2.4 ಲಕ್ಷ ಎಕರೆ ಅರಣ್ಯ ಪ್ರದೇಶ ಒತ್ತುವರಿ: ಸಚಿವ ಆರ್.ಅಶೋಕ್
ಬೆಂಗಳೂರು, ಸೆ.22: ರಾಜ್ಯದಲ್ಲಿ 2.4 ಲಕ್ಷ ಎಕರೆಗೂ ಹೆಚ್ಚಿನ ಪ್ರಮಾಣದ ಅರಣ್ಯ ಭೂಮಿ ಒತ್ತುವರಿಯಾಗಿದ್ದು, ಅದರ ತೆರವಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಗುರುವಾರ ವಿಧಾನ ಪರಿಷತ್‍ನಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಟಿ.ಎ.ಶರವಣ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಕಳೆದ 25 ವರ್ಷಗಳಿಂದ ಇಲ್ಲಿಯವರೆಗೆ 2.4 ಲಕ್ಷ ಎಕರೆಗೂ ಅಧಿಕ ಪ್ರಮಾಣದ ಅರಣ್ಯ ಭೂಮಿ ಒತ್ತುವರಿಯಾಗಿದೆ. ಈ ಕುರಿತು ರಾಜ್ಯ ಹೈಕೋರ್ಟ್‍ನಲ್ಲೂ ಕೂಡಾ ಪ್ರಮಾಣ ಪತ್ರ ಸಲ್ಲಿಸಲಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ಗಲಾಟೆ, ಗದ್ದಲದ ನಡೆವೆಯೂ ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ ಪ್ರಶ್ನೋತ್ತರ ಕಲಾಪ ಕೈಗೆತ್ತಿಕೊಂಡರು. ಆಗ ಟಿ.ಎ. ಶರವಣ ಅವರ ಪ್ರಶ್ನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪರವಾಗಿ ಉತ್ತರ ನೀಡಿದ ಸಚಿವ ಅಶೋಕ್, ಒತ್ತುವರಿಯಾಗಿರುವ ಅರಣ್ಯ ಪ್ರದೇಶವನ್ನು ತೆರವು ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಅರಣ್ಯ ಇಲಾಖೆಯಲ್ಲಿ ಲಭ್ಯವಿರುವ ಮಾಹಿತಿಯಂತೆ 42,114.09 ಹೆಕ್ಟೇರ್ ಕಾಯ್ದಿಟ್ಟ ಅರಣ್ಯ ಪ್ರದೇಶವನ್ನು ಮಂಜೂರು ಮಾಡಲಾಗಿದೆ ಎಂದು ಹೇಳಿದರು. ಅರಣ್ಯ ಇಲಾಖೆಯಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ ಬಳ್ಳಾರಿ-1006 ಹೆಕ್ಟೇರ್, ಬೆಳಗಾವಿ-183, ಬೆಂಗಳೂರು-1156, ಚಿಕ್ಕಮಗಳೂರು-1033, ಹಾಸನ-3018, ಕಲಬುರಗಿ-4350, ಕೊಡಗು-174, ಮಂಗಳೂರು-64, ಮೈಸೂರು-12,385, ಶಿವಮೊಗ್ಗ-12086 ಮತ್ತು ಶಿರಸಿಯಲ್ಲಿ-2112 ಹೆಕ್ಟೇರ್ ಸೇರಿದಂತೆ ಒಟ್ಟಾರೆ 42,114.09 ಹೆಕ್ಟೇರ್ 13 ಅರಣ್ಯ ವೃತ್ತಗಳಲ್ಲಿ ಅರಣ್ಯ ಭೂಮಿ ಮಂಜೂರು ಮಾಡಲಾಗಿದೆ ಎಂದು ಹೇಳಿದರು. ಅರಣ್ಯ ಪ್ರದೇಶವನ್ನು ಅರಣ್ಯೇತರ ಉದ್ದೇಶಕ್ಕಾಗಿ ಮಂಜೂರು ಮಾಡಿರುವುದು ಕಾನೂನುಬಾಹಿರ. ಅಂತಹ ಪ್ರಕರಣಗಳ ಮಂಜೂರಾತಿಯನ್ನು ರದ್ದು ಪಡಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.