ಭಾರತ ದೇಶವನ್ನು ಜಗತ್ತಿನ ಶ್ರೀಮಂತ ದೇಶ ಮಾಡುವುದು ಪ್ರಧಾನಿ ಮೋದಿ ಕನಸು: ಕೇಂದ್ರ ಸಚಿವೆ ಶೋಭಾ

Update: 2022-09-24 17:10 GMT

ಚಿಕ್ಕಮಗಳೂರು, ಸೆ.24: ಧ್ವನಿ ಇಲ್ಲದ ಸಣ್ಣ ಸಮುದಾಯಗಳನ್ನು ಗುರುತಿಸಿ, ಧ್ವನಿ ನೀಡುವಂತಹ ಕೆಲಸ ಮಾಡಿದ ಪಕ್ಷ ಭಾರತೀಯ ಜನತಾ ಪಾರ್ಟಿ ಎಂದು ಕೇಂದ್ರ ಕೃಷಿ ಹಾಗೂ ರಾಜ್ಯ ರೈತ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಶನಿವಾರ ನಗರದ ಕುವೆಂಪು ಕಲಾಮಂದಿರದಲ್ಲಿ ನಗರ ಮತ್ತು ಗ್ರಾಮಾಂತರ ಬಿಜೆಪಿ ಹಿಂದುಳಿದ ವರ್ಗಗಳ ಮಂಡಳದ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದ ಜನಸಂಖ್ಯೆಯಲ್ಲಿ ಹಿಂದುಳಿದ ಸಮುದಾಯ ಶೇ.55ರಷ್ಟಿದ್ದು, ಸ್ವಾತಂತ್ರ್ಯ ಬಂದ ಬಳಿಕ ದೇಶದ ನೇತೃತ್ವ ವಹಿಸಿದ ಹಿಂದಿನ ಸರಕಾರಗಳು ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಆದ್ಯತೆ ನೀಡದೆ ಕಡೆಗಣಿಸಿವೆ. ಆದರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಧಿಕಾರ ವಹಿಸಿಕೊಂಡ ಬಳಿಕ ಹಿಂದುಳಿದ ವರ್ಗಗಳ ಏಳಿಗೆಗೆ ಶ್ರಮಿಸುತ್ತಿದ್ದಾರೆ ಎಂದರು.

ಹಿಂದುಳಿದ ವರ್ಗದಿಂದ ಬಂದ ನರೇಂದ್ರ ಮೋದಿ ಅವರು ಭಾರತ ದೇಶವನ್ನು ಇಡೀ ಪ್ರಪಂಚವೇ ತಿರುಗಿ ನೋಡುವಂತೆ ಮಾಡಿದರು. ಪ್ರತೀ ಸಮುದಾಯವನ್ನು ಗೌರವಿಸುವ ನಿಟ್ಟಿನಲ್ಲಿ ಸಾಮಾನ್ಯ ಕಾರ್ಯಕರ್ತರನ್ನು ಸಂಸದರು ಮಂತ್ರಿಗಳನ್ನಾಗಿ ಮಾಡಿದ್ದಾರೆ. ತುಳಿತಕ್ಕೆ ಒಳಗಾದ ಸಮುದಾಯಕ್ಕೆ ಧ್ವನಿ ನೀಡುವ ಕೆಲಸ ಮಾಡಿದ್ದಾರೆ. ಜಮ್ಮುಕಾಶ್ಮೀರದ ವಿಶೇಷ ಪ್ರಾತಿನಿದ್ಯ ತೆರವು, ರಾಮಂದಿರ ನಿರ್ಮಾಣ, ಸಿಎಎ ಹೋರಾಟದಂತಹ ಸಮಸ್ಯೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಪರಿಹಾರ ರೂಪಿಸಿದರು. ಪ್ರಧಾನಿ ಮೋದಿ ಯಾರ ಕೈಗೊಂಬೆಯಾಗಿಲ್ಲ. ರಬ್ಬರ್ ಸ್ಟ್ಯಾಂಪ್ ಆಗಿಲ್ಲ ಎಂದರು.

ಹಿಂದಿನ ಯಾವ ಸರಕಾರಗಳು ದೇಶದ ಭದ್ರತೆಗೆ ಆದ್ಯತೆ ನೀಡಿರಲಿಲ್ಲ. ಬಾಂಗ್ಲಾ ನುಸುಳುಕೋರರು ಇಡೀ ದೇಶಾದ್ಯಂತ ವ್ಯಾಪಿಸಿ ವಿಧ್ವಂಸಕ ಕೃತ್ಯಗಳನ್ನು ನಡೆಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಕೇಂದ್ರ ಸರಕಾರ ಪಾಕಿಸ್ತಾನ, ನೇಪಾಳ, ಬೂತನ್, ಬಾಂಗ್ಲ, ಚೀನಾ ದೇಶಗಳ ಗಡಿಗಳನ್ನು ಭದ್ರಪಡಿಸುವ ಕೆಲಸವನ್ನು ಮಾಡಿದ್ದಾರೆ ಎಂದ ಅವರು, ದೇಶದ ಸೈನ್ಯವನ್ನು ಸ್ವಾವಲಂಭಿಗೊಳಿಸಲಾಗಿದೆ. ಸ್ವಾತಂತ್ರೋತ್ಸವದ 100ನೇ ವರ್ಷಕ್ಕೆ ಭಾರತ ದೇಶ ಪ್ರಪಂಚದ ಶ್ರೀಮಂತ ರಾಷ್ಟ್ರಗಳ ಪಟ್ಟಿಯಲ್ಲಿ 1ರಿಂದ 3ನೇ ಸ್ಥಾನದಲ್ಲಿರಬೇಕೆಂಬುದು ನರೇಂದ್ರ ಮೋದಿ ಅವರು ಸಂಕಲ್ಪ ಮಾಡಿದ್ದಾರೆ ಎಂದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ಮಾತನಾಡಿ, ಮತಬ್ಯಾಂಕ್‍ಗಾಗಿ ಬಿಜೆಪಿ ಪಕ್ಷ ಜಾತಿ ಜಾತಿಗಳನ್ನು ಒಡೆಯುವ ಕೆಲಸ ಮಾಡಲಿಲ್ಲ. ಜಾತಿ ಜಾತಿಗಳನ್ನು ಒಗ್ಗೂಡಿಸುವ ಕೆಲಸ ಮಾಡಿದ್ದೇವೆ. ಕೆಲವು ರಾಜಕೀಯ ಪಕ್ಷಗಳಿಗೆ ಜಾತಿ, ಧರ್ಮಗಳನ್ನು ಒಡೆದಾಡಿ ಅಧಿಕಾರ ಹಿಡಿಯುವುದೇ ಕೆಲಸವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರಕಾರ ಎಲ್ಲಾ ಸಮುದಾಯಗಳನ್ನು ಒಗ್ಗೂಡಿಸಿ ಆ ಸಮುದಾಯಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದಾರೆ. ಪಕ್ಷಕ್ಕಾಗಿ ಯಾರು ಹೆಚ್ಚು ಶ್ರಮಿಸಿದ್ದಾರೋ ಅಂತವರಿಗೆ ಬಿಜೆಪಿ ಪಕ್ಷದಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು.

ಹಿಂದುಳಿದ ವರ್ಗಗಳ ಮೋರ್ಚಾ ರಾಷ್ಟ್ರೀಯ ಉಪಾಧ್ಯಕ್ಷ ಯಶಪಾಲ್ ಸುವರ್ಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾಂಗ್ರೆಸ್ ಪಕ್ಷ ಹಿಂದುಳಿದ ಸಮುದಾಯಗಳನ್ನು ಓಟ್‍ಬ್ಯಾಂಕ್ ಮಾಡಿಕೊಂಡಿತ್ತು. ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಈ ಸಮುದಾಯಗಳಿಗೆ ಶಕ್ತಿ ತುಂಬುವ ಕೆಲಸ ವನ್ನು ಮಾಡಲಾಗುತ್ತಿದೆ ಎಂದರು. 

ರಾಜ್ಯ ಹಿಂದುಳಿದ ವರ್ಗ ಮಂಡಲದ ಉಪಾಧ್ಯಕ್ಷ ಅಶೋಕ್ ಮೂರ್ತಿ, ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಸಿ.ಕಲ್ಮುರಡಪ್ಪ, ಜಿಲ್ಲಾಧ್ಯಕ್ಷ ವೆನಿಲಾ ಭಾಸ್ಕರ, ರವೀಂದ್ರ ಬೆಳವಾಡಿ, ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಮಂಜುನಾಥ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಪಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ಪಿ.ವೆಂಕಟೇಶ್, ಮಧುಕುಮಾರ್ ರಾಜ್ ಅರಸ್, ಕನಕರಾಜ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ.ಆನಂದ್, ಸಿ.ಆರ್.ಪ್ರೇಮ್‍ಕುಮಾರ್, ದೇವರಾಜ್ ಶೆಟ್ಟಿ, ಪುಷ್ಪರಾಜ್, ಜಗದೀಶ್, ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾಶೆಟ್ಟಿ, ಬಿ.ಸಿ.ಸುಜಾತ ಶಿವಕುಮಾರ್, ಎ.ಟಿ.ರೂಪಕುಮಾರ್ ಅನುಮಧುಕುಮಾರ್ ಸೇರಿದಂತೆ ಅನೇಕರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News