'PAYCM ಅಭಿಯಾನ' ಕಾಂಗ್ರೆಸ್ ನ ಡರ್ಟಿ ಪಾಲಿಟಿಕ್ಸ್: ಸಿಎಂ ಬೊಮ್ಮಾಯಿ

Update: 2022-09-24 08:51 GMT

ಚಿತ್ರದುರ್ಗ, ಸೆ.25: ಪೇಸಿಎಂ ಅಭಿಯಾನ ಮಾಡುತ್ತಿರುವ ಕಾಂಗ್ರೆಸ್ಸಿನದ್ದು ಡರ್ಟಿ ಪಾಲಿಟಿಕ್ಸ್ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅವರು ಇಂದು ಚಿತ್ರದುರ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.

ಯಾವುದಾದರೂ ವಿಚಾರವಿದ್ದರೆ, ನೇರವಾಗಿ ಮಾತಾಡಬೇಕು, ದಾಖಲೆ ನೀಡಬೇಕು ಹಾಗೂ ತನಿಖೆಯಾಗಬೇಕು. ಯಾವುದೇ ವಿಚಾರವಿಲ್ಲದೆ, ಪೂರ್ಣ ಪ್ರಮಾಣದ ತಯಾರಿ ಇಲ್ಲದೆ ಸದನಕ್ಕೆ ಬರುತ್ತಾರೆ. ಇದು ಅವರ ನೈತಿಕತೆಯ ಅಧಃಪತನ ತೋರುತ್ತದೆ. ನೈತಿಕತೆ ಇಲ್ಲದೆ ಹೆಸರು ಕೆಡಿಸುವ ಕಾರ್ಯ ಇದು ಎಂದು ಆಪಾದಿಸಿದರು.

ಜನಪರ ಕಾಳಜಿ ಇಲ್ಲದೆ ಡರ್ಟಿ ಪಾಲಿಟಿಕ್ಸ್ ಮಾಡಿಕೊಂಡು ಅಧಿಕಾರಕ್ಕೆ ಬರುವ ಭ್ರಮೆಯಲ್ಲಿದ್ದಾರೆ. ಇದೆಲ್ಲಾ ಕರ್ನಾಟಕದಲ್ಲಿ ಸಾಧ್ಯವಿಲ್ಲ. ಸರಕಾರ ಕಾನೂನು ಕ್ರಮ ತೆಗೆದುಕೊಳ್ಳುತ್ತದೆ ಎಂದರು.

ಲಿಂಗಾಯತ ಸಮುದಾಯದ ಮುಖ್ಯಮಂತ್ರಿಯನ್ನು ಗುರಿಯಾಗಿಸಲಾಗಿದೆ ಎಂದು ಸಚಿವ ಡಾ:ಕೆ.ಸುಧಾಕರ್ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿ, ನಾನು ಅದರ ಭಾಗವಲ್ಲ. ಹಾಗಾಗಿ ಏನೋ ಹೇಳುವುದಿಲ್ಲ ಎಂದರು.

ಬಿಜೆಪಿ ಮತ್ತೆ ಅಧಿಕಾರಕ್ಕೆ

ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಬಿಜೆಪಿಗೆ 95ರಿಂದ 100 ಸ್ಥಾನಗಳು ಲಭಿಸಬಹುದು ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿ ಎಲ್ಲಾ ಸಮೀಕ್ಷೆಗಳು ಒಂದೊಂದು ರೀತಿಯಲ್ಲಿ ಬರುತ್ತವೆ. ಅದಕ್ಕಿಂತ ಜನರ ನಾಡಿ ಮಿಡಿತ ನಮಗೆ ಗೊತ್ತಿದೆ. ನಾವೂ 30-35 ವರ್ಷಗಳ ಕಾಲ ರಾಜಕಾರಣದಲ್ಲಿದ್ದೇವೆ. ಈ ಬಾರಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಚಿವ ಸಂಪುಟ ವಿಸ್ತರಣೆ ಬಗ್ಗೆ ವರಿಷ್ಠರು ತಿಳಿಸಿದಾಗ ಚರ್ಚೆ ಮಾಡಿ ನಿರ್ಧಾರಕ್ಕೆ ಬರಲಾಗುವುದು ಎಂದರು.

ಪಿ.ಎಫ್.ಐ. ಬೆಳವಣಿಗೆಗಳ ಬಗ್ಗೆ ಎನ್.ಎ.ಐ. ಹಾಗೂ ರಾಜ್ಯ ಪೊಲೀಸ್ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಮಂಗಳೂರು: ಮೂವರು ಕಾಲೇಜು ವಿದ್ಯಾರ್ಥಿನಿಯರ ನಾಪತ್ತೆ ಪ್ರಕರಣ ಸುಖಾಂತ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News