ಮೈಸೂರು ದಸರಾ | ಬುಡಕಟ್ಟು ಜನರ ಭೇಟಿ, ಫೋಟೊಸೆಷನ್‌ಗೆ ದ್ರೌ‍ಪದಿ ಮುರ್ಮು ಸಮ್ಮತಿ: ಸಚಿವ ಸೋಮಶೇಖರ್

Update: 2022-09-25 08:20 GMT

ಮೈಸೂರು, ಸೆ. 25, ದಸರಾ ಮಹೋತ್ಸವದ ಉದ್ಘಾಟನೆ ಹಾಗೂ ರಾಷ್ಟ್ರಪತಿಯವರ ಆಗಮನದ ಹಿನ್ನೆಲೆಯಲ್ಲಿ ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಇಂದು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ಪೂರ್ವಸಿದ್ಧತೆ ಪರಿಶೀಲಿಸಿದರು.

ವೇದಿಕೆ ಸಿದ್ಧತೆ, ಗಣ್ಯರು, ಅಧಿಕಾರಿಗಳು, ಸಾರ್ವಜನಿಕರಿಗೆ ಆಸನದ ವ್ಯವಸ್ಥೆ, ಭದ್ರತಾ ವ್ಯವಸ್ಥೆ ಸೇರಿದಂತೆ ಎಲ್ಲಾ ರೀತಿಯ ಸಿದ್ಧತೆಗಳ ಪರಿಶೀಲನೆ ನಡೆಸಿದರು. ಜಿಲ್ಲಾಧಿಕಾರಿಗಳು ಕಾರ್ಯಕ್ರಮದ ಸಂಪೂರ್ಣ ಮಾಹಿತಿ ನೀಡಿದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ದಸರಾದ ಎಲ್ಲಾ ಸಿದ್ಧತೆ ಅಂತಿಮವಾಗಿದೆ. ರಾಷ್ಟ್ರಪತಿ ಕಚೇರಿಯಿಂದ ಬಂದ ಸೂಚನೆಯಂತೆ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮ ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ. ಸಾವಿರಕ್ಕೂ ಅಧಿಕ ಮಂದಿ ಕಾರ್ಯಕ್ರಮ ವೀಕ್ಷಿಸಬಹುದಾಗಿದೆ ಎಂದರು.

ವೇದಿಕೆ ಮೇಲೆ ರಾಷ್ಟ್ರಪತಿಗಳು ಸೇರಿದಂತೆ 13 ಗಣ್ಯರು ಇರಲಿದ್ದಾರೆ. ಸೋಮವಾರ ಬೆಳಗ್ಗೆ 9 ಗಂಟೆಗೆ ಮೈಸೂರಿಗೆ ಆಗಮಿಸುವ ರಾಷ್ಟ್ರಪತಿಗಳು, ದೇವಸ್ಥಾನಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆಯಲಿದ್ದಾರೆ. ನಂತರ ವೇದಿಕೆಗೆ ಆಗಮಿಸಿ ದಸರಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬಳಿಕ  ಬುಡಕಟ್ಟು ಸಮುದಾಯವರನ್ನು ಭೇಟಿ ಮಾಡಿ ಹುಬ್ಬಳ್ಳಿಗೆ ತೆರಳಲಿದ್ದಾರೆ ಎಂದು ಹೇಳಿದರು.

ಬುಡಕಟ್ಟು ಜನರ ಭೇಟಿ, ರಾಷ್ಟ್ರಪತಿಗಳೊಂದಿಗೆ ಫೋಟೋ ತೆಗೆಸಿಕೊಳ್ಳುವುದಕ್ಕೆ ದೇವಸ್ಥಾನದ ಬಲಭಾಗದಲ್ಲಿ ವ್ಯವಸ್ಥೆ ಮಾಡಲಾಗಿದೆ. ಹುಣಸೂರು, ಪಿರಿಯಾಪಟ್ಟಣ, ಎಚ್.ಡಿ.ಕೋಟೆ ಭಾಗದಿಂದ ಬುಡಕಟ್ಟು ಸಮುದಾಯದ 14 ಜನರು ಆಗಮಿಸಲಿದ್ದಾರೆ ಎಂದು ಹೇಳಿದರು.

ರಾಷ್ಟ್ರಪತಿಗಳೊಂದಿಗೆ ವೇದಿಕೆ ಹಂಚಿಕೊಳ್ಳಬಾರದೆಂದು ಆಪ್ ಪತ್ರ ಬರೆದಿರುವ ವಿಚಾರ ಕುರಿತ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಇದರಲ್ಲಿ ಅನಾವಶ್ಯಕವಾಗಿ ನನ್ನ ಹೆಸರನ್ನು ಪ್ರಸ್ತಾಪಿಸಲಾಗಿದೆ. ಇದರಲ್ಲಿ ರಾಜಕೀಯ ಮಾಡುತ್ತಿದ್ದು, ಅದನ್ನು ರಾಜಕೀಯವಾಗಿ ಎದುರಿಸುತ್ತೇನೆ ಎಂದರು.

ನಾವು ಬಿಡಿಎ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ವರ್ಕ್ ಆರ್ಡರ್‌ ನೀಡಿದ್ದಾರೆ. ಇದರಲ್ಲಿ ನಮ್ಮ ಪಾತ್ರ ಇಲ್ಲ, ಯಾವುದೇ ವ್ಯವಹಾರ ಇಲ್ಲ. ಕಡತಗಳು ಅಧ್ಯಕ್ಷರಿಗೆ ಬರಲ್ಲ ಮತ್ತು ಯಾವ ಕಡತಕ್ಕೂ ಸಹಿ ಕೂಡ ಹಾಕಿಲ್ಲ. ಹಣಕಾಸಿನ ಯಾವುದೇ ವ್ಯವಹಾರ ಮಾಡಿಲ್ಲ. ರಾಜಕೀಯವಾಗಿ ಮಾಡಿದ್ದಾರೆ, ರಾಜಕೀಯವಾಗಿ ಎದುರಿಸುತ್ತೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಂಸದರಾದ ಪ್ರತಾಪ್ ಸಿಂಹ, ಮೈಸೂರು ಮೇಯರ್ ಶಿವಕುಮಾರ್, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಪೊಲೀಸ್ ಕಮಿಷನರ್ ಚಂದ್ರಗುಪ್ತ, ಅಪರ ಜಿಲ್ಲಾಧಿಕಾರಿ ಮಂಜುನಾಥ್ ಸ್ವಾಮಿ ಸೇರಿದಂತೆ ಹಲವಾರು ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News