CET ಮೇಲ್ಮನವಿ ಅರ್ಜಿ: ಅಭ್ಯರ್ಥಿಗಳಿಗೆ ನೆರವಾಗುವ ವರದಿ ಹೈಕೋರ್ಟ್ ಗೆ ಸಲ್ಲಿಕೆ

Update: 2022-09-22 17:16 GMT

ಬೆಂಗಳೂರು, ಸೆ.22: 2020-2021ನೆ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು 2022ನೆ ಸಾಲಿನಲ್ಲಿ ವೃತ್ತಿಪರ ಕೋರ್ಸ್‍ಗಳ ಪ್ರವೇಶಕ್ಕೆ ಪರಿಗಣಿಸುವುದಕ್ಕೆ ಸಂಬಂಧಿಸಿ ಪುನರಾವರ್ತಿತ ಅಭ್ಯರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಸರಕಾರ ಹೈಕೋರ್ಟ್‍ಗೆ ವರದಿಯನ್ನು ಸಲ್ಲಿಸಿದೆ.  

ಸಿಇಟಿ ಪರೀಕ್ಷೆಗೆ ಪುನರಾವರ್ತಿತ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆ ಅಂಕಗಳನ್ನು ಪರಿಗಣಿಸುವಂತೆ ಏಕ ಸದಸ್ಯ ನ್ಯಾಯಪೀಠ ನೀಡಿದ್ದ ತೀರ್ಪು ಪ್ರಶ್ನಿಸಿ ಸರಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. 

ಸರಕಾರದ ಪರ ವಕೀಲರು, ಪುನರಾವರ್ತಿತ ಅಭ್ಯರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಹೈಕೋರ್ಟ್ ನ್ಯಾಯಪೀಠಕ್ಕೆ ಮುಚ್ಚಿದ ಲಕೋಟೆಯಲ್ಲಿ ವರದಿಯನ್ನು ಸಲ್ಲಿಸಿದರು. ಅರ್ಜಿ ವಿಚಾರಣೆಯನ್ನು ನ್ಯಾಯಪೀಠವು ಮುಂದೂಡಿಕೆ ಮಾಡಿತು. 

2020-21ನೆ ಸಾಲಿನ ಪಿಯುಸಿ ಅಂಕಗಳನ್ನು 2022ನೆ ಸಾಲಿನ ವೃತ್ತಿಪರ ಕೋರ್ಸ್‍ಗಳ ಪ್ರವೇಶಕ್ಕೆ ಪರಿಗಣಿಸಲಾಗದು ಎಂದು ತಿಳಿಸಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಜು.30ರಂದು ಹೊರಡಿಸಿದ್ದ ಟಿಪ್ಪಣಿ ಪ್ರಶ್ನಿಸಿ 40ಕ್ಕೂ ಅಧಿಕ ಸಿಇಟಿ ಪುನರಾವರ್ತಿತ ವಿದ್ಯಾರ್ಥಿಗಳು ಹೈಕೋರ್ಟ್‍ಗೆ ತಕರಾರು ಅರ್ಜಿ ಸಲ್ಲಿಸಿದ್ದರು. 

ಈ ಅರ್ಜಿಗಳನ್ನು ಸೆ.3ರಂದು ಮಾನ್ಯ ಮಾಡಿದ್ದ ಏಕಸದಸ್ಯ ನ್ಯಾಯಪೀಠ, ಕೆಇಎ ಹೊರಡಿಸಿದ್ದ ಟಿಪ್ಪಣಿ ರದ್ದುಪಡಿಸಿತ್ತಲ್ಲದೆ, ಸಿಇಟಿ ಪುನರಾವರ್ತಿತ ವಿದ್ಯಾರ್ಥಿಗಳ ಪಿಯುಸಿ ಹಾಗೂ ಸಿಇಟಿಯ ತಲಾ ಶೇ.50 ಅಂಕಗಳನ್ನು ಪರಿಗಣಿಸಿ ಹೊಸದಾಗಿ ರ್ಯಾಂಕ್ ಪಟ್ಟಿ ಪ್ರಕಟಿಸುವಂತೆ ಪ್ರಾಧಿಕಾರಕ್ಕೆ ಆದೇಶಿಸಿತ್ತು. ಈ ತೀರ್ಪು ರದ್ದುಪಡಿಸುವಂತೆ ಕೋರಿ ಸರಕಾರ ಹೈಕೋರ್ಟ್ ವಿಭಾಗೀಯ ನ್ಯಾಯಪೀಠಕ್ಕೆ ಮೇಲ್ಮನವಿ ಸಲ್ಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News