10 ದಿನಗಳಲ್ಲಿ 54 ಗಂಟೆ 14 ನಿಮಿಷ ನಡೆದ ವಿಧಾನಸಭೆ ಕಾರ್ಯಕಲಾಪ: ಸ್ಪೀಕರ್ ಕಾಗೇರಿ

Update: 2022-09-23 16:06 GMT

ಬೆಂಗಳೂರು, ಸೆ.23: ಪ್ರಸಕ್ತ ಅಧಿವೇಶನವು ಸೆ.12 ರಿಂದ 23ರವರೆಗೆ ಒಟ್ಟು 10 ದಿನಗಳ ಕಾಲ ನಡೆದಿದ್ದು, 52 ಗಂಟೆ 14 ನಿಮಿಷಗಳ ಕಾಲ ವಿಧಾನಸಭೆಯ ಕಾರ್ಯಕಲಾಪ ನಡೆಸಲಾಗಿದೆ. 2022-23ನೇ ಸಾಲಿನ ಪೂರಕ ಅಂದಾಜುಗಳ ಮೊದಲನೇ ಕಂತು, ರಾಷ್ಟ್ರಪತಿ/ರಾಜ್ಯಪಾಲರಿಂದ ಒಪ್ಪಿಗೆ ಪಡೆದ ವಿಧೇಯಕಗಳ ಬಗ್ಗೆ ಕಾರ್ಯದರ್ಶಿಯವರ ವರದಿಯನ್ನು ಮಂಡಿಸಲಾಗಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಶುಕ್ರವಾರ ವಿಧಾನಸೌಧದಲ್ಲಿ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಲೆಕ್ಕನಿಯಂತ್ರಕರು ಮತ್ತು ಮಹಾ ಲೆಕ್ಕಪರಿಶೋಧಕರು ನೀಡಿರುವ ವರದಿಗಳು, ವಿಧಾನಮಂಡಲದ ವಿವಿಧ ಸಮಿತಿಗಳ ವರದಿಗಳು, ವಿಧಾನ ಪರಿಷತ್ತಿನಿಂದ ತಿದ್ದುಪಡಿಗಳೊಂದಿಗೆ ಅಂಗೀಕಾರವಾದ ರೂಪದಲ್ಲಿದ್ದ ಒಂದು ವಿಧೇಯಕ ಹಾಗೂ ಧನವಿನಿಯೋಗ ವಿಧೇಯಕವು ಸೇರಿದಂತೆ 16 ವಿಧೇಯಕಗಳನ್ನು ಮಂಡಿಸಲಾಗಿದೆ ಎಂದರು.

ಈ ಪೈಕಿ 14 ವಿಧೇಯಕಗಳನ್ನು ಅಂಗೀಕರಿಸಲಾಗಿದೆ. 2020ನೇ ಸಾಲಿನ ಒಂದು ವಿಧೇಯಕವನ್ನು ಹಿಂಪಡೆಯಲಾಗಿದೆ. ಕನ್ನಡ ಸಮಗ್ರ ಅಭಿವೃದ್ಧಿ ವಿಧೇಯಕ ಮಂಡಿಸಲಾಗಿದೆ, ಅದನ್ನು ಚರ್ಚೆ ಮಾಡಿಲ್ಲ. ನಿಯಮ 60 ರಡಿಯಲ್ಲಿ ನೀಡಿದ್ದ ನಿಲುವಳಿ ಸೂಚನೆಗಳನ್ನು ನಿಯಮ 69ಕ್ಕೆ ಪರಿವರ್ತಿಸಿರುವುದನ್ನು ಸೇರಿಸಿ ಒಟ್ಟು 18 ಸೂಚನೆಗಳನ್ನು ನಿಯಮ 69 ರಡಿಯಲ್ಲಿ ಸ್ವೀಕರಿಸಿದ್ದು, 7 ಸೂಚನೆಗಳನ್ನು ನಿಯಮ 69ರಡಿಯಲ್ಲಿ ಚರ್ಚಿಸಲಾಗಿದೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು. 

ಒಟ್ಟು 2152 ಪ್ರಶ್ನೆಗಳನ್ನು ಸ್ವೀಕರಿಸಲಾಗಿದ್ದು, ಸದನದಲ್ಲಿ ಉತ್ತರಿಸಬೇಕಾಗಿದ್ದ 150 ಪ್ರಶ್ನೆಗಳಿಗೆ ಉತ್ತರಿಸಲಾಗಿದೆ. ಲಿಖಿತ ಮೂಲಕ ಉತ್ತರಿಸುವ 1,650 ಪ್ರಶ್ನೆಗಳ ಉತ್ತರಗಳನ್ನು ಮಂಡಿಸಲಾಗಿದೆ. ನಿಯಮ 351 ರಡಿಯಲ್ಲಿ 180 ಸೂಚನೆಗಳನ್ನು ಅಂಗೀಕರಿಸಿದ್ದು, 102 ಸೂಚನೆಗಳ ಉತ್ತರಗಳನ್ನು ಸ್ವೀಕರಿಸಲಾಗಿದೆ. 92 ಗಮನ ಸೆಳೆಯುವ ಸೂಚನೆಗಳ ಪೈಕಿ 85 ಸೂಚನೆಗಳನ್ನು ಚರ್ಚಿಸಲಾಗಿದೆ, ಶೂನ್ಯ ವೇಳೆಯಲ್ಲಿ ಒಟ್ಟು 27 ಸೂಚನೆಗಳನ್ನು ಚರ್ಚಿಸಲಾಗಿದೆ. 2 ಅರ್ಜಿಗಳನ್ನು ಸದನಕ್ಕೆ ಒಪ್ಪಿಸಲಾಗಿದೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಚರ್ಚೆ ಫಲಪ್ರದ: ಅತಿವೃಷ್ಟಿಗೆ ಸಂಬಂಧಿಸಿದ ಚರ್ಚೆ ಫಲಪ್ರದವಾಗಿತ್ತು. 36 ಸದಸ್ಯರು ಈ ಚರ್ಚೆಯಲ್ಲಿ ನೇರವಾಗಿ ಭಾಗಿ, 12 ಗಂಟೆ 44 ನಿಮಿಷಗಳ ಕಾಲ ಅತಿವೃಷ್ಟಿ ಮೇಲೆ ಚರ್ಚೆ ನಡೆಸಿದ್ದಾರೆ. ಸದನದಲ್ಲಿ ಈ ಬಾರಿ ಶೇ.90ರಷ್ಟು ಹಾಜರಾತಿ ಇತ್ತು ಎಂದು ಅವರು ಹೇಳಿದರು.
ಡಿಸೆಂಬರ್‍ನಲ್ಲಿ ಬೆಳಗಾವಿ ಅಧಿವೇಶನ: ಅತ್ಯುತ್ತಮ ಶಾಸಕ ಆಯ್ಕೆಗೆ ಸಮಿತಿ ಸಭೆ ಮಾಡಲಾಗಿದ್ದು, ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರು, ಕಾನೂನು ಸಚಿವರು ಸಭೆ ಮಾಡಿದ್ದಾರೆ. ಹಲವರ ಹೆಸರುಗಳು ಬಂದಿದ್ದು, ಬೆಳಗಾವಿ ಅಧಿವೇಶನದಲ್ಲಿ ಅತ್ಯುತ್ತಮ ಶಾಸಕರಾಗಿ ಆಯ್ಕೆಯಾದವರಿಗೆ ಸನ್ಮಾನ ಮಾಡಲಾಗುವುದು. ಬೆಳಗಾವಿಯಲ್ಲಿ ಅಧಿವೇಶನದ ಅಂತಿಮ ದಿನಾಂಕ ಸರಕಾರ ನಿರ್ಧರಿಸಲಿದೆ ಎಂದು ಅವರು ಹೇಳಿದರು.

ಡಿಸೆಂಬರ್ ನಲ್ಲಿ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಸಲಾಗುವುದು. ಆನಂತರ ಬೆಂಗಳೂರಿನಲ್ಲಿ ಜಂಟಿ ಅಧಿವೇಶನ ಹಾಗೂ ಬಜೆಟ್ ಅಧಿವೇಶನ ನಡೆಯಲಿದೆ. ಈ ವರ್ಷ ಈವರೆಗೆ 32 ದಿನಗಳ ಕಾಲ ವಿಧಾನಸಭೆ ಅಧಿವೇಶನ ನಡೆದಿದೆ ಎಂದು ಅವರು ಹೇಳಿದರು.

ಸದನದಲ್ಲಿ ಪೋಸ್ಟರ್: ಸದನದಲ್ಲಿ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರು ಪೋಸ್ಟರ್‍ಗಳನ್ನು ಹಿಡಿದು ಪ್ರದರ್ಶನ ಮಾಡಿದ್ದು ಒಂದು ಕಹಿ ಘಟನೆ. ಪ್ರಜಾಪ್ರಭುತ್ವದಲ್ಲಿ ಉದಾರತೆ ಹಾಗೂ ವಿಶಾಲತೆ ಇರುತ್ತದೆ. ನಾನು ಅಸಹಾಯಕನಲ್ಲ, ಆದರೆ ಹೃದಯ ವೈಶಾಲ್ಯತೆ ಹಾಗೂ ಉದಾರತೆಯನ್ನು ತೋರಿಸಿದ್ದೇನೆ. ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಸದಸ್ಯರು ತಮ್ಮ ನಡವಳಿಕೆಯನ್ನು ಸರಿಪಡಿಸಿಕೊಳ್ಳಬೇಕು ಎಂದು ಸ್ಪೀಕರ್ ಸಲಹೆ ನೀಡಿದರು.

ಈಶ್ವರಪ್ಪ-ಜಾರಕಿಹೊಳಿ ಅಧಿವೇಶನಕ್ಕೆ ಗೈರು: ಸಚಿವರು, ಶಾಸಕರು ಅಧಿವೇಶನಕ್ಕೆ ಗೈರು ಹಾಜರಾಗುವುದಾದರೆ ಸದನದ ಅನುಮತಿ ಪಡೆಯುವುದು ಸಂಪ್ರದಾಯ. ಆದರೆ, 10 ದಿನಗಳ ಕಾಲ ನಡೆದ ಈ ಅಧಿವೇಶನದಲ್ಲಿ ಮಾಜಿ ಸಚಿವರಾದ ಕೆ.ಎಸ್.ಈಶ್ವರಪ್ಪ ಹಾಗೂ ರಮೇಶ್ ಜಾರಕಿಹೊಳಿ ಸದನದ ಅನುಮತಿ ಪಡೆಯದೆ ಗೈರು ಹಾಜರಾಗಿದ್ದರು. ಉಪ ಸಭಾಧ್ಯಕ್ಷ ಆನಂದ ಮಾಮನಿ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಗೈರು ಹಾಜರಾಗಿದ್ದರು.

ಇದನ್ನೂ ಓದಿ: ಬೆಂಗಳೂರು | 5 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ: ಯೋಗ ಗುರುವಿಗೆ 5 ವರ್ಷ ಜೈಲು ಶಿಕ್ಷೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News