ಹಿಜಾಬ್, ಹಲಾಲ್ ಎಂದು ಸಾಮರಸ್ಯ ಹಾಳು ಮಾಡುವಾಗ ಆಗದ ಅವಮಾನ 'PayCM' ಅಭಿಯಾನದಿಂದ ಆಯಿತೇ?: ಎಚ್. ಸಿ. ಮಹದೇವಪ್ಪ

Update: 2022-09-25 10:48 GMT

ಬೆಂಳೂರು: ''ಪೇಸಿಎಂ' ಅಭಿಯಾನದಿಂದ  ಮುಖ್ಯಮಂತ್ರಿ ಬಸವರಾಜ  ಬೊಮ್ಮಾಯಿ ಅವರು ಎದುರಿಸುತ್ತಿರುವುದು ಅವಮಾನವಲ್ಲ, ಪ್ರತಿರೋಧ' ಎಂದು ಮಾಜಿ ಸಚಿವ ಡಾ. ಎಚ್. ಸಿ ಮಹದೇವಪ್ಪ ಹೇಳಿದ್ದಾರೆ. 

ಈ ಸಂಬಂಧ ರವಿವಾರ ಟ್ವೀಟ್ ಮಾಡಿರುವ ಅವರು, 'ಹಿಜಾಬ್, ಹಲಾಲ್ ಎಂದು ಸಾಮರಸ್ಯ ಹಾಳು ಮಾಡುವಾಗ ಆಗದ ಅವಮಾನ 'PayCM' ಅಭಿಯಾನದಿಂದ ಆಯಿತೇ? ಎಂದು ಮುಖ್ಯಮಂತ್ರಿ ಬಸವರಾಜ  ಬೊಮ್ಮಾಯಿ ಅವರನ್ನು ಪ್ರಶ್ನೆ ಮಾಡಿದ್ದಾರೆ. 

ಡಾ.ಎಚ್. ಸಿ ಮಹದೇವಪ್ಪ ಅವರ ಟ್ವೀಟ್ ಇಂತಿದೆ... 

''ರಾಜ್ಯದಲ್ಲಿ ಯಡಿಯೂರಪ್ಪನವರ ಬಳಿಕ ಮುಖ್ಯಮಂತ್ರಿ ಹುದ್ದೆಗೆ ಏರಿದ ಬಸವರಾಜ ಬೊಮ್ಮಾಯಿಯವರು ಕ್ರಮೇಣ ಆರೆಸ್ಸೆಸ್  ಕೈಗೊಂಬೆಯಾಗಿ ಹಿಜಾಬ್, ಹಲಾಲ್ ನಂತಹ ಹಲವು ಸಮಾಜದ ಶಾಂತಿ ಮತ್ತು ಸೌಹಾರ್ದತೆಗೆ ವಿರುದ್ಧವಾದ ಸಂಗತಿಗಳು ನಡೆಯುತ್ತಿದ್ದರೂ ಕೂಡಾ ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿಯುವ ರೀತಿಯಲ್ಲಿ ಸುಮ್ಮನೇ ಇದ್ದರು. ಇದಾದ ಬಳಿಕ ಪಠ್ಯ ಪುಸ್ತಕ ಪರಿಷ್ಕರಣೆ ವಿಷಯದಲ್ಲೂ ಸಹ ಅಜ್ಞಾನವನ್ನು ಎಚ್ಚರಿಸಬೇಕಿದ್ದ ಮುಖ್ಯಮಂತ್ರಿಗಳು ಮತ್ತೆ RSS ನ ಕೈಗೊಂಬೆಯಂತೆಯೇ ವರ್ತಿಸಿದರು.'' 

''ಗುತ್ತಿಗೆದಾರರೇ ಕಾಮಗಾರಿ ನಿರ್ವಹಿಸಲು ಆಗದೇ ಇರುವಷ್ಟು ಭ್ರಷ್ಟಾಚಾರ ನಡೆಯುತ್ತಿದ್ದು 40% ನಷ್ಟು ಕಮಿಷನ್ ವ್ಯವಹಾರ ನಡೆಯುತ್ತಿದೆ ಎಂದು ದಾಖಲೆ ಸಮೇತ ಆರೋಪಿಸಿದರು. ಅವರಲ್ಲದೆಯೂ ಬಹಳಷ್ಟು ಮಂದಿ ಗುತ್ತಿಗೆದಾರರು ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಬಹಶಃ ಬೊಮ್ಮಾಯಿ ಅವರಿಗೆ ಅವಮಾನ ಆಗುವುದೇ ಆಗಿದ್ದರೆ ಈ ಎಲ್ಲಾ ಸಂದರ್ಭದಲ್ಲಿ ಆಗಬೇಕಿತ್ತು' ಎಂದು ಕಿಡಿಕಾರಿದ್ದಾರೆ.

''ಅಭಿವೃದ್ಧಿ ಇಲ್ಲದ ಮತ್ತು ಜನಪರ ಯೋಜನೆಗಳೇ ಇಲ್ಲದ ಬಿಜೆಪಿಗರ ದುರಾಡಳಿತದಿಂದ ಬೇಸತ್ತು ನಡೆಸುತ್ತಿರುವ ಪೇಸಿಎಂ ಅಭಿಯಾನಕ್ಕೆ ಜನ ಬೆಂಬಲ ಸಿಕ್ಕ ಕೂಡಲೇ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಅವಮಾನ ಪ್ರಜ್ಞೆ ಜಾಗೃತವಾಗಿರುವುದು ಹಾಸ್ಯಾಸ್ಪದ ಸಂಗತಿ. ಸಮಾಜದ ಸಾಮರಸ್ಯ ಹಾಳು ಮಾಡುವುದರಿಂದ ಹಿಡಿದು, ಕಮಿಷನ್ ಭ್ರಷ್ಟಾಚಾರದವರೆಗಿನ ನಿಮ್ಮ ಸರ್ಕಾರದ ದುರಾಡಳಿತದಿಂದ ರಾಜ್ಯಕ್ಕೆ ಈಗಾಗಲೇ ತಲೆ ತಗ್ಗಿಸುವ ಸ್ಥಿತಿ ಬಂದಿದೆ. ಈಗ ಬೊಮ್ಮಾಯಿ ಅವರು ಎದುರಿಸುತ್ತಿರುವುದು ಅವಮಾನವಲ್ಲ ಪ್ರತಿರೋಧವಾಗಿದ್ದು ಅದು ಈ ಸಂದರ್ಭದಲ್ಲಿ ಅನಿವಾರ್ಯವೂ ಆದ ಸಂಗತಿಯಾಗಿದೆ.' ಎಂದು ಹೇಳಿದ್ದಾರೆ. 

'ಇನ್ನು ಕಾಂಗ್ರೆಸ್ ಸರ್ಕಾರದ ವೇಳೆ ಸಿದ್ದರಾಮಯ್ಯ ಅವರ ಆದಿಯಾಗಿ ಹಲವು ನಾಯಕರನ್ನು ಅತ್ಯಂತ ಕೀಳು ಅಭಿರುಚಿಯ ಪದಗಳಲ್ಲಿ ಸಂಬೋಧಿಸಿದ ಬಿಜೆಪಿಗರು ಈಗ ಸದ್ಗುಣಶಾಹಿಗಳಂತೆ ಮಾತನಾಡುವುದನ್ನು ನೋಡಿದರೆ ಇವರು ತೀರಾ ಕೆಳ ಮಟ್ಟಕ್ಕೆ ಹೋಗಿದ್ದಾರೆ ಎಂದು ಅನಿಸುತ್ತದೆ' ಎಂದು ಎಚ್. ಸಿ ಮಹದೇವಪ್ಪ ಟ್ವೀಟಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News