ವರದಿ ಬಳಿಕ ಪಂಚಮಸಾಲಿ ಸಮುದಾಯಕ್ಕೆ 2 ‘ಎ' ಮೀಸಲಾತಿ: ಸಿಎಂ ಬೊಮ್ಮಾಯಿ

Update: 2022-09-22 14:53 GMT

ಬೆಂಗಳೂರು, ಸೆ. 22: ‘ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ವರದಿ ಬಂದ ಬಳಿಕ ಪರಿಶೀಲಿಸಿ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ-2‘ಎ'ಗೆ ಮೀಸಲಾತಿ ಕಲ್ಪಿಸಲು ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪುನರುಚ್ಚರಿಸಿದ್ದಾರೆ.

ಗುರುವಾರ ವಿಧಾನಸಭೆ ಶೂನ್ಯವೇಳೆಯಲ್ಲಿ ಬಿಜೆಪಿ ಹಿರಿಯ ಸದಸ್ಯ ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರ ನೀಡಿದ ಅವರು, ‘ಲಿಂಗಾಯತ ವೀರಶೈವ ಸಮುದಾಯದ ಹಲವು ಪಂಗಡಗಳು ಒಬಿಸಿ ಮೀಸಲಾತಿ ಪಟ್ಟಿಯಿಂದ ಬಿಟ್ಟು ಹೋಗಿದ್ದವು. ಬಿಎಸ್‍ವೈ ಅವರು ಸಿಎಂ ಆಗಿದ್ದ ವೇಳೆ ಸಂಪುಟ ಉಪಸಮಿತಿ ರಚನೆ ಮಾಡಿ ಸೇರ್ಪಡೆ ಪ್ರಯತ್ನ ನಡೆಸಿದ್ದಾರೆ.

ಇದೀಗ ಪಂಚಮಸಾಲಿ ಸಮುದಾಯವನ್ನು 2‘ಎ'ಗೆ ಸೇರ್ಪಡೆ ಮಾಡಲು ಸರಿಯಾದ ಡೇಟಾ ಇಲ್ಲ. ಆಯೋಗಕ್ಕೆ ವರದಿ ನೀಡಲು ಸೂಚಿಸಲಾಗಿದೆ. ಇದೊಂದು ಕಾನೂನಿನ ಅಂಶವಾಗಿರುವುದರಿಂದ ಸಾಕಷ್ಟು ಸಮಯ ಬೇಕಾಗುತ್ತದೆ. ಆದರೂ ನಮ್ಮ ಸರಕಾರ ಆ ವರ್ಗದ ಜನರಿಗೆ ನ್ಯಾಯ ಒದಗಿಸಲು ಬದ್ಧವಾಗಿದೆ' ಎಂದು ಬಸವರಾಜ ಬೊಮ್ಮಾಯಿ ಸ್ಪಷ್ಟಣೆ ನೀಡಿದರು.

ಮೀಸಲಾತಿಗೆ ಬೆಂಬಲ: ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ಯಡಿಯೂರಪ್ಪ, ‘ನಾನು ಲಿಂಗಾಯತ ಪಂಚಮಸಾಲಿ ಸಮುದಾಯವನ್ನು ಪ್ರವರ್ಗ-2‘ಎ'ಗೆ ಸೇರ್ಪಡೆ ಮಾಡಲು ವಿರೋಧ ವ್ಯಕ್ತಪಡಿಸಿಲ್ಲ. ಸಿಎಂ ಆಗಿದ್ದ ವೇಳೆ ಆ ಸಮುದಾಯದ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಿದ್ದೇನೆ. ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ 500 ಕೋಟಿ ರೂ.ಹಣ ನೀಡಿದ್ದೇನೆ. ಪಂಚಮಸಾಲಿ ಸಮುದಾಯದ ಶೈಕ್ಷಣಿಕ ಮತ್ತು ಉದ್ಯೋಗಕ್ಕಾಗಿ ಮೀಸಲಾತಿ ಕಲ್ಪಿಸಲು ಸರಕಾರ ಕ್ರಮ ಕೈಗೊಳ್ಳಬೇಕು' ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News