ವಿದ್ಯಾರ್ಥಿಗಳಿಗೆ ಪ್ರಾದೇಶಿಕ ಪಠ್ಯ ಬೋಧಿಸಲು ಯು.ಟಿ.ಖಾದರ್ ಆಗ್ರಹ

Update: 2022-09-22 15:45 GMT

ಬೆಂಗಳೂರು, ಸೆ. 22: ‘ಮಂಗಳೂರು ವಿಶ್ವವಿದ್ಯಾಲಯದ ಅಧಿಕಾರಿ ವರ್ಗದವರ ನಿರ್ಲಕ್ಷ್ಯತೆಯಿಂದ ಕರಾವಳಿ, ಕೊಡಗಿನ ಸಂಸ್ಕøತಿ, ಸಂಪ್ರದಾಯಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಲು ಆಗುತ್ತಿಲ್ಲ. ಹೀಗಾಗಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಜೊತೆಗೆ ಪ್ರಾದೇಶಿಕ ಇತಿಹಾಸ ತಿಳಿಸುವ ಪಠ್ಯವನ್ನು ಸಿದ್ಧಪಡಿಸಿ ವಿದ್ಯಾರ್ಥಿಗಳಿಗೆ ಬೋಧಿಸಲು ಕ್ರಮ ಕೈಗೊಳ್ಳಬೇಕು' ಎಂದು ವಿಪಕ್ಷ ಉಪನಾಯಕ ಯು.ಟಿ.ಖಾದರ್ ಆಗ್ರಹಿಸಿದ್ದಾರೆ.

ಗುರುವಾರ ವಿಧಾನಸಭೆ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ‘ನಮ್ಮ ಕರಾವಳಿ ಭಾಗದ ಸಂಪ್ರದಾಯ ಮತ್ತು ಪರಂಪರೆಯನ್ನು ಬಹಳ ಹಿಂದಿನಿಂದಲೂ ಬೋಧನೆ ಮಾಡಲಾಗುತ್ತಿದೆ. ಈ ಸಂಬಂಧ ಪಠ್ಯವನ್ನು ಸಿದ್ಧಪಡಿಸಿ ಸಲ್ಲಿಸಬೇಕಿತ್ತು. ಆದರೆ, ಮಂಗಳೂರು ವಿವಿಯು ತನ್ನ ಪ್ರತಿನಿಧಿಯನ್ನು ಕಳುಹಿಸದೆ ನಿರ್ಲಕ್ಷ್ಯತೆ ವಹಿಸಿದೆ. ಆದುದರಿಂದ ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳಬೇಕು' ಎಂದು ಆಗ್ರಹಿಸಿದರು.

ಬಳಿಕ ಉತ್ತರ ನೀಡಿದ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ, ‘ಯಾವುದೇ ವಿವಿಗೆ ಉನ್ನತ ಶಿಕ್ಷಣ ಪರಿಷತ್ ಪಠ್ಯವನ್ನು ಸಿದ್ಧಪಡಿಸಿ ಕೊಡುವುದಿಲ್ಲ. ಬದಲಿಗೆ ಆಯಾ ವಿವಿಯೇ ತೀರ್ಮಾನ ಮಾಡುತ್ತಿದೆ. ಹೀಗಾಗಿ ನಾವು ಕ್ರಮ ಕೈಗೊಳ್ಳುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದರು. ಇದಕ್ಕೆ ಆಕ್ಷೇಪಿಸಿದ ಯು.ಟಿ.ಖಾದರ್, ‘ಮಂಗಳೂರು ವಿಶ್ವ ವಿದ್ಯಾಲಯ ನಿಮ್ಮ ಅಧಿಕಾರದ ವ್ಯಾಪ್ತಿಯಲ್ಲಿ ಇಲ್ಲವೇ?' ಎಂದು ಪ್ರಶ್ನಿಸಿದರು. ‘ಈ ಕುರಿತು ಪರಿಶೀಲಿಸಿ ಕ್ರಮ ವಹಿಸಲಾಗುವುದು' ಎಂದು ಅಶ್ವತ್ಥ ನಾರಾಯಣ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News