ಬ್ಯಾಂಕ್‍ಗಳಿಂದ ರೈತರ ಆಸ್ತಿ ಜಪ್ತಿಗೆ ನಿಷೇಧ: ಸಿಎಂ ಬಸವರಾಜ ಬೊಮ್ಮಾಯಿ

Update: 2022-09-24 13:57 GMT

ಬೆಂಗಳೂರು/ಚಿತ್ರದುರ್ಗ, ಸೆ. 25:‘ರೈತರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಬ್ಯಾಂಕ್‍ಗಳು ಅವರ ಆಸ್ತಿ ಜಪ್ತಿ, ನೋಟೀಸ್ ಜಾರಿ ಮಾಡುವ ಕೆಲಸ ಮಾಡುತ್ತಿದ್ದು, ಇದಕ್ಕೆ ಅಂತ್ಯ ಹಾಡಲು ಕಾನೂನಿನ ತಿದ್ದುಪಡಿ ತಂದು ರೈತರ ಆಸ್ತಿ ಜಪ್ತಿ ಮಾಡುವುದನ್ನು ಸಂಪೂರ್ಣ ನಿಷೇಧ ಮಾಡುವುದು' ಎಂದು  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು  ಘೋಷಿಸಿದ್ದಾರೆ.

ಶನಿವಾರ ಇಲ್ಲಿನ ಸಿರಿಗೆರೆಯ ಶ್ರೀ ತರಳಬಾಳು ಬೃಹನ್ಮಠ ಆಯೋಜಿಸಿದ್ದ ಶ್ರೀ ತರಳಬಾಳು ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳ 30ನೆ ಶ್ರದ್ಧಾಂಜಲಿ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ರೈತರ ಆಸ್ತಿ ಜಪ್ತಿ ನಿಷೇಧ ಕಾನೂನು ಜಾರಿ ಮಾಡುವ ಮೂಲಕ ರೈತರಿಗೆ ಸಾಲ ತೀರಿಸುವ ಅವಕಾಶಗಳನ್ನು ಮಾಡಿಕೊಡಲಾಗುವುದು' ಎಂದು ಭರವಸೆ ನೀಡಿದರು. 

‘ಬದ್ಧತೆಯಿಂದ ಕೆಲಸ ಮಾಡುವ ಕ್ರಿಯಾಶಕ್ತಿಯೇ ಭಕ್ತಿಯ ಶಕ್ತಿ. ಗುರುಗಳಿಂದ ಪ್ರೇರಣೆ ಪಡೆದು ಹಲವಾರು ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ನಮ್ಮ ಸರಕಾರ ಪ್ರಯತ್ನ ಮಾಡಲಾಗುತ್ತಿದೆ. ನಾನು ಸಿಎಂ ಆದ ವೇಳೆ‘ರೈತರ ಮಕ್ಕಳಿಗೆ ವಿದ್ಯಾನಿಧಿ' ಯೋಜನೆ ರೂಪಿಸಲಾಯಿತು. 14ಲಕ್ಷ ರೈತರ ಮಕ್ಕಳಿಗೆ ವಿದ್ಯಾನಿಧಿ ನೀಡಲಾಗಿದೆ. ರೈತ ಕೂಲಿಕಾರ ಮಕ್ಕಳಗೆ, ನೇಕಾರರಿಗೆ, ಮೀನುಗಾರರಿಗೆ, ರಿಕ್ಷಾ ಹಾಗೂ ಟ್ಯಾಕ್ಸಿ ಚಾಲಕರಿಗೆ ಯೋಜನೆ ವಿಸ್ತರಣೆಯಾಗಿದೆ' ಎಂದರು.

‘ನೀರಾವರಿ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಸರಕಾರ ರೂಪಿಸಿದೆ. 3 ಲಕ್ಷ ರೂ.ವರೆಗೆ ಬಡ್ಡಿರಹಿತ ಸಾಲ ನೀಡಿದರೂ ಅತಿವೃಷ್ಟಿ, ಅನಾವೃಷ್ಟಿ ಕಾರಣದಿಂದ ರೈತರು ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಈ ವರ್ಷ ಉತ್ತಮ ಮಳೆಯಾಗಿದೆ. ಕೆರೆ ಕಟ್ಟೆ ತುಂಬಿ ನೀರು ಇನ್ನು 2-3 ವರ್ಷಗಳಿಗೆ ತೊಂದರೆ ಇಲ್ಲ. ಕೆಲವೆಡೆ ಪ್ರವಾಹವಾಗಿ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅವರು ತಿಳಿಸಿದರು. 

ರಾಷ್ಟ್ರೀಯ ಯೋಜನೆ: ‘ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡುವ ಅಂತಿಮ ಘಟ್ಟದಲ್ಲಿದೆ. ಕೇಂದ್ರ ಸಚಿವ ಸಂಪುಟದಲ್ಲಿ ಅದರ ಅನುಮೋದನೆ ದೊರೆತ ಕೂಡಲೇ 14ಸಾವಿರ ಕೋಟಿ ರೂ.ನೆರವು ನಮಗೆ ಬರಲಿದೆ. ಇದನ್ನು ಪೂರ್ಣ ಮಾಡಲು ಹಣಕಾಸಿನ ಶಕ್ತಿ ದೊರೆಯುತ್ತದೆ' ಎಂದು ಅವರು ತಿಳಿಸಿದರು. 

ಮನಸ್ಸಿನ ಶುದ್ದೀಕರಣ: ‘ಪ್ರತಿ ವರ್ಷ ಹಿರಿಯ ಗುರುಗಳನ್ನು ಸ್ಮರಣೆ ಮಾಡುವ ದಿನದಂದು ಬಂದು ಹೋಗುವಾಗ ಆಗುವ ಅನುಭವ ನಮ್ಮ ಚಿಂತನೆ, ವಿಚಾರ, ಮನಸ್ಸಿನ ಭಾವನೆಗಳನ್ನು ಶುದ್ದೀಕರಣ ಮಾಡಿಕೊಳ್ಳುವ ಸಂದರ್ಭ ಎಂದು  ಭಾವಿಸಿದ್ದೇನೆ. ಮನಸ್ಸಿನ ಸರ್ವೀಸ್ ಮಾಡಲು ಇಲ್ಲಿಗೆ ಬರಬೇಕು. ಅಗತ್ಯವಿಲ್ಲದ ವಿಚಾರಗಳನ್ನು ತೊಳೆದು ಮತ್ತೆ ಸ್ವಚ್ಛ ಮನಸ್ಸಿನಿಂದ ಹೋಗುವ ಪ್ರಕ್ರಿಯೆ' ಎಂದು ಅವರು ನುಡಿದರು.

‘ಬದಲಾದ ಕಾಲಕ್ಕೆ, ಸಮಾಜ, ಭಕ್ತಾದಿಗಳಿಗೆ, ನ್ಯಾಯ ಒದಗಿಸುವ ಗುರುತರ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ. ಭಕ್ತಾದಿಗಳು ರೈತಾಪಿ ವರ್ಗ ಎಂದು ಮನಗಂಡು ಅವರ ದುಡಿಮೆಗೆ ಗೌರವ, ಬೆಲೆ ಬರಬೇಕೆಂದು ರೈತರ ಬೆವರಿಗೆ ಬೆಲೆ ಬರುವಂಥ ಕೆಲಸ ಮಾಡುತ್ತಿದ್ದಾರೆ. ಮಧ್ಯ ಕರ್ನಾಟಕದಲ್ಲಿ ನೀರಿನಿಂದ ವಂಚಿತವಾಗಿದೆ. ಕೆರೆಗಳು ತುಂಬದೆ, ನೀರಾವರಿ ಇಲ್ಲದಿದ್ದರೂ ಫಲವತ್ತಾದ ಜಮೀನಿದೆ ಎನ್ನುವುದನ್ನು ಮನಗಂಡು ಸುಮಾರು 25 ವರ್ಷಗಳಿಂದ ಕೆರೆಗಳಿಗೆ ನೀರು, ನೀರಾವರಿ  ಯೋಜನೆಗಳಿಗೆ ಮಹತ್ವ ನೀಡಲು ಗುರುಗಳು ಪ್ರಾರಂಭಿಸಿದರು' ಎಂದು ಅವರು ಸ್ಮರಿಸಿದರು.

ಈ ಸಂದರ್ಭದಲ್ಲಿ ತರಳಬಾಳು ಮಠದ ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಸಂಸದ ಜಿ.ಎಂ.ಸಿದ್ದೇಶ್ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಭಕ್ತಾದಿಗಳು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News