4 ವಿಧೇಯಕ ಅಂಗೀಕರಿಸಿ ಮೇಲ್ಮನೆ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

Update: 2022-09-23 18:08 GMT

ಬೆಂಗಳೂರು, ಸೆ.23: ವಿಧಾನಸಭೆಯಲ್ಲಿ ಅಂಗೀಕೃತವಾದ ಕರ್ನಾಟಕ ಭೂ ಕಬಳಿಕೆ ನಿಷೇಧ ತಿದ್ದುಪಡಿ ವಿಧೇಯಕ ಸೇರಿದಂತೆ ನಾಲ್ಕು ವಿಧೇಯಕಗಳನ್ನು ಧ್ವನಿ ಮತದ ಮೂಲಕ ಅಂಗೀಕರಿಸಿ ಕಲಾಪವನ್ನು ವಿಧಾನ ಪರಿಷತ್ತಿನ ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ ಅನಿರ್ದಿಷ್ಟಾವಧಿಗೆ ಮುಂದೂಡಿದರು.

ಶುಕ್ರವಾರ ಮೇಲ್ಮನೆಯಲ್ಲಿ ಅನ್ವರ್ ಮಾಣಿಪ್ಪಾಡಿ ವರದಿ ಮತ್ತು ಬಿಎಂಎಸ್ ಟ್ರಸ್ಟ್ ವಿಷಯ ಕುರಿತು ಚರ್ಚೆಗೆ ಅವಕಾಶ ಕೊಡದ ಸಭಾಪತಿ ನಿರ್ಧಾರ ಖಂಡಿಸಿ ಸದನದಲ್ಲಿ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರ ಪ್ರತಿಭಟನೆ ನಡೆಸುತ್ತಿರುವಾಗಲೇ ನಾಲ್ಕು ವಿಧೇಯಕಗಳನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು.
  
ಶೂನ್ಯವೇಳೆ ಬಳಿಕ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಪ್ರಸ್ತಾಪಿಸಿ ಈವರದಿ ಕುರಿತು ನಿಯಮ 59ರ ಅಡಿ ಚರ್ಚೆಗೆ ಅವಕಾಶ ನಿಲುವಳಿ ಸೂಚನೆ ಮಂಡಿಸಿದರು. ಈ ಸಂದರ್ಭದಲ್ಲಿ ಸಭಾಪತಿ ರಘುನಾಥ ರಾವ್ ಮಲ್ಕಾಪುರೆ ಅವರು, ಅನ್ವರ್ ಮಾಣಿಪ್ಪಾಡಿ ವರದಿ ಸ್ಥಾಯಿ ಸಮಿತಿ ನೀಡಿದ ವರದಿಯಲ್ಲ. ಅಲ್ಪಸಂಖ್ಯಾತ ಆಯೋಗದ ಕಾಯ್ದೆಯಂತೆ ಮಂಡಿಸಿದ್ದಾರೆ. ಇದು ಇತ್ತೀಚೆಗೆ ನಡೆದ ಘಟನೆಯಲ್ಲ. ಹಾಗಾಗಿ ನಿಯಮ 59 ರ ನಿಲುವಳಿ ಸೂಚನೆ ತಿರಸ್ಕರಿಸಿದ್ದೇನೆ ಎಂದು ಆದೇಶಿಸಿದರು.

ಇದರಿಂದಾಗಿ ಪ್ರತಿಪಕ್ಷದ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ, ಭಿತ್ತಿ ಪತ್ರಗಳನ್ನು ಹಿಡಿದು, ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. 

ಈ ನಡುವೆಯೇ ಶಾಸನ ರಚನೆ ಕಲಾಪ ಆರಂಭಿಸಲಾಯಿತು. ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ತಮ್ಮ ಬೇಡಿಕೆಗಳ ಚರ್ಚೆಗೆ ಅವಕಾಶ ನೀಡದೆ ಶಾಸನ ರಚನೆ ಕಲಾಪ ಕೈಗೆತ್ತಿಕೊಂಡಿದ್ದನ್ನು ವಿರೋಧಿಸಿ ಸದನದ ಬಾವಿಗಿಳಿದು ಧರಣಿ ನಡೆಸಿದರು.

ಗದ್ದಲ, ನಡುವೆಯೂ ವಿಧಾನಸಭೆಯಲ್ಲಿ ಅಂಗೀಕತವಾಗಿದ್ದ ಕರ್ನಾಟಕ ಭೂ ಕಬಳಿಕೆ ನಿಷೇಧ ತಿದ್ದುಪಡಿ ವಿಧೇಯಕ, ಕರ್ನಾಟಕ ಸ್ಟಾಂಪು ಮೂರನೇ ತಿದ್ದುಪಡಿ ವಿಧೇಯಕ, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತಿದ್ದುಪಡಿ ವಿಧೇಯಕ, ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು(ಶಿಕ್ಷಕರ ವರ್ಗಾವಣೆ ನಿಯಂತ್ರಣ) ತಿದ್ದುಪಡಿ ವಿಧೇಯಕಗಳನ್ನು ಧ್ವನಿಮತದ ಮೂಲಕ ವಿಧಾನ ಪರಿಷತ್ ಅಂಗೀಕರಿಸಿದ್ದು, ಆಡಳಿತ ಪಕ್ಷದ ಸದಸ್ಯರು ಮೇಜುಕುಟ್ಟಿ ಸ್ವಾಗತ ಮಾಡಿದರು. 

ಸದನದಲ್ಲಿ ಗದ್ದಲ ಹೆಚ್ಚಾದ ನಡುವೆಯೇ ಸಭಾಪತಿಗಳು 10 ದಿನಗಳ ಕಲಾಪದ ಸಾರಾಂಶವನ್ನು ಸದನದಲ್ಲಿ ಮಂಡಿಸಿದರು. ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು. ನಂತರ ಕಲಾಪವನ್ನು ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ ಅನಿರ್ದಿಷ್ಟಾವಧಿಗೆ ಮುಂದೂಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News