ರಾಜ್ಯದೆಲ್ಲೆಡೆ PFI ಕಚೇರಿಗಳ ಮೇಲೆ ಎನ್‍ಐಎ ದಾಳಿ: ಹಲವರ ಬಂಧನ

Update: 2022-09-22 14:48 GMT

ಬೆಂಗಳೂರು, ಸೆ.22: ಉಗ್ರ ಚಟುವಟಿಕೆಗಳಿಗೆ ನೆರವು ನೀಡಿದ ಆರೋಪ ಮೇಲೆ ರಾಜ್ಯದ ಎಂಟು ಜಿಲ್ಲೆಗಳಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‍ಐ), ಎಸ್‍ಡಿಪಿಐ ಪಕ್ಷದ ನಾಯಕರ ಮನೆ, ಕಚೇರಿಗಳ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‍ಐಎ) ದಾಳಿ ನಡೆಸಿದ್ದು, ಏಳು ಮಂದಿಯನ್ನು ಬಂಧಿಸಲಾಗಿದೆ.

ಈ ನಡುವೆ ದಾಳಿ ಖಂಡಿಸಿ ಪ್ರತಿಭಟಿಸಿದ ಪಿಎಫ್‍ಐ ಕಾರ್ಯಕರ್ತರ ಮೇಲೆ ಲಾಠಿ ಪ್ರಹಾರ ನಡೆಸಲಾಗಿದೆ.

ಪಿಎಫ್‍ಐ ಸಂಘಟನೆಯ ನಾಯಕರಾದ ಯಾಸೀರ್ ಎ.ಹಸನ್, ಮುಹಮ್ಮದ್ ಶಕೀಬ್, ಅನೀಸ್ ಅಹ್ಮದ್, ಅಫ್ಸರ್ ಪಾಷಾ, ಅಬ್ದುಲ್ ವಾಹೀದ್ ಸೇಠ್, ಮುಹಮ್ಮದ್ ಫಾರೂಕ್, ಶಾಹೀದ್ ನಾಸೀರ್ ಎಂಬುವರನ್ನು ಬಂಧಿಸಲಾಗಿದೆ ಎಂದು ಎನ್‍ಐಎ ಅಧಿಕೃತವಾಗಿ ತಿಳಿಸಿದೆ.

ಗುರುವಾರ ಮುಂಜಾನೆ ಸ್ಥಳೀಯ ಠಾಣೆಯ ಪೊಲೀಸರ ಸಹಯೋಗದೊಂದಿಗೆ ಎನ್‍ಐಎ ಅಧಿಕಾರಿಗಳು ಬೆಂಗಳೂರು, ಮಂಗಳೂರು, ದಾವಣಗೆರೆ, ಮೈಸೂರು, ಕಲಬುರ್ಗಿ, ಶಿವಮೊಗ್ಗ, ಕೊಪ್ಪಳ ಸೇರಿದಂತೆ ವಿವಿಧೆಡೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು. ಆನಂತರ, ವಶಕ್ಕೆ ಪಡೆದು ಹಲವರ ಹೇಳಿಕೆಗಳನ್ನು ದಾಖಲಿಸಿದರು.

ದಾಳಿ ಸಂದರ್ಭದಲ್ಲಿ ಕೆಲ ಕರಪತ್ರಗಳು, ಇನ್ನಿತರೆ ದಾಖಲೆ, ನಗದು, ಕಂಪ್ಯೂಟರ್ ಸಿಪಿಯು, ಲ್ಯಾಪ್‍ಟ್ಯಾಪ್, ಪೆನ್ ಡ್ರೈವ್ ಹಾಗೂ ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ ಎಂದು ಎನ್‍ಐಎ ತಿಳಿಸಿದರು.

ಲಾಠಿ ಪ್ರಹಾರ: ಎಸ್‍ಡಿಪಿಐ ಮತ್ತು ಪಿಎಫ್‍ಐ ಮುಖಂಡರ ಮನೆಗಳ ಮೇಲೆ ಎನ್‍ಐಐ ದಾಳಿ ಖಂಡಿಸಿ, ಹುಬ್ಬಳ್ಳಿ, ಮೈಸೂರು, ಕೊಪ್ಪಳ ಸೇರಿದಂತೆ ವಿವಿಧೆಡೆ ಪ್ರತಿಭಟನೆ ನಡೆಸಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಆಕ್ರೋಶ ಹೊರಹಾಕಲಾಯಿತು.

ಇಲ್ಲಿನ ಹುಬ್ಬಳ್ಳಿ ನಗರದ ಕೌಲ್‍ಪೇಟೆ ಬಳಿ ಬೆಂಗಳೂರು ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದ ಎಸ್‍ಡಿಪಿಐ ಮತ್ತು ಪಿಎಫ್‍ಐ ಕಾರ್ಯಕರ್ತರ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. 

ಎಸ್‍ಡಿಪಿಐ ಬಾವುಟ ಹಿಡಿದ ನೂರಕ್ಕೂ ಹೆಚ್ಚು ಮಂದಿ ರಸ್ತೆಯಲ್ಲಿ ಜಮಾಯಿಸಿದರು. ಮಾನವ ಸರಪಳಿ ರಚಿಸಿ, ‘ಗೋ ಬ್ಯಾಕ್ ಎನ್‍ಐಎ’ ಎಂದು ಜೋರಾಗಿ ಕೂಗುತ್ತಾ ರಸ್ತೆಗೆ ಅಡ್ಡವಾಗಿ ನಿಂತರು.

ಸ್ಥಳಕ್ಕೆ ಬಂದ ಪೊಲೀಸರು ರಸ್ತೆ ತಡೆಯದೆ, ಶಾಂತವಾಗಿ ಪ್ರತಿಭಟಿಸುವಂತೆ ಸೂಚಿಸಿದರೂ, ಕಾರ್ಯಕರ್ತರು ಘೋಷಣೆಗಳನ್ನು ಮುಂದುವರಿಸಿದರು. ಕಡೆಗೆ  ಪೊಲೀಸರು ಕಾರ್ಯಕರ್ತರನ್ನು ರಸ್ತೆಯಿಂದ ಪಕ್ಕಕ್ಕೆ ತಳ್ಳಲು ಯತ್ನಿಸಿದರು. ಈ ವೇಳೆ, ಪರಸ್ಪರ ತಳ್ಳಾಟ ಉಂಟಾಯಿತು. ಕಡೆಗೆ ಲಘು ಲಾಠಿ ಪ್ರಹಾರ ನಡೆಸಿದರು. 

ಇನ್ನೂ, ಅನೀಸ್ ಅಹ್ಮದ್ ಅವರ ಬಾಗಲೂರು ನಿವಾಸ, ಅಫ್ಸರ್ ಪಾಷಾ ಅವರ ಟೆಲಿಕಾಂಲೇಔಟ್, ಜಯಮಹಲ್ ರಸ್ತೆಯಲ್ಲಿರುವ ಶಹೀದ್ ಸೇಠ್, ರಿಚ್ಮಾಂಡ್‍ಟೌನ್‍ನ ಮುಹಮ್ಮದ್ ಶಕೀಬ್, ಆರ್‍ಟಿನಗರದ ಯಾಸೀರ್ ಎ.ಹಸನ್, ಬೆನ್ಸನ್‍ಟೌನ್ ಹಾಗೂ ಪುಲಿಕೇಶಿನಗರದಲ್ಲಿರುವ ಪಿಎಫ್‍ಐ ಕಚೇರಿಗಳ ಮೇಲೆ ದಾಳಿ ನಡೆಸಲಾಯಿತು.

► 19 ಪ್ರಕರಣ ದಾಖಲು: ದಾಳಿ ಸಂದರ್ಭದಲ್ಲಿ ಒಟ್ಟು 19 ಪ್ರಕರಣಗಳನ್ನು ಪಿಎಫ್‍ಐ ದಾಖಲು ಮಾಡಿ, ತನಿಖೆ ಮುಂದುವರೆಸಲಾಗಿದೆ ಎಂದು ಎನ್‍ಐಎ ತಿಳಿಸಿದೆ.

ದೇಶದೆಲ್ಲೆಡೆ 45 ಮಂದಿ ಬಂಧನ: ಗುರುವಾರ ಎನ್‍ಐಎ ದಾಳಿ ಪ್ರಕರಣ ಸಂಬಂಧ 45 ಮಂದಿಯನ್ನು ಬಂಧಿಸಲಾಗಿದೆ. ಪ್ರಮುಖವಾಗಿ ಕೇರಳದಿಂದ 19, ತಮಿಳುನಾಡಿನಿಂದ 11, ಕರ್ನಾಟಕದಿಂದ 7, ಆಂಧ್ರಪ್ರದೇಶದಿಂದ 4, ರಾಜಸ್ಥಾನದಿಂದ 2, ಉತ್ತರ ಪ್ರದೇಶ ಮತ್ತು ತೆಲಂಗಾಣದಿಂದ ತಲಾ ಒಬ್ಬರನ್ನು ಬಂಧಿಸಲಾಗಿದೆ ಎಂದು ಎನ್‍ಐಎ ಮಾಹಿತಿ ನೀಡಿದರು.

----------------------------------------------

► ಎನ್‍ಐಎ ದಾಳಿ:  ಪಿಎಫ್‍ಐ ಖಂಡನೆ

ಎನ್‍ಐಎ ಕೇಂದ್ರ ಸರಕಾರದ ಕೈಗೊಂಬೆಯಾಗಿದ್ದು, ಆತಂಕದ ವಾತಾವರಣ ಸೃಷ್ಟಿಸುವ ಉದ್ದೇಶವನ್ನಷ್ಟೇ ಹೊಂದಿದೆ.ಆದರೆ, ಇಂತಹ ದಾಳಿಗಳಿಗೆ ಬೆದರಿರುವುದಿಲ್ಲ ಎಂದು ಪಿಎಫ್‍ಐ ತಿಳಿಸಿದೆ.

ಗುರುವಾರ ದೇಶದೆಲ್ಲೆಡೆ ಪಿಎಫ್‍ಐ ಕಚೇರಿಗಳ ಮೇಲೆ ದಾಳಿ ಪ್ರಕರಣ ಸಂಬಂಧ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ, ದೇಶಾದ್ಯಂತ ಎನ್‍ಐಎ, ಈಡಿ ದಾಳಿಗಳು, ರಾಷ್ಟ್ರೀಯ ಹಾಗೂ ರಾಜ್ಯ ನಾಯಕರ ಅನ್ಯಾಯದ ಬಂಧನ ಮತ್ತು ಕಿರುಕುಳಗಳು, ಸಂಘಟನೆಯ ಸದಸ್ಯರು ಮತ್ತು ಮತ್ತು ಬೆಂಬಲಿಗರ ಗುರಿಯಾಗಿಸಿರುವುದನ್ನು ತೀವ್ರವಾಗಿ ಖಂಡಿಸಿದೆ.

ಕೇಂದ್ರೀಯ ಏಜೆನ್ಸಿಗಳನ್ನು ತನ್ನ ಕೈಗೊಂಬೆಗಳನ್ನಾಗಿ ಬಳಸುವ ಮೂಲಕ ಸರ್ವಾಧಿಕಾರಿ ಆಡಳಿತವು ನಡೆಸುತ್ತಿರುವ ಇಂತಹ ಭೀತಿಯ ತಂತ್ರಗಳಿಗೆ ಪಾಪ್ಯುಲರ್ ಫ್ರಂಟ್ ಎಂದೂ ಬೆದರಿರುವುದಿಲ್ಲ. ಸಂಘಟನೆಯು ತನ್ನ ನಿಲುವಿನಲ್ಲಿ ಬದ್ಧವಾಗಿದೆ.ನಮ್ಮ ಪ್ರೀತಿಯ ದೇಶದ ಸಾಂವಿಧಾನಿಕ ಸ್ಫೂರ್ತಿ ಹಾಗೂ ಮೌಲ್ಯಗಳನ್ನು ಪುನಃಸ್ಥಾಪಿಸುವ ಹೋರಾಟದಲ್ಲಿ ದೃಢವಾಗಿ ನಿಲ್ಲಲಿದೆ ಎಂದು ಪ್ರಕಟನೆಯಲ್ಲಿ ಹೇಳಿದೆ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News