ಎಸ್ಸಿ-ಎಸ್ಟಿ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ವಾರದೊಳಗೆ ಸರ್ವಪಕ್ಷಗಳ ಸಭೆ: ಸಿಎಂ ಬೊಮ್ಮಾಯಿ

Update: 2022-09-23 11:50 GMT

ಬೆಂಗಳೂರು, ಸೆ. 23: ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ(ಎಸ್ಸಿ-ಎಸ್ಟಿ) ಹಾಗೂ ಇತರೆ ಹಿಂದುಳಿದ ವರ್ಗಗಳ ಮೀಸಲಾತಿ ಹೆಚ್ಚಳ ಸಂಬಂಧ ಇನ್ನೊಂದು ವಾರದಲ್ಲಿ ಸರ್ವಪಕ್ಷ ಸಭೆ ನಡೆಸಿ, ಸೂಕ್ತ ತೀರ್ಮಾನ ಮಾಡಲಾಗುವುದು' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.

ಶುಕ್ರವಾರ ವಿಧಾನಸಭೆಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ರಾಜೀನಾಮೆಗೆ ಆಗ್ರಹಿಸಿ ಜೆಡಿಎಸ್ ಸ್ಪೀಕರ್ ಪೀಠದ ಮುಂದಿನ ಬಾವಿಗಿಳಿದು ಧರಣಿ, ಗದ್ದಲದ ಮಧ್ಯೆ ಸ್ವಯಂಪ್ರೇರಿತ ಹೇಳಿಕೆ ನೀಡಿದ ಅವರು, ‘ಪರಿಶಿಷ್ಟರ ಮೀಸಲಾತಿ ಹೆಚ್ಚಳ ಕುರಿತು ನ್ಯಾ.ನಾಗಮೋಹನ್ ದಾಸ್ ಸಮಿತಿ ಮತ್ತು ನ್ಯಾ. ಸುಭಾಷ್ ಆಡಿ ಸಮಿತಿಯ ವರದಿಗಳು ಸಲ್ಲಿಕೆಯಾಗಿವೆ. ಮೀಸಲಾತಿ ಹೆಚ್ಚಳದ ವಿಷಯ ಸಂವಿಧಾನ ಮತ್ತು ಕಾನೂನಾತ್ಮಕ ವಿಚಾರ. ಈ ಸಂಬಂಧ ಸರ್ವಪಕ್ಷ ಸಭೆ ಕರೆದು ಚರ್ಚೆ ಮಾಡಿ ಮುಂದಿನ ಹೆಜ್ಜೆಗಳನ್ನು ಇಡಬೇಕಿದೆ' ಎಂದು ತಿಳಿಸಿದರು.

‘ಮೀಸಲಾತಿ ಹೆಚ್ಚಳ ಮಾಡುವ ವಿಷಯ ಅತ್ಯಂತ ಸಂಕೀರ್ಣ ಸಮಸ್ಯೆಯಾಗಿದ್ದು, ಎಲ್ಲ ವರ್ಗಕ್ಕೂ ನ್ಯಾಯ ಕೊಡಿಸಲು ಕ್ರಮ ವಹಿಸಲಾಗುವುದು. ಆ ನಿಟ್ಟಿನಲ್ಲಿ ಮೀಸಲಾತಿ ಹೆಚ್ಚಳಕ್ಕೆ ಸರಕಾರ ಬದ್ಧವಾಗಿದೆ. ಅವರ ಜನಸಂಖ್ಯೆಗೆ ತಕ್ಕಂತೆ ಮೀಸಲಾತಿ ಕೊಡಿಸುವುದಲ್ಲದೆ, ಅವರ ಭಾವನೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತೇವೆ. ಹೀಗಾಗಿ ಧರಣಿ ಸತ್ಯಾಗ್ರಹ ಕೈಗೊಂಡಿರುವ ವಾಲ್ಮೀಕಿ ಶ್ರೀಗಳು ಕೂಡಲೇ ತಮ್ಮ ಸತ್ಯಾಗ್ರಹವನ್ನು ಕೈಬಿಡಬೇಕು' ಎಂದು ಬಸವರಾಜ ಬೊಮ್ಮಾಯಿ ಮನವಿ ಮಾಡಿದರು.

ಇದಕ್ಕೆ ಧ್ವನಿಗೂಡಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಪ್ರಮಾಣ ಹೆಚ್ಚಾಗಬೇಕು. ವಾಲ್ಮೀಕಿ ಶ್ರೀಗಳು ಧರಣಿ ನಡೆಸುತ್ತಿದ್ದಾರೆ. ನ್ಯಾ.ನಾಗಮೋಹನ್ ದಾಸ್ ಸಮಿತಿ ವರದಿ ಸಲ್ಲಿಸಿದೆ. ಅದರ ಅನ್ವಯ ಎಸ್ಸಿ-ಎಸ್ಟಿ ಮೀಸಲಾತಿ ಪ್ರಮಾಣ ಶೇ.24ರಷ್ಟು ಆಗಬೇಕು. ಒಟ್ಟಾರೆ ಮೀಸಲಾತಿ ಪ್ರಮಾಣವೂ ಏರಿಕೆಯಾಗಲಿದೆ. ಹೀಗಾಗಿ ಯಾವುದೇ ವಿಳಂಬ ಮಾಡದೆ ಸರ್ವಪಕ್ಷ ಸಭೆ ಕರೆದು ಚರ್ಚಿಸಿ ಸೂಕ್ತ ತೀರ್ಮಾನ ಮಾಡಬೇಕು' ಎಂದು ಸಲಹೆ ನೀಡಿದರು.

ಇದೇ ವೇಳೆ ಮಾತನಾಡಿದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ, ‘ಎಸ್ಸಿ-ಎಸ್ಟಿ ವರ್ಗದ ಮೀಸಲಾತಿ ಸಂಬಂಧ ಸರ್ವಪಕ್ಷ ಸಭೆ ಕರೆಯಲು ನಮ್ಮ ಪಕ್ಷದ ಸಹಮತವಿದೆ. ವಾಲ್ಮೀಕಿ ಸಮುದಾಯದ ಸ್ವಾಮೀಜಿ 230 ದಿನಗಳಿಂದ ಧರಣಿ ಸತ್ಯಾಗ್ರಹ ನಡೆಸುತ್ತಿದ್ದು, ಅವರು ಕೂಡಲೇ ಧರಣಿ ವಾಪಸ್ ಪಡೆಯಬೇಕು' ಎಂದು ಮನವಿ ಮಾಡಿದರು. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News