RSS ಪ್ರೇರಿತ ಸಂಸ್ಥೆಗಳಿಗೆ ಬೇಕಾಬಿಟ್ಟಿ ಭೂಮಿ ಹಂಚಿಕೆ: ಸರಕಾರದ ವಿರುದ್ಧ ಡಾ.ಎಚ್.ಸಿ.ಮಹದೇವಪ್ಪ ಆಕ್ರೋಶ

Update: 2022-09-23 14:51 GMT

ಬೆಂಗಳೂರು, ಸೆ. 23: ‘ಭೂರಹಿತ ರೈತರು, ದಲಿತರು ಹಾಗೂ ಅಲೆಮಾರಿ ಸಮುದಾಯದ ಎಷ್ಟೇ ಮಂದಿ ತುಂಡು ಭೂಮಿಗಾಗಿ ಅರ್ಜಿ ಸಲ್ಲಿಸಿ ಇನ್ನೂ ಕಾಯುತ್ತಾ ಇದ್ದರೂ ಅವರ ಬಗ್ಗೆ ತಲೆಯನ್ನೇ ಕೆಡಿಸಿಕೊಳ್ಳದೆ ಜಿಲ್ಲಾಧಿಕಾರಿಗಳ ವಿವೇಚನೆಗೆ ಬಿಟ್ಟು ಕೈಚೆಲ್ಲಿರುವ ಸರಕಾರ, ಆರೆಸೆಸ್ಸ್ ಪ್ರೇರಿತ ಸಂಸ್ಥೆಗಳಿಗೆ ಮಾತ್ರ ಬೇಕಾಬಿಟ್ಟಿಯಾಗಿ ಭೂಮಿಯನ್ನು ಹಂಚಿಕೆ ಮಾಡುತ್ತಿದೆ' ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ದೂರಿದ್ದಾರೆ.

ಶುಕ್ರವಾರ ಪ್ರಕಟನೆ ನೀಡಿರುವ ಅವರು, ‘ದೇಶದ ಸ್ವಾತಂತ್ರ್ಯ ಹಾಗೂ ಕರ್ನಾಟಕದ ಏಕೀಕರಣದ ನಂತರದಲ್ಲಿ ಇಲ್ಲಿ ಆಡಳಿತ ನಡೆಸಿದ ಕೇಂದ್ರ ಮತ್ತು ರಾಜ್ಯ ಸರಕಾರಗಳು ‘ಉಳುವವನೇ ಭೂಮಿ ಒಡೆಯ' ಹಾಗೂ ಭೂ ಸುಧಾರಣಾ ಕಾಯ್ದೆಗಳನ್ನು ಜಾರಿಗೊಳಿಸಿ ಭೂಮಿಯೇ ಇಲ್ಲದೇ ಬದುಕುತ್ತಿದ್ದ ಲಕ್ಷಾಂತರ ಕುಟುಂಬಗಳಿಗೆ ಭೂಮಿಯನ್ನು ನೀಡುವ ಕೆಲಸ ಮಾಡಿದೆ' ಎಂದು ಹೇಳಿದ್ದಾರೆ.

‘ಈ ಕೆಲಸ ಪರಿಣಾಮವೇ ಭಾರತದಲ್ಲಿ ಕ್ರಮೇಣ ಆಹಾರ ಧಾನ್ಯಗಳ ಉತ್ಪಾದನೆ ಮತ್ತು ರೈತರ ಸ್ವಾವಲಂಬನೆಯ ಬದುಕೂ ಸಾಧ್ಯವಾಗಿದೆ ಎಂಬುದು ಭೂಮಿಯನ್ನು ಪಡೆದು ಬದುಕುತ್ತಿರುವ ಬಹಳಷ್ಟು ಜನರಿಗೆ ತಿಳಿದಿರುವ ಸಂಗತಿ. ಆದರೆ ಇದೀಗ ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಗರು ಕೋಟಿಗಟ್ಟಲೇ ಬೆಲೆ ಬಾಳುವ ಸರಕಾರಿ ಜಮೀನು, ಗೋಮಾಳ ಇತ್ಯಾದಿಗಳನ್ನು ಆರೆಸೆಸ್ಸ್ ಪ್ರೇರಿತ ವಿವಿಧ ಸಂಘ ಸಂಸ್ಥೆಗಳಿಗೆ ನಿರಂತರವಾಗಿ ನೀಡುತ್ತಿದ್ದು ಅವುಗಳ ಜಿಲ್ಲಾವಾರು ಶಾಖೆಗಳ ಮೂಲಸೌಕರ್ಯ ಹೆಚ್ಚಿಸುವ ಕೆಲಸಕ್ಕೆ ಮುಂದಾಗಿದ್ದು ಇದೀಗ ತಮಿಳುನಾಡಿನಲ್ಲಿ ನೂರಾರು ಎಕರೆಯಲ್ಲಿ ಇಶಾ ಎಂಬ ಧಾರ್ಮಿಕ ಕೇಂದ್ರವನ್ನು ಹೊಂದಿರುವ ಸದ್ಗುರು ಹೆಸರಿನ ವ್ಯಕ್ತಿಗೂ ದೇವನಹಳ್ಳಿ ಸಮೀಪ ಹತ್ತಾರು ಎಕರೆ ಭೂಮಿಯನ್ನು ನೀಡಿರುವ ಬಗ್ಗೆ ಮಾಹಿತಿ ಇದೆ' ಎಂದು ಅವರು ಉಲ್ಲೇಖಿಸಿದ್ದಾರೆ.

‘ಇನ್ನು ಅರಣ್ಯ ಹಾಗೂ ಮಣ್ಣು ರಕ್ಷಣೆಯ ಅಭಿಯಾನ ಮಾಡುವ ಸದ್ಗುರು ಎಂಬ ಹೆಸರಿನ ಈತ ಅದೇ ಭೂಮಿಯನ್ನು ಪಡೆದುಕೊಂಡಿರುವುದು ಹಾಸ್ಯಾಸ್ಪದ ಸಂಗತಿ ಆಗಿದೆ. ಅಂಬೇಡ್ಕರ್ ಹೇಳಿದಂತೆ ಸರಕಾರದ ಜಮೀನು ಆದಷ್ಟು ಸರಕಾರದ ಬಳಿಯೇ ಇದ್ದಾಗ ಮಾತ್ರ ಸರಕಾರವೂ ಸುಭದ್ರವಾಗಿರುತ್ತದೆ ಮತ್ತು ಅದರಿಂದ ಬಡವರಿಗೂ ಸಹಾಯ ಮಾಡಲು ಸಾಧ್ಯವಾಗುತ್ತದೆ' ಎಂದು ಮಹದೇವಪ್ಪ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News