ದೇವನೂರು, ಜಿ. ರಾಮಕೃಷ್ಣ ಸೇರಿ ಏಳು ಲೇಖಕರ ಪಠ್ಯವನ್ನು ಹಿಂಪಡೆದ ಸರಕಾರ

Update: 2022-09-23 14:19 GMT
ಡಾ. ಜಿ. ರಾಮಕೃಷ್ಣ | ದೇವನೂರ ಮಹಾದೇವ

ಬೆಂಗಳೂರು, ಸೆ.23: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ದೇವನೂರ ಮಹಾದೇವ, ಡಾ. ಜಿ. ರಾಮಕೃಷ್ಣ, ರೂಪಾ ಹಾಸನ ಅವರ ಪಠ್ಯವನ್ನು ಸೇರಿ ಏಳು ಲೇಖಕರ ಪಠ್ಯವನ್ನು ಶಿಕ್ಷಣ ಇಲಾಖೆಯು ಹಿಂಪಡೆದಿದ್ದು, ಬೋಧನೆ-ಕಲಿಕೆ ಹಾಗೂ ಮೌಲ್ಯಮಾಪನಕ್ಕೆ ಪರಿಗಣಿಸದಂತೆ ಸುತ್ತೋಲೆಯನ್ನು ಹೊರಡಿಸಿದೆ. 

ರಾಜ್ಯದಲ್ಲಿ ಶಿಕ್ಷಣವನ್ನು ಕೇಸರಿಕರಣಗೊಳಿಸಲು ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ಪಠ್ಯಪರಿಷ್ಕರಣೆಯನ್ನು ಮಾಡಲಾಗಿದೆ ಎಂದು ದೇವನೂರ ಮಹಾದೇವ, ಡಾ. ಜಿ. ರಾಮಕೃಷ್ಣ, ರೂಪಾ ಹಾಸನ, ಈರಪ್ಪ ಎಂ. ಕಂಬಳಿ, ಸತೀಶ್ ಕುಲಕರ್ಣಿ, ಸುಕನ್ಯಾ ಮಾರುತಿ, ದೊಡ್ಡಹುಲ್ಲೂರ ರುಕ್ಕೋಜಿರಾವ್ ಪಠ್ಯದಲ್ಲಿ ಅಳವಡಿಸಿದ್ದ ತಮ್ಮ ಗದ್ಯ-ಪದ್ಯಗಳನ್ನು ಪಠ್ಯದಿಂದ ಹೊರಗಿಡುವಂತೆ ಸರಕಾರಕ್ಕೆ ಪತ್ರಗಳನ್ನು ಬರೆದಿದ್ದರು. 

ಹಾಗಾಗಿ, ಶಿಕ್ಷಣ ಇಲಾಖೆಯು ಅವರ ಪತ್ರಗಳನ್ನು ಪರಿಗಣಿಸಿ, ತಡವಾಗಿ ತನ್ನ ನಿಲುವನ್ನು ಪ್ರಕಟಿಸಿದೆ. 2022-23ನೇ ಸಾಲಿನ ಕನ್ನಡ ಭಾಷಾ ಪಠ್ಯಪುಸ್ತಕಗಳಲ್ಲಿ ಲೇಖಕರು ತಮ್ಮ ಅನುಮತಿಯನ್ನು ಹಿಂಪಡೆದ ಕಾರಣ ಹತ್ತನೆಯ ತರಗತಿಯ ಪ್ರಥಮ ಭಾಷೆ ಕನ್ನಡದಲ್ಲಿ ಅಳವಡಿಸಿಕೊಂಡಿದ್ದ ದೇವನೂರು ಅವರ ‘ಎದೆಗೆ ಬಿದ್ದ ಅಕ್ಷರ’, ಡಾ. ಜಿ. ರಾಮಕೃಷ್ಣ ಅವರ ‘ಭಗತ್ ಸಿಂಗ್’, ಹತ್ತನೆಯ ತರಗತಿಯ ದ್ವಿತೀಯ ಭಾಷೆಯ ಕನ್ನಡದಲ್ಲಿ ಸುಕನ್ಯಾ ಮಾರುತಿ ಅವರ ‘ಏಣಿ’ ಪದ್ಯವನ್ನು ಹಿಂಪಡೆಯಲಾಗಿದೆ.

ಹತ್ತನೆಯ ತರಗತಿಯ ತೃತೀಯ ಭಾಷೆ ಕನ್ನಡದಲ್ಲಿ ಅಳವಡಿಕೊಂಡಿದ್ದ ರೂಪಾ ಹಾಸನ ಅವರ ‘ಅಮ್ಮನಾಗುವುದೆಂದರೆ’, ಈರಪ್ಪ ಎಂ. ಕಂಬಳಿ ಅವರ ‘ಹೀಗೊಂದು ಟಾಪ್ ಪ್ರಯಾಣ’, ಸತೀಶ್ ಕುಲಕರ್ಣಿ ಅವರ ‘ಕಟ್ಟುತ್ತೇವೆ ನಾವು’ ಹಾಗೂ ಆರನೆಯ ತರಗತಿಯ ಪ್ರಥಮ ಭಾಷೆ ಕನ್ನಡ ಪಠ್ಯದಲ್ಲಿ ಅಳವಡಿಸಿಕೊಂಡಿದ್ದ ದೊಡ್ಡಹುಲ್ಲೂರ ರುಕ್ಕೋಜಿರಾವ್ ಅವರ ‘ಡಾ. ರಾಜ್‍ಕುಮಾರ್’ ಪಠ್ಯವನ್ನು ಹಿಂಪಡೆಯಲಾಗಿದೆ ಎಂದು ಇಲಾಖೆ ಪ್ರಕಟಣೆ ತಿಳಿಸಿದೆ. 

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News