ರಾಜ್ಯ ಸರ್ಕಾರ ಕಮಿಷನ್, ಕರಪ್ಷನ್, ಕಮ್ಯುನಲಿಸಮ್ ಎಂಬ ಮೂರು 'ಸಿ' ಮೇಲೆ ನಿಂತಿದೆ: ಪ್ರಿಯಾಂಕ್‌ ಖರ್ಗೆ ವಾಗ್ದಾಳಿ

Update: 2022-09-25 17:24 GMT

ಬೆಂಗಳೂರು: 'ಕೆಲವು ದಿನಗಳಿಂದ ಪೇ ಸಿಎಂ ಪೋಸ್ಟರ್ ವಿಚಾರವಾಗಿ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಆಗುತ್ತಿದ್ದು, ಈ ಅಭಿಯಾನದಿಂದ ಕರ್ನಾಟಕದ ಘನತೆಗೆ ರಾಷ್ಟ್ರ ಮಟ್ಟದಲ್ಲಿ ಧಕ್ಕೆ ಆಗುತ್ತಿದೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಇವರ ಪ್ರಕಾರ ಲಂಚ ಸ್ವೀಕರಿಸುವುದು, ಭ್ರಷ್ಟಾಚಾರ ಮಾಡುವುದರಿಂದ, 40% ಕಮಿಷನ್ ಪಡೆಯುವುದು ರಾಜ್ಯದ ಘನತೆಗೆ ಧಕ್ಕೆಯಾಗುವುದಿಲ್ಲವಂತೆ, ಆದರೆ ಕಾಂಗ್ರೆಸ್ ಈ ಭ್ರಷ್ಟಾಚಾರ ಪ್ರಶ್ನಿಸುವುದರಿಂದ ರಾಜ್ಯ ತಲೆತಗ್ಗಿಸುವಂತಾಗುತ್ತದೆ' ಎಂದು ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ  ಹಾಗೂ ಚಿತ್ತಾಪುರ ಕ್ಷೇತ್ರದ ಶಾಸಕ ಪ್ರಿಯಾಂಕ್‌ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. 

'ಬಿಜೆಪಿಯವರು ಹತಾಶರಾಗಿದ್ದು, 40% ಸರ್ಕಾರ ಎಂಬ ಬಿರುದಿನಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಇಂತಹ ಸಮಸ್ಯೆ ಉದ್ಭವಿಸಿದಾಗಲೆಲ್ಲಾ ಅವರು ತಮ್ಮ ಸ್ಟಾಂಡರ್ಡ್ ಆಪರೇಟಿಂಗ್ ಪ್ರಕ್ರಿಯೆ ಮಾಡುತ್ತಾರೆ. ಅದೇನೆಂದರೆ ಧರ್ಮ ರಾಜಕಾರಣ. ನಾವು 40% ಸರ್ಕಾರದ ವಿರುದ್ಧ ಹೋರಾಟ ಮಾಡಲು ಮುಂದಾಗಿರುವಾಗ ಬಿಜೆಪಿಯವರು ಧರ್ಮ ಮುಂದಿಟ್ಟು ರಾಜಕಾರಣ ಮಾಡುತ್ತಿದ್ದಾರೆ. ಈ ಸರ್ಕಾರ ಕಮಿಷನ್, ಕರಪ್ಷನ್, ಕಮ್ಯುನಲಿಸಮ್ ಎಂಬ ಮೂರು ಸಿ ಮೇಲೆ ನಿಂತಿದೆ. ಇದರ ಹೊರತಾಗಿ ಅವರು ಅಭಿವೃದ್ಧಿ ಪರ, 40% ಕಮಿಷನ್ ವಿಚಾರವಾಗಿ ಅಧಿವೇಶನದಲ್ಲಿ ಚರ್ಚೆ ಮಾಡಲು ಸಿದ್ಧರಿಲ್ಲ' ಎಂದು ಕಿಡಿಕಾರಿದ್ದಾರೆ.

'ರಾಜ್ಯದ ಇತಿಹಾಸದಲ್ಲಿ ಎಂದಾದರೂ ಅಧಿವೇಶನದ ಕಲಾಪ ನಡೆಯುವಾಗ ಆಡಳಿತ ಪಕ್ಷದವರು ಪ್ಲೆಕಾರ್ಡ್ ಪ್ರರ್ಶಿಸಿರುವ ಇತಿಹಾಸ ಇದೆಯೇ? ಆಡಳಿತ ಪಕ್ಷದವರು ಸದನದ ಬಾವಿಗಿಳಿಯುವುದು, ವಿರೋಧ ಪಕ್ಷದ ನಾಯಕರು ಮಾತನಾಡುವಾಗ ಪದೇಪದೆ ಅಡ್ಡಿಪಡಿಸುವುದನ್ನು ನೋಡಿದ್ದೀರಾ? ಬಿಜೆಪಿ ಅಧಿಕಾರಿದಲ್ಲಿ ಏನು ನಡೆಯುತ್ತಿದೆ? ' ಎಂದು ಪ್ರಶ್ನೆ ಮಾಡಿದರು.  

ಕೆಲ ಸಚಿವರು ಲಿಂಗಾಯತ ಮುಖ್ಯಮಂತ್ರಿಗಳಿಗೆ ಟಾರ್ಗೆಟ್ ಮಾಡುತ್ತಿದ್ದೀರಾ ಎಂದು ಹೇಳುತ್ತಿದ್ದಾರೆ. ನಿಮಗೆ ಸಮುದಾಯಗಳ ಮೇಲೆ ನಿಜಕ್ಕೂ ಇಷ್ಟು ಕಾಳಜಿ ಇದ್ದರೆ, ಕಳೆದ ವಾರವಷ್ಟೇ ಯಡಿಯೂರಪ್ಪನವರ ವಿರುದ್ಧ ವಿಚಾರಣೆ ನಡೆಸಬೇಕು ಎಂದು ಎಫ್ಐಆರ್ ದಾಖಲಾಗಿದ್ದಾಗ ಯಾಕೆ ಈ ಅನುಕಂಪ ತೋರಿಸಲಿಲ್ಲ. ಅಂತಹ ದೊಡ್ಡ ನಾಯಕರನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸಿದ್ದು ಯಾಕೆ? ಅವರು ಕಣ್ಣೀರು ಹಾಕುವಂತೆ ಮಾಡಿದಾಗ ನಿಮ್ಮ ಅನುಕಂಪ ಎಲ್ಲಿ ಹೋಗಿತ್ತು. ಸಂತೋಷ್ ಪಾಟೀಲ್ ಎಂಬ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಾಗ ಈ ಅನುಕಂಪ ಇರಲಿಲ್ಲ ಯಾಕೆ? ಮಠಾಧೀಶರು ಬಹಿರಂಗವಾಗಿ ಸರ್ಕಾರದ ವಿರುದ್ಧ 30% ಕಮಿಷನ್ ಆರೋಪ ಮಾಡಿದರಲ್ಲಾ ಅವರು ಯಾವ ಸಮುದಾಯಕ್ಕೆ ಸೇರಿದ್ದಾರೆ? ಈ ಸರ್ಕಾರ ಬಜೆಟ್ ಮಂಡಿಸಿದಾಗ ಸರ್ವ ವ್ಯಾಪಿ, ಸರ್ವಸ್ಪರ್ಶಿ ಬಜೆಟ್ ಎಂದರು. ಈಸರ್ಕಾರದಲ್ಲಿ ಸರ್ವ ವ್ಯಾಪಿ ಹಾಗೂ ಸರ್ವಸ್ಪರ್ಶಿ ಅಂತಾ ಯಾವುದಾದರೂ ಇದ್ದರೆ ಅದು ಭ್ರಷ್ಟಾಚಾರ ಮಾತ್ರ ಎಂದು ಹೇಳಿದರು. 

ಭ್ರಷ್ಟಾಚಾರ ಮಾಡಲು ಜಾತಿ ಇಲ್ಲ. ಭ್ರಷ್ಟಾಚಾರಿಗಳೇ ಒಂದು ಜಾತಿ ಆಗಿದ್ದೀರಾ. ಭ್ರಷ್ಟ ಜನತಾ ಪಕ್ಷವೇ ಒಂದು ಜೀತಿ ಆಗಿದ್ದು, ನಿಮ್ಮ ಧರ್ಮ ಹಾಗೂ ಕರ್ಮ ಅದೇ ಆಗಿದೆ. ಈ ಹಗರಣಗಳ ಬಗ್ಗೆ ಪ್ರಶ್ನೆ ಮಾಡಿದಾಗ ಧರ್ಮ ಜಾತಿ ಹೆಸರು ಹೇಳುತ್ತಿರುವುದೇಕೆ? ಧಮ್ಮು, ತಾಕತ್ತು ಎಂದು ಅಬ್ಬರಿಸಿದ ಮಾತು ಎಲ್ಲಿ ಹೋಯಿತು? ಎಂದು ಪ್ರಶ್ನೆ ಮಾಡಿದರು.   

ನೀವು ಅನಗತ್ಯವಾಗಿ ಬಸವಣ್ಮನವರ ತತ್ವಕ್ಕೆ ಅಪಮಾನ ಮಾಡುತ್ತಿರುವುದೇಕೆ? ನಾನು ಬಸವಣ್ಣನವರ ನಾಡಿನಿಂದ ಬಂದಿದ್ದು, ಬಸವತತ್ವ ಎಂದರೆ ಏನು ಎಂದು ಗೊತ್ತಿದೆಯೇ? ಬಿಜೆಪಿಯವರು ಕನಿಷ್ಠ ಪಕ್ಷ ಬಸವಣ್ಣನವರ ಒಂದೆರಡು ವಚನಗಳನ್ನಾದರೂ ಓದಿಕೊಳ್ಳಲಿ. ಅವರು ತಮ್ಮ ವಚನದಲ್ಲಿ ಕಳಬೇಡ, ಕೊಲಬೇಡ, ಹುಸಿಯನುಡಿಯಬೇಡ. ಅವರು ಕಳಬೇಡ ಎಂದರೆ ನೀವು 40% ಕಲ್ಳತನ ಮಾಡುತ್ತೀರಿ. ಬಸವಣ್ಣನವರು ಕೊಲಬೇಡ ಎಂದರೆ ನೀವು ನಿಮ್ಮ ಕಾರ್ಯಕರ್ತರನ್ನೇ ಕೊಲ್ಲುತ್ತಿದ್ದೀರಿ ಎಂದು ನಿಮ್ಮ ಕಾರ್ಯಕರ್ತರೇ ಹೇಳುತ್ತಿದ್ದಾರೆ. ಬಸವಣ್ಣನವರು ಹುಸಿಯ ನುಡಿಯಬೇಡ ಎಂದರೆ, ನೀವು ಸುಳ್ಳನೇ ಹೇಳುತ್ತಿದ್ದೀರಿ. ಅಸೂಯೆ ಪಡಬೇಡ ಎಂದು ಹೇಳಿದ್ದರೆ, ನೀವು ಜಾತಿ ಧರ್ಮಗಳ ನಡುವೆ ಅಸೂಯೆ ಉಂಟು ಮಾಡುತ್ತಿದ್ದೀರಿ. ಇದೇನಾ ನಿಮ್ಮ ಅಂತರಂಗ ಹಾಗೂ ಬಹಿರಂಗ ಶುದ್ಧಿ? ಎಂದು ಪ್ರಶ್ನೆ ಮಾಡಿದರು.  

ಪಠ್ಯ ಪರಿಷ್ಕರಣೆಯಲ್ಲಿ ನಿಮ್ಮ ಗ್ರೇಟ್ ರೋಹಿತ್ ಚಕ್ರತೀರ್ಥ ಬಸವಣ್ಮನವರಿಗೆ ಅಪಮಾನ ಮಾಡಿದಾಗ ನಿಮ್ಮ ಅನುಕಂಪ ಎಲ್ಲಿ ಹೋಗಿತ್ತು? ನಿಮ್ಮ ಮಾರ್ಗದರ್ಶಕರಾದ ಆರ್ ಎಸ್ಎಸ್ ನವರು ಬಸವಣ್ಣನ ಫೋಟೋ ಇಟ್ಟುಕೊಳ್ಳುತ್ತಾರಾ? ಬಸವ ಜಯಂತಿ ಮಾಡುತ್ತಾರಾ? ನೀವು ಯಾರ ಪರವಾಗಿ, ಯಾರ ವಿಚಾರ ಪರ ನಿಂತಿದ್ದೀರಿ. ಇಂದು ದೇಶದ ಸಂವಿಧಾನ ನಿಂತಿರುವುದು ಬುದ್ಧ, ಬಸವ, ಅಂಬೇಡ್ಕರ್ ಅವರ ತತ್ವದ ಮೇಲೆ. ಆ ಸಂವಿಧಾನ ಬದಲಿಸಲು ಹೋಗಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಪಿಎಸ್ ಐ ನೇಮಕಾತಿಯಲ್ಲಿ 1.29 ಲಕ್ಷ ಮಂದಿ ದೈಹಿಕ ಪರೀಕ್ಷೆಯಲ್ಲಿ ಭಾಗವಹಿಸಿದ್ದರು. 54 ಸಾವಿರ ಮಂದಿ ಯುವಕರು ಪರೀಕ್ಷೆ ಬರೆದಿದ್ದರು, ಅವರೆಲ್ಲರೂ ಒಂದು ಸಮಾಜಕ್ಕೆ ಸೇರಿದವರೇ? ಕೆಪಿಟಿಸಿಎಲ್ ಪರೀಕ್ಷೆ ಬರೆದ 3.50 ಲಕ್ಷ ಜನ ಒಂದೇ ಸಮುದಾಯದವರೇ? ಇದೇನಾ ನಿಮ್ಮ ಸಮಬಾಳು, ಸಮಪಾಲು ನೀತಿ? ಕೆಪಿಎಸ್ ಸಿ, ಕೆಇಎ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳ 2.5 ಲಕ್ಷ ಖಾಲಿ ಹುದ್ದೆಗಳಿಗೆ 20 ಲಕ್ಷ ಮಂದಿ ಪರೀಕ್ಷೆ ಬರೆದಿದ್ದಾರೆ. ಇವರೆಲ್ಲಾ ಯಾವ ಸಮುದಾಯದವರು? ಇವರೆಲ್ಲರಿಗೂ ನೀವು ಮೋಸ ಮಾಡಿದ್ದೀರಿ  ಎಂದು ಹೇಳಿದರು. .

ಪ್ರವಾಹದಲ್ಲಿ ರೈತರು ಬೆಳೆ ಕಳೆದುಕೊಂಡು, ಜನ ಆಸ್ತಿಪಾಸ್ತಿ ಕಳೆದುಕೊಂಡಿದ್ದಾರೆ. ಅವರೆಲ್ಲ ಯಾವ ಸಮುದಾಯದವರು? ಈ ಸಂಸ್ತ್ರಸ್ತರ ಪರವಾಗಿ ಹೋರಾಟ ಮಾಡಿದರೆ, ಒಂದು ಸಮುದಾಯದ ವಿರುದ್ಧ ಹೋರಾಟ ಮಾಡಿದಂತೆಯೇ? ರೈತರು, ಯುವಕರು, ಮಹಿಳೆಯರ ಪರ ಧ್ವನಿ ಎತ್ತಿದರೆ ಧರ್ಮ, ಜಾತಿಯನ್ನು ಅಡ್ಡ ತರುತ್ತೀರಾ? ಸಿದ್ದರಾಮಯ್ಯ ಅವರನ್ನು ನೀವು ಟೀಕಿಸಿದಾಗ ನೀವು ಅಹಿಂದಾ ವಿರೋಧಿಗಳು ಎಂದು ಹೇಳಬಹುದೇ? ಖರ್ಗೆ ಅವರನ್ನು ಟೀಕಿಸಿದಾಗ ನೀವು ದಲಿತ ವಿರೋಧಿಗಳು ಎಂದು ಹೇಳಬಹುದೇ? ಎಂ.ಬಿ ಪಾಟೀಲ್, ಖಂಡ್ರೆ ಎವರ ವಿರುದ್ಧ ಮಾತನಾಡಿದರೆ ನೀವು ಲಿಂಗಾಯತ ವಿರೋಧಿ ಆಗುತ್ತೀರಾ? ನಿಮ್ಮ ವೈಫಲ್ಯ ಮುಚ್ಚಿಕೊಳ್ಳಲು ಧರ್ಮ, ಜಾತಿ ರಾಜಕೀಯ ಮಾಡುತ್ತಿರುವುದಕ್ಕೆ ನಿಮಗೆ ನಾಚಿಕೆಯಾಗಬೇಕು ಎಂದು ಹೇಳಿದರು. .

ಖರ್ಗೆ ಅವರ ಪತ್ರಿಕಾಗೋಷ್ಠಿಯ ಪೂರ್ಣ ವಿವರ ಇಲ್ಲಿದೆ...

ಸಚಿವರೊಬ್ಬರು ಕಾಂಗ್ರೆಸ್ ನವರು ಬಲಿಷ್ಠ ಸಮುದಾಯದವರ ಮೇಲೆ ಟಾರ್ಗೆಟ್ ಮಾಡುತ್ತಾರೆ ಎಂದಿದ್ದಾರೆ. ಹಾಗಿದ್ದರೆ ನೀವು ಗದೀಶ್ ಶೆಟ್ಟರ್ ಅವರಿಗೆ ಅವಕಾಶ ನೀಡಿಲ್ಲ ಏಕೆ? ಸದಾನಂದ ಗೌಡರನ್ನು 11 ತಿಂಗಳಿಗೆ ಗಂಟುಮೂಟೆ ಕಟ್ಟಿದ್ದು ಯಾಕೆ? ಅವರೆಲ್ಲಾ ಯಾವ ವರ್ಗದವರು? ನೀವು ಜನರಿಗೆ ತ್ತರ ನೀಡುವ ಬದಲು, ಜಾತಿ, ಧರ್ಮದ ಕಾರ್ಡ್ ಇಡುತ್ತೀರಾ?  

ನಿಮ್ಮ ಹೇಳಿಕೆ ಪ್ರಕಾರ ಯತ್ನಾಳ್ ಅವರು ಲಿಂಗಾಯತ ವಿರೋಧಿ ಎಂದು ಹೇಳಬಹುದಾ? ಈ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಹೇಳಿದ ಯೋಗೇಶ್ವರ್, ಈ ಸರ್ಕಾರ ಸರಿಯಾಗಿ ನಡೆಯುತ್ತಿಲ್ಲ ಎಂದ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ, ಸರ್ಕಾರ ಸರಿಯಾಗಿ ನಡೆಯುತ್ತಿಲ್ಲ ವಿಶ್ವನಾಥ್, ಈ ಸರ್ಕಾರ ತಳ್ಳಿಕೊಂಡು ಹೋಗುತ್ತಿದೆ ಎಂದು ಹೇಲಿದ ಮಾಧುಸ್ವಾಮಿ, ಈಶ್ವರಪ್ಪ ಅವರು ಕೂಡ ಸರ್ಕಾರದ ವಿರುದ್ಧ ಮಾತನಾಡಿದ್ದು ಇವರು ಲಿಂಗಾಯತ ವಿರೋಧಿಗಳಾ? ಇವರೆಲ್ಲರಿಗೂ ಅಸೂಯೆ ಇದೆಯಾ? ಎಬಿವಿಪಿ ಅವರು ಗೃಹಸಚಿವರ ಮನೆಗೆ ನುಗ್ಗಿ ಗಲಾಟೆ ಮಾಡಿದಾಗ ಇಡೀ ಎಬಿವಿಪಿ ಲಿಂಗಾಯತ ವಿರೋಧಿಯೇ?

ನಮ್ಮ ವಿರೋಧಪಕ್ಷದ ನಾಯಕರು ಪ್ರವಾಹ ವೀಕ್ಷಣೆಗೆ ಹೋದರೆ, ಕಪ್ಪು ಬಟ್ಟೆ ತೋರಿಸಿ, ಮೊಟ್ಟೆ ಹೊಡೆಯುತ್ತೀರಾ? ಇಷ್ಟೇನಾ ನಿಮ್ಮ ತಾಕತ್ತು, ಧೈರ್ಯ?

ಕಾಂಗ್ರೆಸ್ ನೀಚ ರಾಜಕಾರಣ ಮಾಡತ್ತಿದೆ ಎಂದು ಸಿಎಂ ನಿನ್ನೆ ಹೇಳಿಕೆ ನೀಡಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳೇ ಯುವಕರ ಭವಿಷ್ಯದ ಜತೆ ಆಟವಾಡುತ್ತಾ ಕೀಳು ರಾಜಕೀಯ ಮಾಡುತ್ತಿರುವವರು ನೀವು. ವಿಧಾನಸೌಧವನ್ನು ವ್ಯಾಪಾರ ಸೌಧ ಮಾಡಿ, ಯುವಕರ ಭವಿಷ್ಯವನ್ನು ನಾಶ ಮಾಡಿರುವುದು, ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ಖರೀದಿ ಮಾಡಿ ಸಿಎಂ ಆಗಿದ್ದೀರಲ್ಲಾ ಅದು ಕೀಳು ರಾಜಕಾರಣ. ಶಾಲಾ ಮಕ್ಕಳಿಗೆ ಕೇಸರಿ ಶಾಲು ಹಾಕಿಸಿ ಕೋಮುವಾದ, ಗೋರಕ್ಷರನ್ನಾಗಿ ಮಾಡುತ್ತಿದ್ದೀರಲ್ಲಾ ಅದು ಕೀಳು ರಾಜಕೀಯ. ಜಟ್ಕಾ ಕಟ್ ಸೇರಿದಂತೆ ಒಂದು ಸಮುದಾಯದ ವಿರುದ್ಧ ಸಮರ ಸಾರಿದಿರಲ್ಲ ಅದು ನೀಚ ರಾಜಕೀಯ. ನಿಮ್ಮ ಅನುಭವದಿಂದ ಉತ್ತಮ ಆಡಳಿತ ನಿರೀಕ್ಷೆ ಮಾಡಿದ್ದೆವು. ಎಸ್.ಆರ್ ಬೊಮ್ಮಾಯಿ ಅವರು ಸಂವಿಧಾನದ ಪರವಾಗಿದ್ದರು.

ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ನಿಮ್ಮ ಜಗಳದಲ್ಲಿ ರಾಜ್ಯ ಹಾಳಾಗುತ್ತಿದೆ. ನಿಮ್ಮ ಮರ್ಯಾದೆ ರಾಜ್ಯದ ಮರ್ಯಾದೆ ಎಂದು ಹೇಳುತ್ತಾರೆ. ರಾಜ್ಯದ ಮರ್ಯಾದೆ ಇವರೇ ಹರಾಜು ಹಾಕಿದ್ದಾರೆ. ತೆಲಂಗಾಣದಲ್ಲಿ ಇವರಿಗೆ 40% ಸಿಎಂಗೆ ಸ್ವಾಗತ ಎಂದು ಹಾಕಿದ್ದರು. ಇದು ತಲೆತಗ್ಗಿಸುವ ಸಂಗತಿ ಅಲ್ಲವೇ? 

ನಿವು ಭ್ರಷ್ಟಾಚಾರ ನಿಯಂತ್ರಿಸಿ. ನಾ ಖಾವೂಂಗಾ, ನಾ ಖಾನೇದೂಂಗಾ ಎಂದು ನಿಮ್ಮ ಬಾಸ್ ಹೇಳಿಕೆ ಹೇಳಿ ಜನರನ್ನು ಮರಳು ಮಾಡಿದ್ದೀರಿ. ಇಲ್ಲಿ ಮೇಬಿ ಖಾವೂಂಗಾ ತುಮ್ ಕೊಬಿ ಖಿಲಾವೂಂಗಾ ಎನ್ನುವಂತೆ ಮಾಡಿದ್ದಾರೆ.  

ನಾವು ಮಾಡಿರುವ ಹಗರಣಗಳ ಆರೋಪದ ತನಿಖೆಯನ್ನು ನ್ಯಾಯಾಂಗ ತನಿಖೆಗೆ ನೀಡಿ. ಕಾಂಗ್ರೆಸ್ ನವರ ಹೆಸರು ಬರುತ್ತದೆ ಎನ್ನುತ್ತೀರಲ್ಲಾ ಕೊಡಿ, ನಮ್ಮ ಹೆಸರು ಬರುವುದಾದರೆ ಬರಲಿ, ನಮಗೆ ಹೆದರಿಕೆ ಇಲ್ಲ, ನಿಮಗೆ ಯಾಕೆ? ಬಿಜೆಪಿಯವರು ಸ್ಕ್ಯಾಮ್ ರಾಮಯ್ಯ ಎಂಬ ಕಿರುಹೊತ್ತಿಗೆ ಬಿಡುಗಡೆ ಮಾಡಿದ್ದಾರೆ. ವಿಪರ್ಯಾಸ ಎಂದರೆ ಕಳೆದ ಮೂರು ವರ್ಷಗಳಿಂದ ಇವರು ಆಡಳಿತದಲ್ಲಿದ್ದು, ಹಿಂದಿನ ಸರ್ಕಾರದ ದುರಾಡಳಿತದ ಬಗ್ಗೆ ಪುಸ್ತಕ ಬಿಡುಗಡೆ ಮಾಡುತ್ತಾರೆ. ವಿರೋಧ ಪಕ್ಷದ ನಾಯಕರು, ಕಾಂಗ್ರೆಸ್ ಅಧ್ಯಕ್ಷರು ಹಳೇ ಪ್ರಕರಣ ತನಿಖೆ ಮಾಡಿ ಎಂದು ಬಹಿರಂಗವಾಗಿ ಹೇಳಿದ್ದು, ತನಿಖೆ ಮಾಡಿ. ನಮ್ಮ ಕಾಲದ ಹಗರಣ ಸೇರಿಸಿ ನಿಮ್ಮ ಕಾಲದ ಹಗರಣವನ್ನು ಹಾಲಿ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಿ ಎಂದು ಒತ್ತಾಯಿಸಿದರು. 

ಬಿಜೆಪಿಯವರು ನಮ್ಮ ಮೇಲೆ ಕೇಸು ಹಾಕುತ್ತಿದ್ದಾರೆ. ಒಂದು ಕ್ಯೂಆರ್ ಕೋಡಿಗೆ ಸರ್ಕಾರ ಅಲ್ಲಾಡುತ್ತಿದೆ ಎಂದರೆ ಇವರ ಗಟ್ಟಿತನ ನೋಡಿ. ಈ ಕ್ಯೂಆರ್ ಕೋಡ್ ಈ ಸರ್ಕಾರದ ರೇಟ್ ಕಾರ್ಡ್ ಅನ್ನು ತೋರಿಸುತ್ತದೆ. ಸಿಎಂ ಹುದ್ದೆಯಿಂದ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆವರೆಗೂ ನಿಗದಿ ಮಾಡಿರುವ ದರವನ್ನು ತಿಳಿಸುತ್ತದೆ. ಇದು ಕಾಂಗ್ರೆಸ್ ರೇಟ್ ಕಾರ್ಡ್ ಅಲ್ಲ. ಇದನ್ನು ನೀಡಿರುವುದು ಬಿಜೆಪಿ ನಾಯಕರು ಹಾಗೂ ಮಾಧ್ಯಮಗಳ ವರದಿಗಳಲ್ಲಿ ಬಂದಿರುವ ರೇಟ್ ಕಾರ್ಡ್ ಗಳು.

ಬಿಜೆಪಿಯ ಜಾತಿ ರಾಜಕಾರಣ ಅವರ ಹತಾಶೆಗೆ ಸಾಕ್ಷಿಯೇ ಎಂದು ಕೇಳಿದ ಪ್ರಶ್ನೆಗೆ, ‘ಜನರ ಆಕ್ರೋಶದಿಂದ ಈ ಸರ್ಕಾರವನ್ನು ರಕ್ಷಿಸಿಕೊಳ್ಳಲು ಇವರ ಕೊನೆಯ ಪ್ರಯತ್ನ ಇದಾಗಿದೆ. ಜನೋತ್ಸವ 2 ಬಾರಿ ರದ್ದಾಗಿದ್ದು ಜನಾಕ್ರೋಶದಿಂದ. ನಂತರ ಜನಸ್ಪಂದನ ಮಾಡಿದ್ದು ಖಾಲಿ ಕುರ್ಚಿಗಳ ಉತ್ಸವವಾಗಿತ್ತು’ ಎಂದರು.

40% ವಿಚಾರವಾಗಿ ಒಂದು ಹೆಸರು ಹೇಳಲಿ ಎಂದು ಸಿಎಂ ಹೇಳಿರುವ ಬಗ್ಗೆ ಕೇಳಿದಾಗ, ‘ಅವರ ಪ್ರಕಾರ ಕಾಂಗ್ರೆಸ್ ಅವರು ಸುಳ್ಳು ಹೇಳುತ್ತಿದ್ದರೆ, ಐಪಿಎಸ್ ಅಧಿಕಾರಿ ಬಂಧನ ಆಗಿದ್ದು ಯಾಕೆ? ಇಡಿ ಅವರು ಹೈಕೋರ್ಟ್ ನಲ್ಲಿ ಮನವಿ ಸಲ್ಲಿಸಿ ಪಿಎಂಎಲ್ಎ ಕಾಯ್ದೆ ಅಡಿ ವಿಚಾರಣೆಗೆ ಮನವಿ ಮಾಡಿರುವುದೇಕೆ? ದಾಖಲೆ ಬೇಕಾದರೆ, ಇವರು ಮಾಡುವ ಭ್ರಷ್ಟಾಚಾರಕ್ಕೆ ರಶೀದಿ ನೀಡುತ್ತಾರಾ? ಕನಕಗಿರಿ ಶಾಸಕ, ಗುತ್ತಿಗೆದಾರರ ಸಂಘದ ಅಧ್ಯಕ್ಷರು ಲಿಖಿತ ದೂರು ನೀಡಿದ್ದಾರೆ. ಇದಕ್ಕಿಂತ ಸಾಕ್ಷಿ ಬೇರೇನು ಬೇಕು?’ ಎಂದರು.

ಎಸ್ ಡಿಪಿಐ ಹಾಗೂ ಪಿಎಫ್ಐ ಅನ್ನು ಕಾಂಗ್ರೆಸ್ ಪ್ರೋತ್ಸಾಹಿಸಿದೆ ಎಂಬ ಬಿಜೆಪಿ ವಾದದ ಬಗ್ಗೆ ಕೇಳಿದಾಗ, ‘ಕೋಮುಸಂಘರ್ಷ ಹಾಗೂ ಕೋಮು ಹತ್ಯೆ ವಿಚಾರವಾಗಿ ಎಷ್ಟು ಪ್ರಕರಣಗಳನ್ನು ಕಾಂಗ್ರೆಸ್ ಸರ್ಕಾರ ಹಿಂಪಡೆದಿತ್ತು ಎಂದು ನಾನು ಈಗಾಗಲೇ ಪ್ರಶ್ನೆ ಕೇಳಿದ್ದೇನೆ. ಆದರೆ ಅವು ಉತ್ತರಿಸುತ್ತಿಲ್ಲ. ಅವರು ಒಂದು ಪ್ರಕರಣ ತಿಳಿಸಲಿ. ಕೇಂದ್ರದಲ್ಲಿ ಬಿಜೆಪಿ ಬಂದು 8 ವರ್ಷವಾಗಿದೆ, ರಾಜ್ಯದಲ್ಲಿ 3 ವರ್ಷವಾಗಿದೆ. ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಸಂಸತ್ತಿನಲ್ಲಿ ಪಿಎಫ್ ಐ ಸಂಘಟನೆ ನಿಷೇಧದ ಬಗ್ಗೆ ಪ್ರಶ್ನೆ ಮಾಡಿದಾಗ ಸರ್ಕಾರ ತನ್ನ ಉತ್ತರದಲ್ಲಿ ಕರ್ನಾಟಕ ರಾಜ್ಯ ಸರ್ಕಾರದಿಂದ ಈ ಸಂಘಟನೆಗಳ ನಿಷೇಧಕ್ಕೆ ಯಾವುದೇ ಪ್ರಸ್ತಾವನೆ ಸಲ್ಲಿಸಿಲ್ಲ ಎಂದು ತಿಳಿಸಲಾಗಿದೆ. ಹಾಗಿದ್ದರೆ ಇವರು ಏನು ಮಾಡುತ್ತಿದ್ದಾರೆ? ಈ ಸಂಘಟನೆಗಳನ್ನು ನಾವು ಸಾಕಿದ್ದೇವೆ ಎನ್ನುವುದಾದರೆ ಆರ್ ಎಸ್ಎಸ್ ಪ್ರಮುಖರಾದ ಸತ್ಯಜಿತ್ ಸೂರತ್ಕಲ್ ಅವರು ಸಂದರ್ಶನವೊಂದರಲ್ಲಿ ಈ ಪಾಪದ ಕೂಸು ಬಿಜೆಪಿಯದ್ದು. ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸಲು ಈ ಸಂಘಟನೆಗಳಿಗೆ ಆರ್ಥಿಕ ನೆರವು ನೀಡುತ್ತಿದ್ದಾರೆ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಅವರ ಈ ಮಾತನ್ನು ಒಬ್ಬ ಬಿಜೆಪಿ ನಾಯಕ ತಿರಸ್ಕರಿಸಿದ್ದಾರಾ? ಯಾಕೆ ತಿರಸ್ಕರಿಸಿಲ್ಲ? ಈ ವಿಚಾರದ ಬಗ್ಗೆಯೂ ಚರ್ಚೆ ಮಾಡಬೇಕಾ ಮಾಡಿ. ಎಲ್ಲ ತನಿಖಾ ಸಂಸ್ಥೆಗಳು ನಿಮ್ಮ ನಿಯಂತ್ರಣದಲ್ಲಿದ್ದು, ತನಿಖೆ ಮಾಡಿ. ಎರಡಕ್ಕೂ ನಾವು ಸಿದ್ಧ. ಆದರೆ ಜನರನ್ನು ಮೂರ್ಖರೆಂದು ದಾರಿತಪ್ಪಿಸುವ ಪ್ರಯತ್ನ ಮಾಡಬೇಡಿ’ ಎಂದು ಸವಾಲೆಸೆದರು. 

ಖರ್ಗೆ ಅವರ ಹೆಸರು ಪ್ರಸ್ತಾಪಿಸಿ ಆರ್ಥಿಕವಾಗಿ ಸಬಲರಾಗಿರುವ ದಲಿತರ ಮೀಸಲಾತಿ ತೆಗೆದುಹಾಕಬೇಕು ಎಂಬ ಈಶ್ವರಪ್ಪ ಅವರ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಈಶ್ವರಪ್ಪನವರು ಎಷ್ಟು ಬಾರಿ ಶಾಸಕರಾಗಿದ್ದಾರೆ? ಇದನ್ನು ಕೇವಲ ಒಂದು ಸಮುದಾಯಕ್ಕೆ ಯಾಕೆ ಸೀಮಿತ ಮಾಡುತ್ತೀರಾ? ಅವರ ಪುತ್ರ ಕೂಡ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿದ್ದರಲ್ಲವೇ? ಎಲ್ಲ ಪಕ್ಷದಲ್ಲೂ ಎಲ್ಲಾ ಸಮುದಾಯದ ಶ್ರೀಮಂತರು ಇರುತ್ತಾರೆ. ಬಡತನ ಎಲ್ಲ ಸಮುದಾಯದಲ್ಲಿದ್ದು, ಬಿಜೆಪಿಯವರು ನಮ್ಮಲ್ಲಿ ಎಪಿಎಲ್ ಕಾರ್ಡುದಾರರಿಗೆ ಟಿಕೆಟ್ ನೀಡುವುದಿಲ್ಲ ಎಂಬ ನಿರ್ಧಾರಕ್ಕೆ ಬರಲಿ ನೋಡೋಣ. ಮಾತೆತ್ತಿದ್ದರೆ ವಂಶ ರಾಜಕಾರಣದ ಬಗ್ಗೆ ಮಾತನಾಡುವ ಬಿಜೆಪಿ ಕಾಂಗ್ರೆಸ್ ಪಕ್ಷದ ಬದಲು ತಮ್ಮ ಪಕ್ಷದಲ್ಲಿನ ವಂಶರಾಜಕಾರಣ ನೋಡಲಿ. ಶಿವಮೊಗ್ಗದಲ್ಲಿ ಒಂದೇ ಕುಟುಂಬದಿಂದ ಮೂವರು ಸಿದ್ಧರಾಗುತ್ತಿದ್ದಾರೆ. ಈ ಮಾತನ್ನು ಅವರು ಯಡಿಯೂರಪ್ಪನವರ ಮುಂದೆ ಮಾತನಾಡಲಿ. ಜಗದೀಶ್ ಶೆಟ್ಟರ್ ಅವರ ಸಹೋದರ ಪರಿಷತ್ ಸದಸ್ಯರಲ್ಲವೇ?

ಈಶ್ವರಪ್ಪ ಅವರಿಗೂ ಮೀಸಲಾತಿ ಇದೆ. ಮೀಸಲಾತಿ ಬಗ್ಗೆ ಹೋರಾಟ ಮಾಡುತ್ತಿದ್ದಾರೆ ಅಲ್ಲವೇ, ಈಶ್ವರಪ್ಪ ಅವರ ರಾಯಣ್ಣ ಬ್ರಿಗೇಡ್ ಏನಾಯ್ತು? ಅವರು ತಮಗೆ ಬೇಕಾದಾಗ ಜಾತಿ, ಮೀಸಲಾತಿ ವಿಚಾರಗಳನ್ನು ಬಳಸಿಕೊಳ್ಳುತ್ತಾರೆ. ಅವರು ಕೇವಲ ಒಂದು ಸಮುದಾಯದ ಮೀಸಲಾತಿ ಬಗ್ಗೆ ಮಾತನಾಡುವುದೇಕೆ. ಪ್ರತಾಪ್ ಸಿಂಹ, ಈಶ್ವರಪ್ಪ, ಸುನಿಲ್ ಸೇರಿದಂತೆ ಅವರ ನಾಯಕರಿಂದ ದಲಿತರ ಬಗ್ಗೆ ಮಾತನಾಡಿಸುತ್ತಾರೆ. ನನ್ನನ್ನು ಅವರು ಕಾನ್ವೆಂಟ್ ದಲಿತ ಎನ್ನುತ್ತಾರೆ. ನಾನು ಪ್ರಜ್ಞಾವಂತ ದಲಿತ. ಅದಕ್ಕೆ ಹೆಮ್ಮೆ ಇದೆ. ಇದು ಅವರ ಮನಸ್ಥಿತಿಗೆ ಸಾಕ್ಷಿ. ಅವರು ಈ ವಿಚಾರವಾಗಿ ಚಿಕ್ಕ ವಯಸ್ಸಿನಿಂದಲೇ ತರಬೇತಿ ಪಡೆದಿದ್ದು, ಈ ಮನಸ್ಥಿತಿ ಬದಲಾವಣೆ ಬದಲಾಗುವುದು ಕಷ್ಟ. ಅವರು ಯಾವುದೇ ಹಿಂದುಳಿದ, ಅಲ್ಪಸಂಖ್ಯಾತ, ದಲಿತ ವರ್ಗದವರು, ಬಡವರ ಏಳಿಗೆಯ ವಿರುದ್ಧ ನಿಂತಿರುತ್ತಾರೆ. ಇವರು ಯಾವುದಾದರೂ ಒಂದು ನೀತಿ ತೋರಿಸಲಿ.

ಈ ಸರ್ಕಾರ ಎಸ್ ಸಿಪಿ ಟಿಎಸ್ಪಿ ಹಣವನ್ನು ಬೇರೆ ವಿಚಾರವಾಗಿ ಬಳಸಿಕೊಂಡಿದ್ದಾರೆ. ಇವರು ದಲಿತರ ಪರವಾಗಿದ್ದಾರಾ? ಇವರಿಗೆ ಉತ್ತರ ಕೊಡಲು ಆಗದಿದ್ದಾಗ ವೈಯಕ್ತಿಕ ತೇಜೋವಧೆ ಮಾಡುತ್ತಾರೆ. ಇಂತಹ ಪ್ರಯತ್ನಗಳನ್ನು ಬಹಳಷ್ಟು ನೋಡಿದ್ದೇವೆ. ನಾವು ಚುನಾಯಿತ ಪ್ರತಿನಿಧಿಗಳು. ನಮ್ಮ ವಿರುದ್ಧ ಬೇರೆ ಪಕ್ಷದವರೂ ನಿಂತಿರುತ್ತಾರೆ. ಹೀಗಿದ್ದರೂ ಜನರು ನಮ್ಮನ್ನು ಆರಿಸಿ ಕಳುಹಿಸುತ್ತಾರೆ. 
ನಮ್ಮ ದೇಶದಲ್ಲಿನ ಪ್ರಜಾಪ್ರಭುತ್ವ ಅಷ್ಟು ಪ್ರಬುದ್ಧವಾಗಿದೆಯೇ? ಮೊನ್ನೆ ಮಾಲೂರಿನಲ್ಲಿ ದಲಿತ ಹುಡುಗ ದೇವರನ್ನು ಮುಟ್ಟಿದ್ದಕ್ಕೆ ದಂಡ ಬಾಕಿ ಬಹಿಷ್ಕಾರ ಹಾಕುತ್ತಾರೆ. ಬಿಜೆಪಿ ಸಂಸದರಿಗೆ ಹಾಲಿ ಸಚಿವರಿಗೆ ಗೊಲ್ಲರಹಟ್ಟಿಯಲ್ಲಿ ದೇವಾಲಯಕ್ಕೆ ಪ್ರವೇಶ ನೀಡಲಿಲ್ಲ. ಯಾವುದೇ ಪಕ್ಷದಲ್ಲಿ ಯಾವುದೇ ಸಮುದಾಯದ ನಾಯಕ ನಾಲ್ಕೈದು ಬಾರಿ ಗೆದ್ದಿರುವವರು ಬೇರೆ ಯುವಕರಿಗೆ ಅವಕಾಶ ನೀಡಬೇಕು ಎಂದು ಹೇಳುವುದರಲ್ಲಿ ತಪ್ಪಿಲ್ಲ. ಆದರೆ ಕೇವಲ ದಲಿತರು ಮಾತ್ರ ಬಿಟ್ಟುಕೊಡಬೇಕು ಎನ್ನುವ ನೀವು ಯಾಕೆ ಬೇರೆಯವರಿಗೆ ಅವಕಾಶ ನೀಡುತ್ತಿಲ್ಲ. ಇದು ಅವರ ಮನುಸ್ಮೃತಿ ಮನಸ್ಥಿತಿಗೆ ಸಾಕ್ಷಿ’ ಎಂದು ಟೀಕಿಸಿದರು.

ಪೇ ಸಿಎಂ ಅಭಿಯಾನ ರಾಜ್ಯದ್ಯಂತ ಮುಂದುವರಿಯುವುದೇ ಎಂದು ಕೇಳಿದಾಗ, ‘ರಾಜ್ಯದ್ಯಂತ ಈ ಅಭಿಯಾನ ಮುಂದುವರಿಯುತ್ತಿದ್ದು, ನೆಲಮಂಗಲ, ಯಾದಗಿರಿ, ಕೊಡಗಿನಲ್ಲಿ ಪ್ರಕರಣಗಳು ದಾಖಲಾಗಿವೆ. ಇವರು ಒಂದು ಕ್ಯೂಆರ್ ಕೋಡ್ ಪೋಸ್ಟರ್ ಗೆ ಹೆದರಿದರೆ ಹೇಗೆ? ಇದು ಅವರೇ ಕೊಟ್ಟಿರುವ ಮಾಹಿತಿ’ ಎಂದು ತಿಳಿಸಿದರು. 

ಬಿಜೆಪಿಯವರ ಕೈ ಪೇ ಹಾಗೂ ರೈತರ ಪೇ ಫಾರ್ಮರ್ ಅಭಿಯಾನ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಬಿಜೆಪಿಯವರು ಏನಾದರೂ ಮಾಡಲಿ. ಆದರೆ ಅಂತಿಮವಾಗಿ ಸರ್ಕಾರ ಮಾಡುತ್ತಿರುವವರು ಅವರೇ ಅಲ್ಲವೇ? ರೈತರ ವಿಮೆ ಎಷ್ಟು ಬಂದಿದೆ? ಈ ವಿಚಾರವಾಗಿ ಅಧಿವೇಶನದಲ್ಲಿ ಪ್ರಶ್ನೆ ಕೇಳಿದರೆ ಉಡಾಫೆ ಉತ್ತರ ನೀಡಿದ್ದಾರೆ. ಪೇ ಫಾರ್ಮರ್, ಪೇ ಟುದ ಫಾರ್ಮರ್ ಆಗಲೇ ಬೇಕು. ಅಮಿತ್ ಶಾ ಅವರು ರಾಜ್ಯಕ್ಕೆ ಬಂದಾಗ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಅವರ ಸೇರಿದಂತೆ ರಾಜ್ಯದಿಂದ ಆಯ್ಕೆಯಾಗಿರುವ 26 ಸಂಸದರಲ್ಲಿ ಒಬ್ಬರಾದರೂ ನಮಗೆ ಪ್ರಾಕೃತಿಕ ವಿಕೋಪದಿಂದ ಆಗಿರುವ ನಷ್ಟದ ಬಗ್ಗೆ ತಿಳಿಸಿ ರಾಜ್ಯಕ್ಕೆ ಹೆಚ್ಚುವರಿಯಾಗಿ ಅನುದಾನ ನೀಡಿ ಎಂದು ವರದಿ ನೀಡಿದ್ದಾರಾ? ಯುವಕರು ನಮಗೆ ಉದ್ಯೋಗ ಸಿಗುತ್ತಿಲ್ಲ, ರೈತರು ತಮ್ಮ ಬೆಳೆ ನಾಶಕ್ಕೆ ಪರಿಹಾರ ನೀಡಿ ಎಂದು ಕೇಳುತ್ತಿದ್ದಾರೆ. ಸರ್ಕಾರ ಮೊದಲು ಅವರಿಗೆ ಉತ್ತ ನೀಡಿ. ಮನೆ ಕಟ್ಟುವಲ್ಲಿ ನಿಮ್ಮ ಸರ್ಕಾರ ಶೇ.15ರಷ್ಟು ಮಾತ್ರ ಸಾಧನೆ ಮಾಡಿದೆ ಎಂದು ಸಿಎಜಿ ವರದಿ ಹೇಳುತ್ತಿದೆ. ಅನ್ನಭಾಗ್ಯ ಯೋಜನೆ ಸೇರುತ್ತಿಲ್ಲ, ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದ್ದೀರಿ. ಬೆಂಗಳೂರಿನಲ್ಲಿ ಬಂಡವಾಳ ಹೂಡಿಕೆದಾರರು ವಾಪಸ್ ಹೋಗುವ ಬೆದರಿಕೆ ಹಾಕುತ್ತಿದ್ದಾರೆ. ಮೊದಲು ಕರ್ನಾಟಕ ಜನರಿಗೆ ಉತ್ತರ ನೀಡಿ ನಂತರ ಅವರು ಯಾವುದೇ ಅಭಿಯಾನ ಮಾಡಲಿ’ ಎಂದು ತಿರುಗೇಟು ಕೊಟ್ಟರು.

ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವಂತೆ ಆರೆಸ್ಸೆಸ್ ನಿಂದ ಸಂತೋಷ್ ಅವರನ್ನು ನಿಯೋಜಿಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಯಾವುದೇ ಸಂಘಟನೆಯಿಂದ ಯಾರೇ ನಿಯೋಜನೆಗೊಂಡರೂ ಅವರು ಸರ್ಕಾರದ ಭಾಗವಲ್�

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News