ಶೇ.40ರಷ್ಟು ಕಮಿಷನ್ ಆರೋಪ ಚರ್ಚೆಗೆ ಅವಕಾಶವನ್ನೇ ಕೊಡಲಿಲ್ಲ: ಸಿದ್ದರಾಮಯ್ಯ ಆಕ್ಷೇಪ

Update: 2022-09-23 12:23 GMT

ಬೆಂಗಳೂರು, ಸೆ. 23: ‘ರಾಜ್ಯ ಸರಕಾರದ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರರ ಸಂಘದ ಶೇ.40 ಕಮೀಷನ್ ಆರೋಪದ ಬಗ್ಗೆ ಚರ್ಚೆ ಮಾಡಲು ಅವಕಾಶವನ್ನು ನೀಡುತ್ತಿಲ್ಲ. ಕಮಿಷನ್ ಆರೋಪದ ಚರ್ಚೆಯನ್ನು ತಡೆಯಲು ತಂತ್ರಗಾರಿಕೆ ಮಾಡಲಾಗಿದೆ' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.

ಶುಕ್ರವಾರ ವಿಧಾನಸಭೆಯಲ್ಲಿ ಬಿಎಂಎಸ್ ಟ್ರಸ್ಟ್ ಅಕ್ರಮಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಸದಸ್ಯರ ಧರಣಿ, ಗದ್ದಲದ ಮಧ್ಯೆ ಮಾತನಾಡಿದ ಅವರು, ಸರಕಾರದ ಭ್ರಷ್ಟಾಚಾರ ಬಯಲಾಗುತ್ತದೆ ಎಂಬ ಆತಂಕ ಸರಕಾರಕ್ಕೆ ಇದ್ದಂತಿದೆ. ಅಧಿವೇಶನವನ್ನು ಸೋಮವಾರ(ಸೆ. 26)ಕ್ಕೆ ಮುಂದೆ ಹಾಕಿ ನಮಗೆ ಅವಕಾಶ ನೀಡಬೇಕು. ಶೇ.40ರಷ್ಟು ಕಮಿಷನ್ ವಿಚಾರವನ್ನು ಚರ್ಚಿಸಬೇಕು' ಎಂದು ಆಗ್ರಹಿಸಿದರು.

ಇದಕ್ಕೆ ಆಕ್ಷೇಪಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಪ್ರತಿಪಕ್ಷಗಳ ಎಲ್ಲ ಆರೋಪದ ಬಗ್ಗೆ ಚರ್ಚೆಗೆ ನಾವು ಸಿದ್ಧರಿದ್ದೇವೆ. ಅವರು ಏನು ಹೇಳುತ್ತಾರೋ ಹೇಳಲಿ. ನಾವು ಏನು ಹೇಳಬೇಕೋ ಅದನ್ನು ಹೇಳುತ್ತೇವೆ. ಚರ್ಚೆಗೆ ಅವಕಾಶ ನೀಡಿ. ಸಿದ್ದರಾಮಯ್ಯನವರು ತಮ್ಮ ಅಧಿಕಾರಾವಧಿಯಲ್ಲಿ ಏನೇನೂ ಮಾಡಿದ್ದಾರೆಂದು ನಮಗೂ ಗೊತ್ತು' ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆಗ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಇಡೀ ಸರಕಾರವೇ ಭ್ರಷ್ಟಾಚಾರದಲ್ಲಿ ಮುಳುಗಿದೆ. ಇವರಿಗೆ ಭ್ರಷ್ಟಾಚಾರ ವಿಚಾರ ಚರ್ಚೆ ಮಾಡಲು ಇಷ್ಟವಿಲ್ಲ. ಹೀಗಾಗಿ ನಾನು ನೋಟಿಸ್ ನೀಡಿ ಮೂರು ದಿನಗಳು ಕಳೆದರೂ ವಿಷಯ ಚರ್ಚೆಗೆ ಅವಕಾಶವನ್ನೇ ನೀಡಲಿಲ್ಲ. ನನ್ನ ವಿರುದ್ಧವೂ ಬಿಜೆಪಿ ಸದಸ್ಯರು ಆರೋಪ ಮಾಡುತ್ತಿದ್ದು, ಇವರಿಗೆ ಧೈರ್ಯವಿದ್ದರೆ 2006ರಿಂದ ಈವರೆಗೆ ನಡೆದಿರುವ ಎಲ್ಲ ವಿಚಾರಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲಿ' ಎಂದು ಸವಾಲು ಹಾಕಿದರು.

ಈ ಮಧ್ಯೆ ಕಾಂಗ್ರೆಸ್ ಸದಸ್ಯರು ಶೇ.40ರಷ್ಟು ಕಮಿಷನ್ ಆರೋಪಕ್ಕೆ ಸಂಬಂಧಿಸಿದಂತೆ ಚರ್ಚೆಗೆ ಅವಕಾಶ ನೀಡಬೇಕೆಂದು ಕೋರಿ ಧರಣಿ ಆರಂಭಿಸಲು ಮುಂದಾದರು. ಆಗ ಗದ್ದಲ ಹೆಚ್ಚಾಯಿತು. ಈ ವೇಳೆ ಸ್ಪೀಕರ್ ಕಾಗೇರಿ, ಪ್ರಶ್ನೋತ್ತರ, ಗಮನಸೆಳೆಯುವ ಸೂಚನೆಯನ್ನು ಮಂಡಿಸಿದರು. ನಂತರ ಗದ್ದಲದ ನಡುವೆಯೇ 2022ನೆ ಸಾಲಿನ ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರ ವಿಧೇಯಕವನ್ನು ಸಿಎಂ ಮಂಡಿಸಿದರು. ಬಳಿಕ ಸ್ಪೀಕರ್ ಸದನವನ್ನು ಅನಿದಿಷ್ರ್ಟಾವಧಿಗೆ ಮುಂದೂಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News