ಎತ್ತಿ ಹಿಡಿದಿದ್ದ ಹೈಕೋರ್ಟ್ ಏಕಸದಸ್ಯ ಪೀಠದ ಕ್ರಮ ಪ್ರಶ್ನಿಸಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಮೂಲದ ಪಿ.ಮೋಹನ್‍ಚಂದ್ರ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ಈ ಆದೇಶ ನೀಡಿದೆ. 

ಜನರಿಗೆ ಇಂದಿಗೂ ನಂಬಿಕೆ ಉಳಿದಿರುವುದು ಕೋರ್ಟ್‍ಗಳ ಮೇಲೆ ಮಾತ್ರ. ನ್ಯಾಯಾಂಗದಲ್ಲಿ ಬಿರುಕು ಮೂಡಲು ಬಿಡುವುದಿಲ್ಲ. ಕ್ಷುಲ್ಲಕ ಅರ್ಜಿಗಳನ್ನು ಸಲ್ಲಿಸುವ ಪ್ರವೃತ್ತಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿದ್ದು, ಹತ್ತಿಕ್ಕಬೇಕಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ. 

ಮೇಲ್ಮನವಿದಾರರು ಮೂಲತಃ ವಕೀಲ ಹಾಗೂ ಕಿರಿಯ ಶ್ರೇಣಿಯ ಸಿವಿಲ್ ನ್ಯಾಯಾಧೀಶರಾಗಿದ್ದರು. ದುರ್ನಡತೆ ಹಾಗೂ ಕರ್ತವ್ಯಲೋಪ ಆರೋಪದ ಮೇಲೆ ಸೇವೆಯಿಂದ ವಜಾಗೊಂಡಿದ್ದರು. ಇನ್ನು ಆಯೋಗದ ಹುದ್ದೆಗೆ ಮೇಲ್ಮನವಿದಾರರೂ ಓರ್ವ ಆಕಾಂಕ್ಷಿಯಾಗಿದ್ದು, ಅವರೂ ಅರ್ಜಿ ಸಲ್ಲಿಸಿದ್ದರು. ಅವರ ಹಿನ್ನೆಲೆ ಪರಿಶೀಲಿಸಿ, ಹುದ್ದೆಗೆ ಪರಿಗಣಿಸಿಲ್ಲ. ಆದರೆ, ಪಾರ್ಟಿ ಇನ್ ಪರ್ಸನ್ ಎಂದು ಹೇಳಿಕೊಂಡು ನೇಮಕಾತಿಯನ್ನು ಹೈಕೋರ್ಟ್‍ನಲ್ಲಿ ಪ್ರಶ್ನಿಸಿರುವ ಮೇಲ್ಮನವಿದಾರರು ತಮ್ಮ ಬಗೆಗಿನ ಮಾಹಿತಿ ಮುಚ್ಚಿಟ್ಟಿದ್ದಾರೆ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ.    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News