ಬಿಎಸ್‍ವೈ ಸಿಎಂ ಆಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಾಗಲಿಲ್ಲ: ಬಿ.ವೈ.ವಿಜಯೇಂದ್ರ

Update: 2022-09-24 14:36 GMT

ಬೆಂಗಳೂರು, ಸೆ. 24: ‘ನಮ್ಮ ವಿರುದ್ಧದ ಆರೋಪಗಳಿಂದ ಹೆದರಿ ಓಡಿ ಹೋಗುವ ಪ್ರಶ್ನೆಯೇ ಇಲ್ಲ.30 ಕೇಸ್‍ಗಳನ್ನು ಈಗಾಗಲೇ ಎದುರಿಸಿದ್ದೇವೆ, ಇದು 31ನೆ ಪ್ರಕರಣ ಅಷ್ಟೇ . ಬಿಎಸ್‍ವೈ ಅವರು ಸಿಎಂ ಆಗುವುದನ್ನು ತಪ್ಪಿಸಲು ಏನೆಲ್ಲ ಪ್ರಯತ್ನ ಮಾಡಿದರೂ ಯಾರಿಂದಲೂ ಅದನ್ನು ತಡೆಯಲು ಸಾಧ್ಯವಾಗಲಿಲ್ಲ.ವಿರೋಧಿಗಳು ಏನೇ ಷಡ್ಯಂತ್ರ ಮಾಡಿದರೂ ಯಶಸ್ವಿ ಆಗುವುದಿಲ್ಲ' ಎಂದು ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.

ಶನಿವಾರ ಬಿಜೆಪಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,  ‘ನಮ್ಮ ವಿರುದ್ಧ ಎಷ್ಟೇ ಪ್ರಕರಣಗಳನ್ನು ದಾಖಲಿಸಿದರೂ ಎದುರಿಸುತ್ತೇವೆ. ಯಾವುದೇ ಕಾರಣಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ. ಈ ಸವಾಲುಗಳನ್ನು ಸಂತೋಷದಿಂದ ಸ್ವೀಕರಿಸಿದ್ದು, ಇಂತಹ ಸವಾಲುಗಳು ಎದುರಾದರೆ ನಾವು ಬೆಳೆಯುವುದು ಸುಲಭ' ಎಂದು  ವಿಜಯೇಂದ್ರ ವಾಗ್ದಾಳಿ ನಡೆಸಿದರು. 

‘ವಿಜಯೇಂದ್ರ ರಾಜಕೀಯವಾಗಿ ಬೆಳೆಯಬಾರದು ಎಂದು ಕುತಂತ್ರ ಹೆಣೆಯಲಾಗಿದೆ. ಇದಕ್ಕೆ ತಕ್ಕ ಉತ್ತರವನ್ನು ಎಲ್ಲಿ ಕೊಡಬೇಕು, ಯಾರಿಗೆ ಕೊಡಬೇಕು ಎಂದು ಗೊತ್ತಿದೆ.ತಮ್ಮ ವಿರುದ್ಧದ ಬಿಡಿಎ ವಸತಿ ಅಕ್ರಮ ಆರೋಪದ ಬಗ್ಗೆ ತನಿಖೆ ಆಗಿದ್ದು, ಎಸಿಬಿಯಲ್ಲಿ ಅಬ್ರಹಾಂ ದೂರು ಕೊಟ್ಟಿದ್ದರು. ರಾಜ್ಯಪಾಲರಿಗೆ ಅನುಮತಿ ನಿರಾಕರಿಸಿದ್ದರು. ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ' ಎಂದು ಅಲ್ಲಗಳೆದರು.

‘ಪಂಚಮಸಾಲಿ ಸಮುದಾಯವನ್ನು ದಿಕ್ಕು ತಪ್ಪಿಸುವ ಯತ್ನ ನಡೆಯುತ್ತಿದೆ. ಸಮಾಜ ಒಡೆಯುವ ಕೆಲಸವನ್ನು ರಾಜಕೀಯ ವಿರೋಧಿಗಳು ಮಾಡುತ್ತಿದ್ದಾರೆ. ಪದೇ ಪದೆ ಆ ತರದ ಹೇಳಿಕೆಗಳನ್ನು ನೀಡುವ ಮೂಲಕ ಬಸನಗೌಡ ಪಾಟೀಲ್ ಯತ್ನಾಳ್ ಪಕ್ಷಕ್ಕೂ ಹಾನಿ ಮಾಡುತ್ತಿದ್ದಾರೆ ಎಂದು ಟೀಕಿಸಿದ ಅವರು, ಬಿಎಸ್‍ವೈ ಅವರು ಅಧಿಕಾರದಲ್ಲಿದ್ದ ವೇಳೆ ಎಲ್ಲ ಮಠ, ಜಾತಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಅವರು ವಿರೋಧ ಮಾಡುವುದಕ್ಕೆ ಸಾಧ್ಯವಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ದಸರಾದಲ್ಲಿ ರಾಷ್ಟ್ರಪತಿ ಜೊತೆ ಸಚಿವ ಸೋಮಶೇಖರ್ ವೇದಿಕೆ ಹಂಚಿಕೊಳ್ಳುವುದಕ್ಕೆ ವಿರೋಧ: ರಾಜ್ಯಪಾಲರಿಗೆ ಆಪ್ ಮನವಿ

ಮೊಕದ್ದಮೆ: ‘ಬಿಎಸ್‍ವೈ ಅವರು ಬಿಡಿಎಯಲ್ಲಿ ಯಾವ ಕಂಪೆನಿಗೂ ಗುತ್ತಿಗೆ ನೀಡಿಲ್ಲ. ಆ ಕಂಪೆನಿಯಿಂದ ಕೋಲ್ಕತ್ತಾ ಮೂಲದ ಐದು ಕಂಪೆನಿಗಳಿಗೆ 7.5 ಕೋಟಿ ರೂ.ಹಣ ಸಂದಾಯವಾಗಿದೆ ಎಂಬ ಆರೋಪವನ್ನು ಮಾಡಿದ್ದಾರೆ. ಒಂದು ರೂಪಾಯಿ ಹಣವೂ ಸಂದಾಯ ಆಗಿಲ್ಲ. ಇದೆಲ್ಲದರ ಬಗ್ಗೆ ನಾವು ಮಾನನಷ್ಟ ಮೊಕದ್ದಮೆ ಹೂಡಿದ್ದೆವೆ' ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News