‘ನಮ್ಮ ಮೇಲೆ ಜನ ದಾಳಿ ಮಾಡ್ತಿದ್ದಾರೆ, ಆನೆಗಳ ಹಾವಳಿ ತಪ್ಪಿಸಿ': ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ

Update: 2022-09-22 15:27 GMT

ಬೆಂಗಳೂರು, ಸೆ. 22: ‘ಪರಿಹಾರ ಕೊಡ್ತೀವಿ ನೀವು ಸಾಯಲು ಸಿದ್ಧರಾಗಿ ಎನ್ನುವಂತಿದೆ ಸರಕಾರದ ನಿಲುವು. ಸರಕಾರಕ್ಕೆ ಮತ್ತು ಕೋರ್ಟ್‍ಗಳಿಗೆ ಆನೆಗಳು ಬೇಕು. ಆದರೆ, ಜನರಿಗೆ ಆನೆಗಳಿಂದ ಆಗುವ ಉಪಟಳ ನಿಲ್ಲಬೇಕು. ಚುನಾವಣೆ ಹತ್ತಿರ ಬರುತ್ತಿದೆ. ಜನರ ನಮ್ಮ ಮೇಲೆ ದಾಳಿ ಮಾಡುತ್ತಿದ್ದು, ಛೀಮಾರಿ ಹಾಕುತ್ತಿದ್ದಾರೆ. ಆನೆಗಳ ನಿಯಂತ್ರಣಕ್ಕೆ ಏನ್ಮಾಡ್ತೀರಿ ಹೇಳಿ?' ಎಂದು ಆಡಳಿತ ಪಕ್ಷದ ಸದಸ್ಯ ಎಂ.ಪಿ.ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗುರುವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ‘ಮಲೆನಾಡು ಭಾಗದಲ್ಲಿ ಆನೆಗಳ ಹಾವಳಿ ಮಿತಿಮೀರಿದ್ದು, ನನ್ನ ಕ್ಷೇತ್ರದಲ್ಲಿ ಆರು ಮಂದಿ ಆನೆ ದಾಳಿಯಿಂದ ಮೃತಪಟ್ಟಿದ್ದಾರೆ. ಆನೆಗಳ ಸಂಖ್ಯೆ ಹೆಚ್ಚಾಗಿದ್ದು, ಸಾರ್ವಜನಿಕರ ಆಸ್ತಿ, ಬೆಳೆ ನಾಶ ಮಾಡುತ್ತಿವೆ. ಹೀಗಾಗಿ ಅವುಗಳ ಭ್ರೂಣ ಹತ್ಯೆಗೆ ಕ್ರಮ ಕೈಗೊಳ್ಳಬೇಕು. ಆನೆಗಳ ಕಾಡಿನಿಂದ ನಾಡಿಗೆ ಬರದಂತೆ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು' ಎಂದು ಆಗ್ರಹಿಸಿದರು.

ಮುಖ್ಯಮಂತ್ರಿಗಳ ಪರವಾಗಿ ಉತ್ತರಿಸಿದ ಸಚಿವ ಶಿವರಾಮ್ ಹೆಬ್ಬಾರ್, ‘ಮೂಡಿಗೆರೆ ಕ್ಷೇತ್ರದಲ್ಲಿನ ಪುಂಡಾನೆಗಳನ್ನು ಹಿಡಿದು ಬೇರೆ ಕಡೆಗೆ ಬಿಡಲಾಗಿದೆ. ಆನೆ ದಾಳಿಯಿಂದ ಮೃತಪಟ್ಟವರಿಗೆ 7.50 ಲಕ್ಷ ರೂ.ನಿಂದ 15 ಲಕ್ಷ ರೂ.ಗಳಿಗೆ ಹೆಚ್ಚಳ ಮಾಡಿದ್ದು, ಬೆಳೆ ಪರಿಹಾರವನ್ನು ದುಪ್ಪಟ್ಟು ಮಾಡಲಾಗಿದೆ. ಆನೆಗಳು ಕಾಡಿನಿಂದ ಹೊರಗೆ ಬರದಂತೆ ರೈಲ್ವೆ ಹಳಿಗಳ ಬೇಲಿ ನಿರ್ಮಿಸಲಾಗುತ್ತಿದೆ. ಅಲ್ಲದೆ, ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸಲಾಗುತ್ತಿದೆ. ಭ್ರೂಣಹತ್ಯೆ ಮಾಡಲು ಸಾಧ್ಯವಿಲ್ಲ. ಆದರೆ, ಆನೆ ಉಪಟಳ ತಡೆಗಟ್ಟಲು ಸರಕಾರ ಕ್ರಮ ಕೈಗೊಳ್ಳಲಿದೆ' ಎಂದು ತಿಳಿಸಿದರು.

ಶ್ವಾನಗಳನ್ನೆ ಹಿಡಿಯಲು ಆಗುತ್ತಿಲ್ಲ: ಸರಕಾರದ ಉತ್ತರಕ್ಕೆ ಆಕ್ಷೇಪಿಸಿದ ಉಪನಾಯಕ ಯು.ಟಿ.ಖಾದರ್, ‘ಸರಕಾರಕ್ಕೆ ಶ್ವಾನಗಳನ್ನೇ ಹಿಡಿಯಲು ಸಾಧ್ಯವಿಲ್ಲ. ಇನ್ನು ಆನೆಗಳನ್ನು ಹಿಡಿಯುವುದು ಹೌದಾ? ನಾನು ಬಹಳ ದಿನಗಳಿಂದ ಶಾಸಕನಾಗಿದ್ದೇನೆ. ಪ್ರತೀ ಬಾರಿಯೂ ಆನೆ ಕಾಟದ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ, ಪರಿಹಾರ ಮಾತ್ರ ಸಿಗುತ್ತಿಲ್ಲ' ಎಂದು ಗಮನ ಸೆಳೆದರು.

‘ಆನೆಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ತೆಗೆದುಕೊಂಡು ಹೋಗಿ ಬಿಡುವ ಬದಲು ಕಾಡಿನಲ್ಲಿ ಆನೆಗಳಿಗೆ ಅಗತ್ಯ ಮೇವು ಮತ್ತು ನೀರಿನ ವ್ಯವಸ್ಥೆ ಕಲ್ಪಿಸಲು ಕ್ರಮ ವಹಿಸಬೇಕು. ಹೀಗಾದರೆ ಮಾತ್ರ ಆನೆಗಳ ಉಪಟಳ ನಿಲ್ಲಲು ಸಾಧ್ಯ. ಆನೆ ದಾಳಿ ಹಿನ್ನೆಲೆಯಲ್ಲಿ ಕೃಷಿ ಮಾಡದೆ ಕೈಬಿಟ್ಟ ಭೂಮಿಗೂ ಪರಿಹಾರ ನೀಡಬೇಕು' ಎಂದು ಅಪ್ಪಚ್ಚು ರಂಜನ್, ನರೇಂದ್ರ ಸೇರಿದಂತೆ ಇನ್ನಿತರ ಸದಸ್ಯರು ಆಗ್ರಹಿಸಿದರು.

'ಶಾಶ್ವತ ಪರಿಹಾರಕ್ಕೆ ತಜ್ಞರ ಸಮಿತಿ ಅಗತ್ಯ':

‘ಕಾಡು ಪ್ರಾಣಿಗಳ ಹಾವಳಿಯಿಂದ ಪ್ರಾಣ ಹಾಗೂ ದೊಡ್ಡ ಪ್ರಮಾಣದಲ್ಲಿ ಬೆಳೆ ಹಾನಿಯಾಗುತ್ತಿರುವುದರಿಂದ ಸರಕಾರದ ಮಟ್ಟದಲ್ಲಿ ತಜ್ಞರ ಸಮಿತಿ ರಚಿಸಿ, ಪರಿಹಾರೋಪಾಯ ಕಂಡುಕೊಳ್ಳಬೇಕು. ಹಲವು ಜಿಲ್ಲೆಗಳಲ್ಲಿ ಕಾಡುಪ್ರಾಣಿಗಳ ಸಮಸ್ಯೆಯಾಗಿದೆ. ಕೆಲವು ಕಡೆ ಆನೆಗಳು, ಕಾಡುಕೋಣಗಳು, ಮಂಗಗಳು ಹೀಗೆ ಸಮಸ್ಯೆಗಳು ಮುಂದುವರಿಯುತ್ತಿದೆ. ಆನೆ ಹಾವಳಿಯಿಂದ ಮೃತಪಟ್ಟವರಿಗೆ ಪರಿಹಾರ, ಹಾನಿಯಾದ ಬೆಳೆಗಳಿಗೆ ದುಪ್ಪಟ್ಟು ಪರಿಹಾರ ನೀಡಲು ಸರಕಾರ ನಿರ್ಧರಿಸಿರುವುದು ಸರಿಯಾದ ನಿರ್ಧಾರ. ಆದರೆ, ಕಾಡುಪ್ರಾಣಿಗಳ ಹಾವಳಿ ನಿಯಂತ್ರಣಕ್ಕೆ ಸರಕಾರ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು'

-ವಿಶ್ವೇಶ್ವರ ಹೆಗಡೆ ಕಾಗೇರಿ ವಿಧಾನಸಭೆ ಸ್ಪೀಕರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News