ದೇವರ ಮೂರ್ತಿ ಮುಟ್ಟಿದ್ದಕ್ಕೆ ದಲಿತ ಬಾಲಕನಿಗೆ ದಂಡ ಪ್ರಕರಣ: ವಿವಿಧ ಪ್ರಗತಿಪರ ಸಂಘಟನೆಗಳಿಂದ 'ಉಳ್ಳೇರಹಳ್ಳಿ ಚಲೋ'

Update: 2022-09-25 16:50 GMT

ಕೋಲಾರ/ಮಾಲೂರು, ಸೆ.25: ಮಾಲೂರು ತಾಲೂಕಿನ ಉಳ್ಳೇರಹಳ್ಳಿ ಗ್ರಾಮದಲ್ಲಿ ದೇವರ ಗುಜ್ಜಕೋಲು ಮುಟ್ಟಿದ ಕಾರಣಕ್ಕೆ ದಲಿತ ಬಾಲಕನಿಗೆ ದಂಡ ವಿಧಿಸಿದ್ದನ್ನು ಖಂಡಿಸಿ ವಿವಿಧ ಪ್ರಗತಿಪರ ಸಂಘಟನೆಗಳ ವತಿಯಿಂದ ‘ಉಳ್ಳೇರಹಳ್ಳಿ ಚಲೋ’ ಬೃಹತ್ ಜಾಥಾ ನಡೆಯಿತು.

ಕೆ.ಜಿ.ಹಳ್ಳಿಯಿಂದ ಹುಣಸಿಕೋಟೆ ಗ್ರಾಮದ ಮೂಲಕ ತೆರಳಿದ ಜಾಥಾ ಮಧ್ಯಾಹ್ನ ಸುಮಾರು 1:40ಕ್ಕೆ ಉಳ್ಳೇರಹಳ್ಳಿ ಗ್ರಾಮ ತಲುಪಿತು.

 ಪಟ್ಟಣ ಸೇರಿದಂತೆ ಇತರ ತಾಲೂಕು ಹಾಗೂ ಇತರ ಜಿಲ್ಲೆಗಳಿಂದ ವಾಹನಗಳಲ್ಲಿ ಸಂಘಟಕರು, ಕಾರ್ಯಕರ್ತರು, ಸೇರಿದಂತೆ ಸುಮಾರು ಮೂರು ಸಾವಿರ ಮಂದಿ ಜಾಥಾದಲ್ಲಿ ಪಾಲ್ಗೊಂಡಿದ್ದರು. ಜಾಥಾದ ವೇಳೆ ದಲಿತ ಸಂಘಟನೆಗಳ ಕಾರ್ಯಕರ್ತರು ಗ್ರಾಮದ ಭೂತಮ್ಮನ ದೇವಾಲಯದ ಎದುರು ಧರಣಿ ನಡೆಸಿ ಘೋಷಣೆ ಕೂಗಿದರು. ಬಳಿಕ ದೇಗುಲದಿಂದ ಗುಜ್ಜಕೋಲು ಹೊರತಂದು ದೇಗುಲದ ಮೇಲೆ ಧ್ವಜ ಕಟ್ಟಿದರು. ಈ ವೇಳೆ ನೂಕಾಟ ನಡೆದಿದ್ದು, ದಲಿತ ಬಾಲಕನಿಗೆ ದಂಡ ವಿಧಿಸಿದ ಕ್ರೂರ ಮನಸ್ಸುಗಳಿಗೆ ಧಿಕ್ಕಾರ ಎಂದು ಘೋಷಣೆ ಕೂಗಿದರು. ಭೂತಮ್ಮನ ದೇಗುಳದೊಳಗೆ ಪ್ರವೇಶಿಸಿದ ಪೊಲೀಸರು ಪ್ರತಿಭಟನಾಕಾರರನ್ನು ಹೊರಗೆ ಕಳುಹಿಸಿದರು.

ನಂತರ ಗ್ರಾಮದ ಮಧ್ಯ ಭಾಗದಲ್ಲಿರುವ ಅಶ್ವಥಕಟ್ಟೆಯ ಬಳಿ ಪ್ರತಿಭಟನಾಕಾರರು ಸಭೆ ನಡೆಸಿದರು. ಈ ಸಂದರ್ಭದಲ್ಲಿ ಪ್ರಜಾ ಪರಿವರ್ತನೆ ಸಂಘಟನೆಯ ರಾಜ್ಯ ಅಧ್ಯಕ್ಷ ಬಿ.ಗೋಪಾಲ್ ಮಾತನಾಡಿ, ಜಾತಿ ಪದ್ಧತಿ ಇಂದಿಗೂ ಜೀವಂತವಾಗಿದೆ. ದಲಿತರಲ್ಲೂ ಜಾತಿ ಪದ್ಧತಿ ನಡೆಯುತ್ತಿದೆ. ದೇಶದಲ್ಲಿ 9,315 ಜಾತಿಗಳು ಇದ್ದು, ಪರಿಶಿಷ್ಟ ಜಾತಿಯಲ್ಲಿ 1,600 ಉಪಜಾತಿಗಳು ಇವೆ. ಇದರಲ್ಲಿ ಒಂದು ಮೇಲು ಒಂದು ಕೀಳು ಎಂಬುವ ಪರಿಸ್ಥಿತಿ ನಡೆಯುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಅಂಬೇಡ್ಕರ್ ಸೇವಾ ಸಮಿತಿ ಅಧ್ಯಕ್ಷ ಸಂದೇಶ್ ಮಾತನಾಡಿ, ‘ಸೆ.8ರಂದು ಪ್ರಕರಣ ನಡೆದಿದ್ದು, 12 ದಿನ ಬೆಳಕಿಗೆ ಬಂದಿರಲಿಲ್ಲ. ನಮಗೆ ವಿಷಯ ತಿಳಿದ ಕೂಡಲೇ ಸಂತ್ರಸ್ತೆ ಶೋಭಾ ಅವರ ಮನೆಗೆ ಭೇಟಿ ನೀಡಿ ಮಾಹಿತಿ ಪಡೆದೆ. ಆನಂತರ ಮಾಸ್ತಿ ಠಾಣೆಯಲ್ಲಿ ದೂರು ದಾಖಲಿಸಲಾಯಿತು. ಪೊಲೀಸರು ಆರೋಪಿಗಳನ್ನು ಬಂಧಿಸಿದರು. ಆದರೆ, ಗ್ರಾಮದ ಕೆಲವರು ಈಗ ನನ್ನ ವಿರುದ್ಧವೇ ಅಪಪ್ರಚಾರ ನಡೆಸುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ಬಳಿಕ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಚಿನ್ ಘೋರ್ಪಡೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಚನ್ನಬಸವಪ್ಪ ಅವರಿಗೆ ಸಂಘಟಕರು ಮನವಿ ಪತ್ರ ನೀಡಿದರು.

ಜಾಥಾದಲ್ಲಿ ದಸಂಸ ಮುಖಂಡ ವಿಜಯಕುಮಾರ್, ಮುಖಂಡರಾದ ಗಾಂಧಿನಗರ ನಾರಾಯಣಸ್ವಾಮಿ, ಗಾಯಕ ಪಿಚ್ಳಳ್ಳಿ ಶ್ರೀನಿವಾಸ್, ಅರಿವು ಶಿವಪ್ಪ, ಡಿಎಚ್‌ಎಸ್‌ನ ಪಿ.ವಿ.ರಮಣ, ಶಿವಣ್ಣ, ಭೀಮಸೇನೆಯ ಪಂಡಿತ್ ಮುನಿವೆಂಕಟಪ್ಪ, ಆಂಜಿನಪ್ಪ, ಎ.ಕೆ.ವೆಂಕಟೇಶ್, ರಾಮಚಂದ್ರಪ್ಪ, ಲಕ್ಕೂರು ವೆಂಕಟೇಶ್, ಮೈಲಾಂಡಹಳ್ಳಿ ನಾರಾಯಣಸ್ವಾಮಿ, ಕೋದಂಡರಾಂ, ಮುನಿಕೃಷ್ಣಪ್ಪ, ಹೆಬ್ಬಾಳ ವೆಂಕಟೇಶ್, ಎಸ್.ಎಂ.ವೆಂಕಟೇಶ್ ಅಶ್ವತ್ಥನಾರಾಯಣ, ಆನಂದ ಸಿದ್ಧಾರ್ಥ್ ಸೇರಿದಂತೆ ವಿವಿಧ ದಲಿತ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

‘ದೇವಸ್ಥಾನಗಳಿಗೆ ಮುಕ್ತ ಪ್ರವೇಶ ನಾಮಫಲಕ ಅಳವಡಿಸಲಿ’

ಕೋಲಾರ ಜಿಲ್ಲೆಯಲ್ಲಿ ಅಸ್ಪಶ್ಯತೆ ತಾಂಡವಾಡುತ್ತಿದ್ದು ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕ ಸ್ಥಳ ಹಾಗೂ ದೇವಸ್ಥಾನಗಳಿಗೆ ಮುಕ್ತ ಪ್ರವೇಶವಿದೆ ಎಂದು ನಾಮಫಲಕ ಹಾಕಬೇಕು. ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಇನ್ನಾದರೂ ಅನಿಷ್ಠ ಪದ್ಧತಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಜನರಲ್ಲಿ ಅರಿವು ಮೂಡಿಸಬೇಕು ಎಂದು ದಲಿತ ಮುಖಂಡರು ಮನವಿಯಲ್ಲಿ ಒತ್ತಾಯಿಸಿದರು.

-------------------------------------
'43 ವರ್ಷಗಳ ಹಿಂದೆ ಹುಣಸಿಕೋಟೆ ಗ್ರಾಮದಲ್ಲಿ ಪ್ರಕರಣವೊಂದು ನಡೆದಿತ್ತು. ಅಂದು ಹುಣಸಿಕೋಟೆಯಿಂದ ವಿಧಾನಸೌಧ ಚಲೋ ನಡೆಸಿ ನ್ಯಾಯ ಪಡೆಯಲಾಯಿತು. ಮತ್ತೆ ಇದೇ ಗುಡ್ಡಗಳ ಪ್ರದೇಶದಲ್ಲಿ ಅಸ್ಪಶ್ಯತೆ ಪ್ರಕರಣ ನಡೆದಿದೆ. ಸಂತ್ರಸ್ತೆ ಶೋಭಾ ಅವರ ಕುಟುಂಬಕ್ಕೆ ನ್ಯಾಯ ದೊರಕಸಿಕೊಡುವ ಜವಾಬ್ದಾರಿ ಇದ್ದು, ಆರೋಪಿಗಳಿಗೆ ಶಿಕ್ಷೆಯಾಗುವ ತನಕ ಹೋರಾಟ ಮುಂದುವರಿಸಬೇಕು'.

- ಬಿ.ಗೋಪಾಲ್, ಪ್ರಜಾ ಪರಿವರ್ತನೆ ಸಂಘಟನೆಯ ರಾಜ್ಯ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News